

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಬಹಳ ವರ್ಷಗಳ ಹಿಂದೆ ಗ್ರಾಮದ ನೂರಾರು ಹೈನುಗಾರರಿಗೆ ಉಪಯೋಗಿಯಾಗಿದ್ದ ಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಶು ಚಿಕಿತ್ಸಾಲಯವು ಸುಸಜ್ಜಿತವಾಗಿ ನಿರ್ಮಿಸಲಾಗಿದ್ದರೂ ಪ್ರಸ್ತುತ ಕಾಯಂ ವೈದ್ಯರಿಲ್ಲದ ಪರಿಣಾಮ ಪಾಳು ಬಿದ್ದಿದೆ.
ಈ ಪಶು ಚಿಕಿತ್ಸಾಯಲಯ ವ್ಯಾಪ್ತಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹೈನುಗಾರರಿದ್ದು, ತಮ್ಮ ಜಾನುವಾರುಗಳಿಗೆ ಅನಾರೋಗ್ಯ ಉಂಟಾದ ಸಂದರ್ಭ ತುರ್ತು ಚಿಕಿತ್ಸೆ ದೊರೆಯದೆ ಪರದಾಡುತ್ತಿದ್ದಾರೆ. ಇಲ್ಲಿಗೆ ಬೇರೆ ಗ್ರಾಮದ ಪಶುಚಿಕಿತ್ಸಾಲಯದ ವೈದ್ಯರು ಅಪರೂಪಕ್ಕೆ ಬರುತ್ತಿದ್ದು, ತುರ್ತು ಸೇವೆ ದೊರೆಯದೆ ಇರುವುದರಿಂದ ಹೈನುಗಾರರಿಗೆ ದೂರದ ಪಶುಚಿಕಿತ್ಸಾ ಕೇಂದ್ರದ ಅವಲಂಬನೆ ಅನಿವಾರ್ಯವಾಗಿದೆ.
ಮುಂಡ್ಕೂರು, ಮುಲ್ಲಡ್ಕ, ಸಚ್ಚೇರಿಪೇಟೆ, ಸಂಕಲಕರಿಯ,ಇನ್ನಾ ಭಾಗದಲ್ಲಿ ಅತಿ ಹೆಚ್ಚು ಹೈನುಗಾರರಿದ್ದು, ಕಾಯಂ ವೈದ್ಯರ ನೇಮಕಾತಿ ಕುರಿತು ರಾಜ್ಯ ಸರ್ಕಾರ ಶೀಘ್ರವೇ ನಿರ್ಣಯ ಕೈಗೊಂಡು ನೇಮಕಾತಿ ನಡೆಸಬೇಕೆಂದು ಈ ಭಾಗಗಳ ಜನತೆ ಆಗ್ರಹಿಸಿದ್ದಾರೆ.
2009ರಲ್ಲಿ ಅಂದಿನ ಶಾಸಕ ಗೋಪಾಲ್ ಭಂಡಾರಿ ಪಶು ಚಿಕಿತ್ಸಾಲಯ ಉದ್ಘಾಟಿಸಿದ್ದು, ಸುಸಜ್ಜಿತವಾಗಿ ನಿರ್ಮಿಸಲಾಗಿತ್ತು. ಆದರೆ ಸೂಕ್ತ ನಿರ್ವಹಣೆ ಇಲ್ಲದಿರುವುದರಿಂದ ಕಟ್ಟಡದೊಳಗೆ ಗಿಡ, ಹುಲ್ಲು ಬೆಳೆದುಕೊಂಡಿದ್ದು, ಬಾವಲಿಗಳು ಇತರ ಜಂತುಗಳ ವಾಸಸ್ಥಾನವಾಗಿದೆ. ಮೇಲ್ನೋಟಕ್ಕೆ ಕಟ್ಟಡ ಪಾಳು ಬಿದ್ದು ಭೂತ ಬಂಗಲೆಯಂತೆ ಗೋಚರಿಸುತ್ತಿದೆ.
ಮುಂಡ್ಕೂರು ಪಶುಚಿಕಿತ್ಸಾಲಯಕ್ಕೆ ಬರುವ ಪಶುವೈದ್ಯರಿಗೆ ಮೂರು ಹೆಚ್ಚುವರಿ ಪಶುಚಿಕಿತ್ಸಾಲಯಗಳ ಜವಾಬ್ದಾರಿ ನೀಡಲಾಗಿದ್ದು, ಕಾರ್ಯೋತ್ತಡಗಳಿಂದ ಕರ್ತವ್ಯ ನಿರ್ವಹಿಸಲು ಕಷ್ಟವಾಗುತ್ತಿದೆ. ಪ್ರತಿ ಗುರುವಾರ ವೈದ್ಯರು ಇಲ್ಲಿ ಲಭ್ಯವಿದ್ದು, ತುರ್ತು ಕರೆ ಬಂದರೆ ಚಿಕಿತ್ಸಾಲಯಕ್ಕೆ ಬೀಗವೇ ಗತಿ. ಈ ಹಿನ್ನೆಲೆಯಲ್ಲಿ ಕಾಯಂ ವೈದ್ಯರ ನೇಮಕಾತಿಗೆ ಊರವರು ಒತ್ತಾಯಿಸಿದ್ದಾರೆ.
ಪಶು ವೈದ್ಯರ ಕೊರತೆಯಿಂದ ಹೈನುಗಾರರಿಗೆ ಸೂಕ್ತ ಸೇವೆ ದೊರೆಯುತ್ತಿಲ್ಲ. ದಿನವಿಡೀ ಆರೋಗ್ಯ ಕೇಂದ್ರ ಮುಚ್ಚಿರುತ್ತದೆ. ವಾರದಲ್ಲಿ ಒಂದು ದಿನ ಮಾತ್ರ ವೈದ್ಯರ ಸೇವೆ ಲಭ್ಯವಿದ್ದು, ಹೈನುಗಾರರು ತುರ್ತು ಚಿಕಿತ್ಸೆಗೆ ದೂರದ ಪಶು ಕೇಂದ್ರದ ವೈದ್ಯರನ್ನು ಅವಲಂಬಿಸಬೇಕಾಗಿದೆ. -ಪ್ರಭಾಕರ್, ಸ್ಥಳೀಯ ಕೃಷಿಕ. ಕೆಲಸದ ಒತ್ತಡದಿಂದ ಮೂರು ಆರೋಗ್ಯ ಕೇಂದ್ರಗಳಲ್ಲಿ ಒಬ್ಬರೇ ಕೆಲಸ ನಿರ್ವಹಿಸಲು ಕಷ್ಟ ಸಾಧ್ಯ. ಬೆಳ್ಮಣ್ ಪಶು ಆರೋಗ್ಯ ಕೇಂದ್ರದಲ್ಲಿ ಕಾಯಂ ಆಗಿ ಕೆಲಸ ನಿರ್ವಹಿಸುತ್ತಿದ್ದು, ವಾರದಲ್ಲಿ ಎರಡು ದಿವಸ ಬೋಳ ಹಾಗೂ ಗುರುವಾರ ಒಂದು ದಿವಸ ಮುಂಡ್ಕೂರು ಕೇಂದ್ರಕ್ಕೆ ಭೇಟಿ ನೀಡುತ್ತಿದ್ದೇನೆ. ಕಾಯಂ ವೈದ್ಯರ ನೇಮಕವಾಗಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆ. ಆದರೆ ಇದು ಸರ್ಕಾರಿ ಮಟ್ಟದಲ್ಲಿ ನಡೆಯಬೇಕಾಗಿದೆ. -ಬಿ.ಪಿ ನದಾಫ್, ಪಶುವೈದ್ಯ. ಮುಂಡ್ಕೂರು. https://www.vijayavani.net/balakrishna-murder-case https://www.vijayavani.net/various-works-of-kapu-hosmarigudi