

ಕುಶಾಲನಗರ:
ದೃಢತೆ, ಅನುಭವ, ಸಾಧಿಸುವ ಛಲವಿರುವ ಮಹಿಳೆಯರಿಗೆ ಇಂದಿನ ಆಧುನಿಕ ಜಗತ್ತಿನಲ್ಲಿ ಅವಕಾಶಗಳು ಮುಕ್ತವಾಗಿದ್ದು ಇದನ್ನು ಬಳಸಿಕೊಳ್ಳುವ ಮೂಲಕ ಸ್ವಾವಲಂಬಿಗಳಾಗಬೇಕು ಎಂದು ಎಸ್‌ಬಿಐ ನಿವೃತ್ತ ಅಧಿಕಾರಿ ಸೂದನ ರತ್ನಾವತಿ ಹೇಳಿದರು. ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ವಿಜಯವಾಣಿ ದಿನಪತ್ರಿಕೆ ವತಿಯಿಂದ ಗುರುವಾರ ಇಲ್ಲಿನ ಅನುಗ್ರಹ ಕಾಲೇಜಿನಲ್ಲಿ ಏರ್ಪಡಿಸಿದ್ದ ಪದವೀಧರ ಯುವತಿಯರಿಗೆ ಉದ್ಯೋಗವಕಾಶಗಳು ವಿಷಯದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಈ ದಿನಗಳಲ್ಲಿ ಮಹಿಳೆಯರಿಗೆ ಸಿಗುತ್ತಿರುವ ಅವಕಾಶಗಳಿಗೆ ಆಕಾಶವೇ ಮಿತಿ ಆಗಿದೆ. ಆದರೆ ಇದನ್ನು ಬಳಸಿಕೊಳ್ಳುವಲ್ಲಿ ಮಹಿಳಾ ಸಮುದಾಯ ಹಿಂದೆ ಬಿದ್ದಿದೆ. ಬಡತನ, ಸಾಮಾಜಿಕ ಸಮಸ್ಯೆಗಳು ಸೇರಿ ಹಲವು ಕಾರಣಗಳನ್ನು ಕೊಟ್ಟು ಅವಕಾಶಗಳನ್ನು ಕೈಚೆಲ್ಲುವುದೇ ಅಧಿಕವಾಗಿದೆ. ಜೀವನಕ್ಕೆ ಒಂದು ಗುರಿ ಇಟ್ಟುಕೊಳ್ಳಬೇಕು. ಆ ಗುರಿ ಸಾಧಿಸುವ ನಿಟ್ಟಿನಲ್ಲಿ ಅವಿರತ ಶ್ರಮ ಹಾಕಬೇಕು. ವಿದ್ಯೆ ಕಲಿತರೆ ಸಾಲದು, ಜ್ಞಾನ ವೃದ್ಧಿ ಮಾಡಿಕೊಳ್ಳಬೇಕು. ಮೊಬೈಲ್‌ನಲ್ಲೇ ಎಲ್ಲಾ ಸಿಗುತ್ತದೆ ಎಂದು ಕುಳಿತರೆ ಕಣ್ಣು ಹಾಳಾಗುತ್ತದೆಯೇ ವಿನಃ ಬೇರೆ ಯಾವುದೇ ಪ್ರಯೋಜನ ಆಗುವುದಿಲ್ಲ. ಇದರ ಬದಲು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಒಳ್ಳೆಯ ಪುಸ್ತಕಗಳನ್ನು ಓದುವುದರಿಂದ ಆತ್ಮವಿಶ್ವಾಸ ವೃದ್ಧಿಸುತ್ತದೆ.
ಬ್ಯಾಂಕಿಂಗ್ ವಲಯದಲ್ಲಿ ಮೊದಲು ಸೀಮಿತ ಅವಕಾಶಗಳಿದ್ದವು. ಈಗ ಬೇಕಾದಷ್ಟು ಉದ್ಯೋಗವಕಾಶ ಲಭ್ಯವಿದೆ. ಬ್ಯಾಂಕಿಂಗ್ ಪರೀಕ್ಷೆ ಪಾಸ್ ಮಾಡುವುದು ಕಷ್ಟವಲ್ಲ. ಕ್ರಮಬದ್ಧ ಅಭ್ಯಾಸದಿಂದ ಸುಲಭವಾಗಿ ಬ್ಯಾಂಕ್ ಪರೀಕ್ಷೆ ಉತ್ತೀರ್ಣ ಆಗಬಹುದು. ಇದಕ್ಕಾಗಿ ಬೇಕಾದಷ್ಟು ಕೋಚಿಂಗ್ ಕ್ಲಾಸ್‌ಗಳು, ಆನ್‌ಲೈನ್ ಕ್ಲಾಸ್‌ಗಳೂ ಲಭ್ಯವಿದೆ. ಇವುಗಳಲ್ಲೂ ಮೋಸದ ಸಾಧ್ಯತೆ ಇರುವುದರಿಂದ ಕೋಚಿಂಗ್ ಸೆಂಟರ್‌ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ಅಗತ್ಯ.
ಗೃಹಿಣಿ ಆಗಿದ್ದುಕೊಂಡೇ ಆರ್ಥಿಕವಾಗಿ ಸ್ವಾವಲಂಬಿ ಆಗುವ ದಾರಿಗಳು ಸಾಕಷ್ಟಿವೆ.
ಸ್ವಸಹಾಯ ಸಂಘಗಳ ಮೂಲಕ ನೆರವು ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಆಗಬಹುದು. ಆದರೆ ಇತ್ತೀಚೆಗೆ ಸ್ವ-ಸಹಯ ಸಂಘಗಳು ಲೇವಾದೇವಿ ವ್ಯವಹಾರದ ಕೇಂದ್ರವಾಗುತ್ತಿರುವುದು ದುರದೃಷ್ಟಕರ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪೋಷಕರಿಗೆ ತಿಳುವಳಿಕೆ ಮೂಡಿಸಬೇಕು.
ಕೃಷಿಯಲ್ಲೂ ಗೃಹಿಣಿಯರಿಗೆ ಅವಕಾಶಗಳಿವೆ. ಸಾವಯವ ಉತ್ಪನ್ನಗಳಿಗೆ ಬೇಡಿಕೆ ಇರುವುದರಿಂದ
ನೈಸರ್ಗಿಕ ಕೃಷಿಗೆ ಆದ್ಯತೆ ಕೊಡಬಹುದು. ಹವ್ಯಾಸವಾಗಿರುವ ಪುಷ್ಪ ಕೃಷಿಯನ್ನು ವಾಣಿಜ್ಯಿಕವಾಗಿಯೂ ವಿಸ್ತರಿಸಬಹುದಾದ ಸಾಧ್ಯತೆಗಳೂ ಇರುತ್ತದೆ. ಓದಿದ ಶಾಲೆಗೆ ಮತ್ತು ಬೆಳೆದ ಊರಿಗೆ ಹೆಮ್ಮೆ ತರುವ ಕೆಲಸ ಹೆಣ್ಣುಮಕ್ಕಳು ಮಾಡಬೇಕು ಎಂದರು.
ಸುಳ್ಯದಂತಹ ಗ್ರಾಮೀಣ ಭಾಗದಲ್ಲಿ ಕುರುಂಜಿ ವೆಂಕಟರಮಣ ಗೌಡ ಅವರು ಮಾಡಿದ ಶೈಕ್ಷಣಿಕ ಕ್ರಾಂತಿ ಆ ಭಾಗದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಳಕ್ಕೆ ಯಾವ ರೀತಿಯಲ್ಲಿ ಕಾರಣವಾಯಿತು ಎಂದು ವಿವರಿಸಿದ ರತ್ನಾವತಿ, ಅಂದು ಹುಟ್ಟಿಕೊಂಡ ಶಿಕ್ಷಣ ಸಂಸ್ಥೆಗಳಿಂದಾಗಿಯೇ ತಮ್ಮಂತಹ ಕುಗ್ರಾಮದಿಂದ ಬಂದ ಎಷ್ಟೋ ಮಂದಿ ಇಂದು ನೆಮ್ಮದಿಯ ಬದುಕು ಕಟ್ಟಿಕೊಳ್ಳುವಂತಾಗಿದೆ ಎಂದು ಇದೇ ಸಂದರ್ಭ ಸ್ಮರಿಸಿಕೊಂಡರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕವಯತ್ರಿ ಲೀಲಾಕುಮಾರಿ ತೊಡಿಕಾನ ಮಾತನಾಡಿ ಶಿಕ್ಷಣ ಪಡೆದವರ ಸಂಖ್ಯೆ ಸಮಾಜದಲ್ಲಿ ಎಷ್ಟೇ ಹೆಚ್ಚಾಗಿದ್ದರೂ, ಸಮಾಜ ಎಷ್ಟೇ ಮುಂದುವರಿದಿದ್ದರೂ ಮಹಿಳೆಯರ ಮೇಲಿನ ದೌರ್ಜನ್ಯ ಮಾತ್ರ ಇನ್ನೂ ಇಳಿಮುಖ ಆಗಿಲ್ಲ. ಇದರ ಬದಲಿಗೆ ರೂಪಾಂತರಗೊಂಡು ಮತ್ತಷ್ಟು ವಿಜೃಂಭಿಸುತ್ತಿದೆ. ಮಹಿಳೆಯರ ರಕ್ಷಣೆಗಾಗಿ ಇರುವ ಕಾನೂನುಗಳು ದುರುಪಯೋಗ ಆಗುತ್ತಿದೆ. ಇದು ತಪ್ಪಬೇಕು. ಹೆಣ್ಣುಮಕ್ಕಳು ಸುಶಿಕ್ಷಿತರಾಗಬೇಕು. ಆಗ ಆರ್ಥಿಕವಾಗಿ ಸಬಲರಾಗಬಹುದು. ಈ ಮೂಲಕ ದೌರ್ಜನ್ಯಗಳ ವಿರುದ್ಧ ಹೋರಾಟಕ್ಕೆ ಸಹಾಯ ಆಗುತ್ತದೆ. ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಿದ್ದರೂ ವರದಕ್ಷಿಣೆ ಪದ್ಧತಿ ಈಗಲೂ ಇದೆ. ವಿಧವೆಯರ ನೋವು ಬೇರೊಂದು ರೀತಿಯಲ್ಲಿ ಮುಂದುವರಿದಿದೆ. ಹೆಣ್ಣು ಹೊರಗೆ ದುಡಿದು ಬಂದರೂ ಮನೆಯಲ್ಲೂ ದುಡಿಯುವ ಅನಿವಾರ್ಯತೆ. ಸ್ತ್ರೀ ಸಮಾನತೆ ಇನ್ನೂ ಬಂದಿಲ್ಲ. ಹೆಣ್ಣಿನಲ್ಲಿ ನವದುರ್ಗೆಯರ ಶಕ್ತಿ ಇದ್ದು, ಸಮಾಜದಲ್ಲಿ ಎಲ್ಲ ಪಾತ್ರಗಳನ್ನೂ ನಿಭಾಯಿಸಬಲ್ಲಳು. ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಆದ್ಯತೆ ಕೊಟ್ಟು ಆರ್ಥಿಕ ಸ್ವಾವಲಂಬನೆಗೆ ಪ್ರೋತ್ಸಾಹ ಕೊಡುವಂತಾಗಬೇಕು ಎಂದರು.
ಅನುಗ್ರಹ ಕಾಲೇಜು ಪದವಿ ವಿಭಾಗದ ಪ್ರಾಂಶುಪಾಲರಾದ ಹರ್ಷಿತಾ ಮಾತನಾಡಿ ಸಾಧಕ ಮಹಿಳೆಯರಿಗೆ ಕುಟುಂಬದಲ್ಲಿ ಪ್ರೋತ್ಸಾಹ ಇರಬೇಕಾಗುತ್ತದೆ. ಮಹಿಳೆಯರಿಗೆ ಶಕ್ತಿಯುತವಾದ ಬೆಂಬಲ ಇದ್ದರೆ ಉನ್ನತ ಸಾಧನೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ವಿಜಯವಾಣಿ ಮೈಸೂರು ಬ್ಯೂರೋ ಸ್ಥಾನಿಕ ಸಂಪಾದಕ ಎಂ.ಆರ್. ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ದರ್ಶನ್ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಉಪನ್ಯಾಸಕ ನೌಷಾದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಅನುಗ್ರಹ ವಿದ್ಯಾಸಂಸ್ಥೆಯ ಪದವಿ ವಿದ್ಯಾರ್ಥಿಗಳು, ಉಪನ್ಯಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.