

ಹುಬ್ಬಳ್ಳಿ: ಯಶಸ್ಸು ಎನ್ನುವುದನ್ನು ಪ್ರತಿಯೊಬ್ಬರೂ ಒಂದೊಂದು ರೀತಿ ವ್ಯಾಖ್ಯಾನಿಸುತ್ತಾರೆ. ಯಾರ ಬಳಿಯೂ ಲಿಖಿತ ಉತ್ತರ ಸಿಗುವುದಿಲ್ಲ, ಹಾಗಾಗಿ, ನಾನು ಏನಾಗಬೇಕು ಎಂಬುದರ ಸ್ಪಷ್ಟ ಕಲ್ಪನೆ ಇಟ್ಟುಕೊಂಡು ಅದಕ್ಕೆ ತಕ್ಕಂತೆ ಪ್ರಯತ್ನ ಪಟ್ಟರೆ ಅದುವೇ ಸಕ್ಸಸ್ ಎಂದು ಹೇಳಬಹುದು ಎಂದು ಖ್ಯಾತ ಲೇಖಕ ಹಾಗೂ ವಾಗ್ಮಿ ಚೇತನ್ ಭಗತ ಅಭಿಪ್ರಾಯಪಟ್ಟರು.
ಇಲ್ಲಿಯ ವಿದ್ಯಾನಗರ ಬಿವಿಬಿ ಕ್ಯಾಂಪಸ್ ನಲ್ಲಿ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯವು ಏರ್ಪಡಿಸಿರುವ ಮೂರು ದಿನಗಳ ತಾಂತ್ರಿಕ- ಸಾಂಸ್ಕೃತಿಕ ಉತ್ಸವ "ಪ್ಲೀಡಿಸ್ 2025' 12ನೇ ಆವೃತ್ತಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಕ್ಸಸ್ ಬಗ್ಗೆ ಕೇಳಿದರೆ ಪಾಲಕರು, ಸ್ನೇಹಿತರು, ಅಷ್ಟೇ ಅಲ್ಲ ಕಲಿಸುವ ಗುರುಗಳು ಸಹ ವಿಭಿನ್ನ ಉತ್ತರ ನೀಡುತ್ತಾರೆ. ಜೀವನದಲ್ಲಿ ಖುಷಿಯಾಗಿರುವುದೇ ಎಲ್ಲರ ಪರಮ ಗುರಿ. ಅದಕ್ಕಾಗಿ ಹಣ ಗಳಿಸುವ ಕೆಲಸ ಮಾಡಬೇಕು. ಗಳಿಕೆ ನಂತರ ಅದನ್ನು ಅನುಭವಿಸಲು ಆರೋಗ್ಯವೇ ಇಲ್ಲದಿದ್ದರೆ ಅದು ಕೂಡ ವ್ಯರ್ಥ. ಹಾಗಾಗಿ ಎಲ್ಲವನ್ನೂ ಸಮತೋಲನ ಮಾಡಿಕೊಂಡು ಹೋಗಬೇಕಾಗುತ್ತದೆ. ಯಶಸ್ಸಿನ ಬೆನ್ನು ಹತ್ತದೇ, ಜೀವನದಲ್ಲಿ ಒಂದು ಗುರಿ ಇಟ್ಟುಕೊಂಡು ಅದನ್ನು ಸಾಧಿಸಲು ಸರ್ವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಗುರಿ ಹಾಗೂ ಕನಸಿಗೆ ವ್ಯತ್ಯಾಸ ಇದೆ. ಕನಸಿಗೆ ನಿಖರತೆ ಇರುವುದಿಲ್ಲ. ಆದರೆ, ಗುರಿ ಸ್ಪಷ್ಟವಾಗಿರುತ್ತದೆ. ಅದರತ್ತ ನಮ್ಮ ಗಮನ ಇರಬೇಕು. ಇದು ಕಷ್ಟಕರ ಎನಿಸಿದರೂ ಸಾಧಿಸಿದ ನಂತರ ಸುಖ ಸಿಗುತ್ತದೆ. ಇದಕ್ಕಾಗಿ ಸಾಕಷ್ಟು ಕಷ್ಟ ನೋವುಗಳನ್ನು ಅನುಭವಿಸಬೇಕಾಗುತ್ತದೆ. ದುಃಖದ ಹಿಂದೆ ಸುಖ ಇದೆ ಎಂದು ಎಲ್ಲರೂ ಹೇಳುತ್ತಾರೆ. ಅದೇ ರೀತಿ ಕಷ್ಟ ಪಟ್ಟು ಓದಿದರೆ ಅದರ ಸುಖ ಫಲಿತಾಂಶ ಬಂದಾಗ ಸಿಕ್ಕೇ ಸಿಗುತ್ತದೆ ಎಂದರು.
ಕಷ್ಟ, ನೋವು ಯಾರಿಗೂ ಬೇಡದ ವಸ್ತುಗಳು. ಗುರಿ ಸಾಧನೆ ಮಾಡುವಾಗ ಸಾಕಷ್ಟು ಅಡೆತಡೆಗಳು ಬರುತ್ತವೆ. ಅವುಗಳನ್ನು ಚಾಕಚಕ್ಯತೆಯಿಂದ ದಾಟಬೇಕು. ಮೊಬೈಲ್ ಫೋನ್ ಬಳಕೆ ಮೇಲೆ ಸ್ವಯಂ ನಿಯಂತ್ರಣ ಅಗತ್ಯ. ಮೊಬೈಲ್ ಫೋನ್ ಗೀಳಿನಿಂದ ಹೊರಗೆ ಬಂದರೆ ಗೆಲ್ಲುವುದು ಬಹಳ ಸುಲಭ. ನೀವೇ ಮಾಸ್ಟರ್ ಆಗುತ್ತೀರಿ. ಇದೆಲ್ಲದರ ಮಧ್ಯೆ ಜೀವನದಲ್ಲಿ ಸೋಲು ಎಂಬುದು ಇದ್ದೇ ಇರುತ್ತದೆ. ಆಗೆಲ್ಲ ಜೀವನ ಸಾಕು ಎಂದು ಹಿಂದೆ ಸರಿಯಬಾರದು. ಮತ್ತೆ ಪುಟಿದೇಳಬೇಕು. ಸೋಲು ಜೀವನದ ಭಾಗವಾಗಿರುವುದರಿಂದ ಅದರಿಂದ ಮೇಲೆ ಎದ್ದು ಬರಲೇಬೇಕು ಎಂದರು.
ಕೆಎಲ್ಇ ತಾಂತ್ರಿಕ ವಿವಿ ಸಮಕುಲಾಧಿಪತಿ ಡಾ. ಅಶೋಕ ಶೆಟ್ಟರ್, ಕುಲಪತಿ ಡಾ. ಪ್ರಕಾಶ ತೆವರಿ, ಕುಲಸಚಿವ ಡಾ. ಬಸವರಾಜ ಅನಾಮಿ, ಡೀನ್ಸ್, ವಿಭಾಗದ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕರು ಪಾಲ್ಗೊಂಡಿದ್ದರು.
ಮೂರು ದಿನ ಉತ್ಸವ: 2009ರಲ್ಲಿ ಆರಂಭಿಸಲಾದ ತಾಂತ್ರಿಕ- ಸಾಂಸ್ಕೃತಿಕ ಉತ್ಸವ "ಪ್ಲೀಡಿಸ್ 2025' 12ನೇ ಆವೃತ್ತಿ ಮೇ 11ರವರೆಗೆ ನಡೆಯಲಿದೆ.
ಮೇ 10ರಂದು ಸಂಜೆ 5ಕ್ಕೆ ಬಿವಿಬಿ ಆವರಣದ ಜಿಮ್ಖಾನಾ ಟರ್ಫ ಗ್ರೌಂಡ್ ನಲ್ಲಿ ಪಾಪ್ ಸಿಂಗರ್ ಧ್ವನಿ ಭಾನುಶಾಲಿ ಅವರಿಂದ ಸೆಲೆಬ್ರಿಟಿ ಶೋ, 11ರಂದು ಬೆಳಗ್ಗೆ 10.30ಕ್ಕೆ ಡಾ. ಪ್ರಭಾಕರ ಕೋರೆ ಕ್ರೀಡಾಂಗಣದಲ್ಲಿ ಆಶಿಷ್ ಸೋಲಂಕಿ ಅವರ ಹಾಸ್ಯ ಕಾರ್ಯಕ್ರಮ, ಸಾಂಸ್ಕೃತಿಕ ಆಕರ್ಷಣೆಗಳಾದ ಕೆಎಲ್ಇ ಟೆಕ್ ಡ್ರಾಮಾ ಕ್ಲಬ್ ನಿಂದ ನಾಟಕ ಪ್ರದರ್ಶನ, ಕನ್ನಡ ಬಳಗದ ಪ್ರಾದೇಶಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕಲಾತ್ಮಕ ಬೆಳವಣಿಗೆಗೆ ಸಹಾಯ ಮಾಡುವ ಅಭಿನಯ ತರಬೇತಿ, ಕಾಗದ ಕತ್ತರಿಸುವ ಕಲೆ, ಥ್ರೆಡ್ ಸ್ಕೇಪ್ಸ್ ಏರ್ಪಡಿಸಲಾಗಿದೆ. ದಿ ಹಬ್ನಲ್ಲಿ ವಿವಿಧ ಶೈಲಿಯ ಆಹಾರ ಸವಿಯಬಹುದು. ವಿದ್ಯಾರ್ಥಿಗಳ ವೈಚಾರಿಕತೆ ಉತ್ತೇಜಿಸುವ ಮತ್ತು ತಂಡದ ಮನೋಭಾವವನ್ನು ಬೆಳೆಸುವ ಹಲವು ತಾಂತ್ರಿಕ ಸ್ಪರ್ಧೆಗಳು ಜರುಗಲಿವೆ.