

ಮಂಡ್ಯ: ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರಷ್ಟೇ ಎಲ್ಲವನ್ನೂ ಮಾಡಲಾಗದು. ಅದರಲ್ಲಿ ದಾದಿಯರು, ಮತ್ತು ತಂತ್ರಜ್ಞರ ಪಾತ್ರ ಅಪಾರ. ವೃತ್ತಿ ಬದುಕಿನಲ್ಲಿ ಸೇವಾ ಕಾರ್ಯ ಮೈಗೂಡಿಸಿಕೊಂಡಾಗ ಮಾತ್ರ ಸಫಲತೆ ಕಾಣಲು ಸಾಧ್ಯ ಎಂದು ಮಿಮ್ಸ್‌ನ ಸ್ತ್ರೀರೋಗ ವಿಭಾಗದ ಪ್ರಾಧ್ಯಾಪಕಿ ಡಾ.ಪೂರ್ಣಿಮಾ ಅಭಿಪ್ರಾಯಿಸಿದರು.
ನಗರದ ಗಾಂಧಿಭವನದಲ್ಲಿ ಬಿ.ಎಲ್.ಎಸ್ ಸ್ಕೂಲ್ ಆಫ್ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಸೈನ್ಸ್ ವಿಭಾಗದ ವತಿಯಿಂದ ಆಯೋಜಿಸಿದ್ದ ಪ್ರತಿಜ್ಞಾವಿಧಿ ಬೋಧನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದಾದಿಯರ ವೃತ್ತಿಯಲ್ಲಿ ಅಗತ್ಯವಾದ ಸಮರ್ಪಣಾ ಭಾವ, ಸಹಾನುಭೂತಿ, ಮಾನವೀಯತೆ, ಸೇವಾ ಮನೋಭಾವ ಸಹನೆ, ಕರುಣೆ, ತಾಳ್ಮೆ, ಭಾವನಾತ್ಮಕವಾಗಿರುವ ಸ್ಥಿರತೆ, ಶಿಸ್ತು, ಸಮಗ್ರತೆ, ಪ್ರಾಮಾಣಿಕತೆ, ಶುಚಿತ್ವ, ಉತ್ತಮ ಸಂಪರ್ಕ, ಉತ್ತಮ ಭಾಷೆ, ವಾಗ್ಮಿ, ಚುರುಕುತನ, ಧೈರ‌್ಯ, ಏಕಾಗ್ರತೆ, ಹೊಂದಾಣಿಕೆ, ಆತ್ಮವಿಶ್ವಾಸ, ಆತ್ಮಸಾಕ್ಷಿ ಇಷ್ಟು ಇದ್ದಲ್ಲಿ ಎಂತಹುದ್ದೇ ಸಂದರ್ಭ ಬಂದರೂ ಅದನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಎಲ್ಲ ಗುಣಗಳನ್ನು ಮೈಗೂಡಿಸಿಕೊಂಡು ವೃತ್ತಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ‌್ಯೋನ್ಮುಖರಾಗಬೇಕು. ನೋವಲ್ಲಿ ಧೈರ್ಯ ತುಂಬುವ ಕೈಗಳು, ಕಷ್ಟದಲ್ಲಿ ಸಹಾಯ ಹಸ್ತ ನೀಡುವುದು ದಾದಿಯರು ಮಾತ್ರ. ತ್ಯಾಗ, ಧೈರ್ಯ, ವಿಶ್ರಾಂತಿ ರಹಿತ ಕರ್ತವ್ಯ ನಿರ್ವಹಣೆ ಮಾಡುತ್ತಿರುತ್ತಾರೆ. ನಿಮ್ಮ ಹೆಸರು ಬರದಿರಬಹುದು. ಎಲೆಮರೆಕಾಯಿಯಂತೆ ಸೇವೆ ಮಾಡುತ್ತಿರಬಹುದು. ಆದರೆ ಎಂದಾದರೂ ಒಂದು ದಿನ ನಿಮ್ಮ ಕಾರ್ಯವನ್ನು ನೆನೆಯುವಂತಹ ಕಾಲವೂ ಬರುತ್ತದೆ ಎಂದು ಹೇಳಿದರು.
ಮಿಮ್ಸ್‌ನ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎಸ್.ಆಶಾಲತಾ, ಡಾ. ಕೃಷ್ಣಸ್ವಾಮಿ ಇತರರಿದ್ದರು.