

ವಿರಾಜಪೇಟೆ; ಲಯನ್ಸ್ ಸಂಸ್ಥೆಯ ಸುವರ್ಣ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಒಕ್ಕೊರಲಿನಿಂದ ತೀರ್ಮಾನಿಸಲಾಯಿತು.
ಇಲ್ಲಿನ ಕೊಡವ ಸಮಾಜದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಲಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಈ ತೀರ್ಮಾನ ಮಾಡಲಾಯಿತು.
ನೂತನ ಅಧ್ಯಕ್ಷ ಅಂಬಿ ಕೃಷ್ಣಮೂರ್ತಿ ಮಾತನಾಡಿ, ಸಂಸ್ಥೆಯನ್ನು 1975-76 ನೇ ಸಾಲಿನಲ್ಲಿ ಜಿಲ್ಲಾ ಮಾಜಿ ಪ್ರಾಂತಪಾಲ ಎಂ.ಸಿ.ಶಾಸ್ತ್ರಿ ಅವರ ಅವಧಿಯಲ್ಲಿ ಮಂಗಳೂರು ಲಯನ್ಸ್ ಸಂಸ್ಥೆಯ ಪ್ರಾಯೋಜನೆಯಲ್ಲಿ ಆರಂಭಿಸಲಾಯಿತು. ಸಂಸ್ಥೆಯು ಈ ವರ್ಷ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಆದ್ದರಿಂದ ಸದಸ್ಯರು ಸುವರ್ಣ ಮಹೋತ್ಸವ ಯಶಸ್ಸಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಲಯನ್ಸ್ ಸಂಸ್ಥೆಗೆ ನೂತನ ಸದಸ್ಯರನ್ನು ಸೇರಿಸಿಕೊಳ್ಳಲು ಹಾಗೂ ವರ್ಷಪೂರ್ತಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಹಿರಿಯರ ಮಾರ್ಗದರ್ಶನ ಮತ್ತು ನೆರವು ಅಗತ್ಯ. ಸಂಸ್ಥೆ ಪ್ರಸ್ತುತ ಹಲವು ಸೇವಾ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಪದಾಧಿಕಾರಿಗಳು ಹಾಗೂ ಸದಸ್ಯರು ಉತ್ಸಾಹದೊಂದಿಗೆ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದ ಲಯನ್ಸ್ 317-ಡಿ ಉಪ ಪ್ರಾಂತಪಾಲ ಲ.ಗೋವರ್ಧನ್ ಕೆ.ಶೆಟ್ಟಿ, ಹಿರಿಯ ಅನುಭವಿ ಹಾಗೂ ಲಯನ್ಸ್ ಸಂಸ್ಥೆಯಲ್ಲಿ ವಿವಿಧ ಉನ್ನತ ಸ್ಥಾನಮಾನ ಅಲಂಕರಿಸಿದ್ದ ಅಂಬಿ ಕೃಷ್ಣಮೂರ್ತಿ ಅವರು ಸುವರ್ಣ ವರ್ಷದ ಅಧ್ಯಕ್ಷರಾಗಿರುವುದರಿಂದ ವರ್ಷವಿಡೀ ಉತ್ತಮ ಕಾರ್ಯಕ್ರಮ ಆಯೋಜಿಸಬೇಕು. ಜತೆಗೆ ಸದಸ್ಯರ ಸಂಖ್ಯೆಯನ್ನೂ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ನಿಕಟಪೂರ್ವ ಅಧ್ಯಕ್ಷ ಬಿ.ಪಿ.ಗಣಪತಿ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು. ನಿಕಟಪೂರ್ವ ಕಾರ್ಯದರ್ಶಿ ಪಿ.ಟಿ.ನರೇಂದ್ರ ಮತ್ತು ಖಜಾಂಚಿ ಕೆ.ಯು.ಜಯ ನೂತನ ಪದಾಧಿಕಾರಿಗಳಿಗೆ ಸ್ವಾಗತ ಕೋರಿದರು. ವೇದಿಕೆಯಲ್ಲಿ ಗಣ್ಯರಾದ ಸುಪ್ರಿತಾ ಗೋವರ್ದನ್ ಶೆಟ್ಟಿ, ಲಯನ್ಸ್ ಸಂಸ್ಥೆಯ ಪ್ರಮುಖರಾದ ಡಾ.ಪಂಚಮ್ ತಿಮ್ಮಯ್ಯ, ಬಿಂದು ಗಣಪತಿ, ನೂತನ ಸಾಲಿನ ಕಾರ್ಯದರ್ಶಿ ಪೌಲ್ ಕ್ಷೇವಿಯರ್, ಖಜಾಂಚಿ ಮಂಡೇಟಿರ ಎಂ.ಸುರೇಶ್ ಇತರರಿದ್ದರು.