

ಮದ್ದೂರು: ತಾಲೂಕಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಯಶಸ್ವಿಯಾಗಿದ್ದು, ಸಮೀಕ್ಷೆ ಸಹಕಾರ ನೀಡಿದ ಜನತೆಗೆ ಹಾಗೂ ನಿಗದಿತ ಅವಧಿಯೊಳಗೆ ಸಮೀಕ್ಷೆ ಮುಗಿಸಿದ ಅಧಿಕಾರಿಗಳಿಗೆ ಅಭಿನಂದನೆ ತಿಳಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಕದಲೂರು ಗ್ರಾಮದ ತಮ್ಮ ನಿವಾಸಕ್ಕೆ ಸೋಮವಾರ ಸಮೀಕ್ಷೆಗೆ ಆಗಮಿಸಿದ ಅಧಿಕಾರಿಗಳಿಗೆ ಕುಟುಂಬದ ಅಂಕಿ ಅಂಶ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ತಾಲೂಕಿನಲ್ಲಿ ಸಮೀಕ್ಷೆ ಮಾಡಲು 37 ಅಧಿಕಾರಿಗಳನ್ನು ಹಾಗೂ 754 ಸಿಬ್ಬಂದಿ ನೇಮಕ ಮಾಡಲಾಗಿತ್ತು. ನಿಗಿಧಿತ ಅವಧಿಯೊಳಗೆ ಶೇ.90 ರಷ್ಟು ಸಮೀಕ್ಷೆ ಮುಗಿಸಿದ್ದು, ಉಳಿಕೆ 3 ಸಾವಿರ ಮನೆಗಳ ಸಮೀಕ್ಷೆಯಿದ್ದು, ಮಂಗಳವಾರದೊಳಗೆ ಪೂರ್ಣ ಪ್ರಮಾಣದಲ್ಲಿ ಗುರಿ ತಲುಪಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.
ಈ ಸಮೀಕ್ಷೆ ಕೇವಲ ಅಂಕಿಅಂಶಗಳ ಸಂಗ್ರಹವಲ್ಲ. ಇದು ಸರ್ಕಾರದ ಜನಪರ ಯೋಜನೆಗಳಿಗೆ ಸಮಾಜದ ನಿಜವಾದ ಚಿತ್ರಣ ಒದಗಿಸುವ ಪ್ರಾಮಾಣಿಕ ಪ್ರಯತ್ನವಾಗಿದೆ. ಈ ಮಹತ್ವದ ಕಾರ್ಯದಲ್ಲಿ ಶ್ರದ್ಧೆಯಿಂದ ತೊಡಗಿರುವ ಗಣತಿದಾರರು ಹಾಗೂ ಅಧಿಕಾರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.
ಸಮೀಕ್ಷೆಗೆ ಒಳಪಡದ ಕುಟುಂಬಗಳು, ದಯವಿಟ್ಟು ತಮ್ಮ ಮನೆಗೆ ಬರುವ ಗಣತಿದಾರರಿಗೆ ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು ಎಂದು ವಿನಂತಿ ಮಾಡಿದರು.
ತಹಸೀಲ್ದಾರ್ ಪರಶುರಾಮ್ ಸತ್ತೀಗೇರಿ, ತಾಪಂ ಇಒ ರಾಮಲಿಂಗಯ್ಯ, ಬಿಇಒ ಧನಂಜಯ ಇದ್ದರು.