

ವಿಜಯಪುರ: ಯಾರಾದರೂ ವಾಟ್ಸ್ಆ್ಯಪ್ ಗ್ರೂಪ್ಗೆ ಸೇರಿಸಿದರೆ ಅಥವಾ ವಾಟ್ಸ್ಆ್ಯಪ್ ಗ್ರೂಪ್ಗೆ ಸೇರಿಕೊಳ್ಳುವಂತೆ ಯಾರಾದರೂ ಲಿಂಕ್ ಕಳುಹಿಸಿದರೆ ಹುಷಾರಾಗಿರಿ. ಯಾವುದಕ್ಕೂ ಅಡ್ಮಿನ್ ಯಾರು ಅಂತ ಒಮ್ಮೆ ನೋಡಿಕೊಂಡೇ ಗ್ರೂಪ್ಗೆ ಸೇರಿ ಅಥವಾ ಗ್ರೂಪ್ನಲ್ಲಿ ಮುಂದುವರಿಯಿರಿ.
ಏಕೆಂದರೆ ವಾಟ್ಸ್ಆ್ಯಪ್ ಗ್ರೂಪ್ ಅಡ್ಮಿನ್ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದರೆ, ಗ್ರೂಪ್ ಕ್ರಿಯೇಟ್ ಮಾಡಿಕೊಂಡು ಮಾಡಬಾರದ್ದನ್ನು ಮಾಡಿದರೆ ಗ್ರೂಪ್ನಲ್ಲಿರುವವರ ಮೇಲೂ ಪೊಲೀಸರ ನಿಗಾ ಬೀಳುವ ಸಾಧ್ಯತೆ ಇರುತ್ತದೆ. ಅದಕ್ಕೆ ವಿಜಯಪುರದ ಈ ಪ್ರಕರಣವೇ ಉದಾಹರಣೆ.
ವಿಜಯಪುರದಲ್ಲಿ ಬುದ್ದು ರಾಠೋಡ ಎಂಬಾತನ ಮೇಲೆ ಗುಂಡು ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ತುಳಸೀರಾಮ ಹರಿಜನ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮೂರ್ನಾಲ್ಕು ಆರೋಪಿಗಳ ಪೈಕಿ ಒಬ್ಬನಾಗಿರುವ ಸುಮಾರು 25 ವರ್ಷದ ತುಳಸೀರಾಮ, ಕೆಲವು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾನೆ.
ವಿಜಯಪುರದ ಜಲನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ನಿವಾಸಿ ಆಗಿರುವ ಈತ 2-3 ವರ್ಷಗಳಿಂದ ಅಪರಾಧಗಳಲ್ಲಿ ಶಾಮೀಲಾಗಿದ್ದಾನೆ. ಟಿಜೆ ಬಾಯ್ಸ್, ಟಿಜೆ ಸರ್ಕಾರ್ ಎಂದು 2-3 ವಾಟ್ಸ್ಆ್ಯಪ್ ಗ್ರೂಪ್ಗಳನ್ನು ಮಾಡಿರುವ ಈತನ ಬಂಧನದ ಬಳಿಕ ಪೊಲೀಸರು, ಈ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಇರುವವರ ಮೇಲೂ ನಿಗಾ ಇರಿಸಿದ್ದಾರೆ ಎಂದು ಎಸ್ಪಿ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.