

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯವು ತಾಂತ್ರಿಕ- ಸಾಂಸ್ಕೃತಿಕ ಉತ್ಸವ ಪ್ಲೀಡಿಸ್ 2025 ಇದರ 12ನೇ ಆವೃತ್ತಿಯನ್ನು ಮೇ 9ರಿಂದ ಮೂರು ದಿನಗಳ ಕಾಲ ಬಿವಿಬಿ ಕ್ಯಾಂಪಸ್ ನಲ್ಲಿ ಆಯೋಜಿಸಿದೆ.
2009ರಲ್ಲಿ ಪ್ರಾರಂಭವಾದ ಉತ್ಸವವು ಕರ್ನಾಟಕದ ಅತ್ಯಂತ ಜೀವಂತ ಮತ್ತು ಸಮಾವೇಶಾತ್ಮಕ ವಿದ್ಯಾರ್ಥಿ ಉತ್ಸವಗಳ ಪೈಕಿ ಒಂದಾಗಿದೆ. ಆಕಾಶಗಂಗೆಯ ಏಳು ತಂಗಿಯರು ಎಂಬ ನಕ್ಷತ್ರ ಗುಚ್ಛದಿಂದ ಪ್ರೇರಿತವಾಗಿರುವ ಪ್ಲೀಡಿಸ್ ಎಂಬ ಹೆಸರು ಉತ್ಸವದ ಬುದ್ಧಿಮತ್ತೆ, ಏಕತೆ ಮತ್ತು ಯುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಈ ಆವೃತ್ತಿಯು ತಾಂತ್ರಿಕತೆ, ಸೃಜನಶೀಲತೆ ಮತ್ತು ಸಂಸ್ಕೃತಿಯ ಜೋಡಣೆಯೊಂದಿಗೆ ಕೂಡಿ, ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ.
ಉತ್ಸವ ಆರಂಭ:
ಮೇ 9ರಂದು ಬೆಳಗ್ಗೆ 10.15ಕ್ಕೆ ಮುಖ್ಯ ಕಟ್ಟಡದ ಪ್ರವೇಶ ದ್ವಾರದಲ್ಲಿ ಈ ಆವೃತ್ತಿಯ ಉದ್ಘಾಟನೆಯನ್ನು ಖ್ಯಾತ ಲೇಖಕ ಹಾಗೂ ವಾಗ್ಮಿಚೇತನ್ ಭಗತ ಅವರು ನೆರವೇರಿಸುವರು. ನಂತರ ಮುಖ್ಯ ಭಾಷಣ ಮಾಡುವರು. ಸಮಕುಲಾಧಿಪತಿ ಡಾ. ಅಶೋಕ ಶೆಟ್ಟರ್, ಕುಲಪತಿ ಡಾ. ಪ್ರಕಾಶ ತೆವರಿ, ಕುಲಸಚಿವ ಡಾ. ಬಸವರಾಜ ಅನಾಮಿ, ಡೀನ್ಸ್, ವಿಭಾಗದ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕರು ಪಾಲ್ಗೊಳ್ಳುವರು.
ಮೇ 10ರಂದು ಬೆಳಗ್ಗೆ 10ಕ್ಕೆ ಬಿ.ವಿ. ಭೂಮರಡ್ಡಿ ಅವರ 140ನೇ ಜಯಂತಿ ಅಂಗವಾಗಿ ಅವರಿಗೆ ಗೌರವಾಂಜಲಿ ಸಲ್ಲಿಸಲಾಗುವುದು. ಪ್ರೇರಣಾತ್ಮಕ ವಕ್ತಾರೆ ಶಾಲಿನಿ ಸರಸ್ವತಿ ಉಪನ್ಯಾಸ ನೀಡುವರು.
ಬಾಲಿವುಡ್ ಪಾಪ್ ಸೆನ್ಸೇಷನ್ ಧ್ವನಿ ಭಾನುಶಾಲಿ ಅವರ ವೈಭವಯುತ ಸಂಗೀತ ಪ್ರದರ್ಶನವು ಪ್ಲೀಡಿಸ್ ನ ಪ್ರಮುಖ ಆಕರ್ಷಣೆಯಾಗಲಿದೆ.
ಮೇ 11ರಂದು ಬೆಳಗ್ಗೆ 10.30ಕ್ಕೆ ಡಾ. ಪ್ರಭಾಕರ ಕೋರೆ ಕ್ರೀಡಾಂಗಣದಲ್ಲಿ ಆಶಿಷ್ ಸೋಲಂಕಿ ಅವರ ಹಾಸ್ಯ ಕಾರ್ಯಕ್ರಮ ನಡೆಯಲಿದೆ.
ಸಾಂಸ್ಕೃತಿಕ ಆಕರ್ಷಣೆಗಳು:
ಕೆಎಲ್ಇ ಟೆಕ್ ಡ್ರಾಮಾ ಕ್ಲಬ್ ನಾಟಕ ಪ್ರದರ್ಶನಗಳು. ಕನ್ನಡ ಬಳಗದ ಪ್ರಾದೇಶಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕಲಾತ್ಮಕತೆಯ ಬೆಳವಣಿಗೆಗೆ ಸಹಾಯ ಮಾಡುವ ಕಾರ್ಯಾಗಾರದಲ್ಲಿ ಅಭಿನಯ ತರಬೇತಿ, ಕಾಗದ ಕತ್ತರಿಸುವ ಕಲೆ, ಥ್ರೆಡ್ ಸ್ಕೇಪ್ ನಡೆಯಲಿವೆ.
ದಿ ಹಬ್ - ಇದೊಂದು ವಿದ್ಯಾರ್ಥಿಗಳ ಮೇಲ್ವಿಚಾರಣೆಯಲ್ಲಿ ನಡೆಯುವ ಫುಡ್ ಜೋನ್ ಆಗಿದ್ದು, ಇಲ್ಲಿ ವಿವಿಧ ಶೈಲಿಯ ಆಹಾರವನ್ನು ಸವಿಯಬಹುದು. ಪ್ಲೀಡಿಸ್ ಪ್ರಮುಖ ಆಕರ್ಷಣೆ ಸ್ಥಳವಾಗಿದೆ.
ತಾಂತ್ರಿಕ ಸ್ಪರ್ಧೆಗಳು:
ವಿದ್ಯಾರ್ಥಿಗಳ ವೈಚಾರಿಕತೆ ಉತ್ತೇಜಿಸುವ ಮತ್ತು ತಂಡದ ಮನೋಭಾವವನ್ನು ಬೆಳೆಸುವ ಹಲವು ತಾಂತ್ರಿಕ ಸ್ಪರ್ಧೆಗಳು ಜರುಗಲಿದ್ದು, ಕಾರ್ಯಕ್ರಮದಲ್ಲಿ ಆರು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಇದು ಬುದ್ಧಿಮತ್ತೆ, ಪ್ರತಿಭೆ ಮತ್ತು ಹಬ್ಬದ ಸಂಯೋಜನೆಯಾಗಿ ಕಳೆಗಟ್ಟಲಿದೆ. ಈ ಉತ್ಸವವು ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸಮಗ್ರ ಶಿಕ್ಷಣ, ಸಾಂಸತಿಕ ವೈವಿಧ್ಯ ಮತ್ತು ವಿದ್ಯಾರ್ಥಿ ಸಬಲೀಕರಣದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.