

ಶಿರಹಟ್ಟಿ: ಇಲ್ಲಿನ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಅಲ್ಲದೆ, ಜಿಲ್ಲಾ ದಸ್ತು ಬರಹಗಾರರಲ್ಲಿ ಕೆಲಸ ಮಾಡುವ ಕೆಲವರು ದಲ್ಲಾಳಿಗಳಂತೆ ವರ್ತಿಸುತ್ತಿದ್ದು, ಅಂತಹವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ತಹಸೀಲ್ದಾರರಿಗೆ ಸ್ವತಃ ಪ್ರಭಾರ ಉಪ ನೋಂದಣಾಧಿಕಾರಿ ಮನವಿ ಸಲ್ಲಿಸಿದ್ದಾರೆ.
ಈ ವಿಷಯ ಕುರಿತಂತೆ ಕಚೇರಿ ಅಧೀನದಲ್ಲಿ ಬರುವ 11 ಜಿಲ್ಲಾ ದಸ್ತು ಬರಹಗಾರರು ಹಾಗೂ ಅವರ ಕೈಕೆಳಗೆ ಕೆಲಸ ಮಾಡುವ ಖಾಸಗಿ ದಲ್ಲಾಳಿಗಳ ಹೆಸರುಗಳನ್ನು ಸಹ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಇವರೆಲ್ಲ ಜನಸಾಮಾನ್ಯರಿಗೆ ಸುಳ್ಳು ಮಾಹಿತಿ ನೀಡುತ್ತ ಕಚೇರಿಗೆ ಕಾರ್ಯದ ನಿಮಿತ್ತ ಬರುವ ರೈತರಿಂದ ಉಪ ನೋಂದಣಿ ಅಧಿಕಾರಿಗೆ ಕೊಡಬೇಕೆಂದು ಹೇಳಿ 500 ರಿಂದ 1,500 ರೂ.ವರೆಗೆ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಅಂಥವರ ಮೇಲೆ ಮುದ್ರಾಂಕ ಕಾಯ್ದೆ 1957 ರಡಿ ಶಿಸ್ತು ಕ್ರಮ ಜರುಗಿಸಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕೋರಲಾಗಿದೆ.
ತಹಸೀಲ್ದಾರ್ ಅನಿಲ ಬಡಿಗೇರ ಪ್ರತಿಕ್ರಿಯಿಸಿ, ಸದರಿ ಪರವಾನಗಿದಾರರಿಗೆ ನೋಟಿಸ್ ನೀಡಿ ಎಚ್ಚರಿಸಲಾಗುವುದು. ಮತ್ತದೇ ತಪ್ಪು ಎಸಗಿದ್ದು ಕಂಡು ಬಂದರೆ ಲೈಸೆನ್ಸ್ ರದ್ದು ಪಡಿಸಲು ಜಿಲ್ಲಾ ನೋಂದಣಿ ಅಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದರು.