

ಮೈಸೂರು; ಕಾನೂನಿನ ಮುಖ್ಯ ಉದ್ದೇಶ ಮನಃ ಪರಿವರ್ತನೆ ಮಾಡುವುದಾಗಿದೆ. ಕಾರಾಗೃಹಗಳು ಮನಃ ಪರಿವರ್ತನೆ ಮಾಡುವ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ.ದಿನೇಶ್ ತಿಳಿಸಿದರು.
ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ, ಸಂಚಲನ ರಂಗ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕೇಂದ್ರ ಕಾರಾಗೃಹದಲ್ಲಿ ಶನಿವಾರ ಆಯೋಜಿಸಿದ್ದ ಕಾರಾಗೃಹದ ಬಂಧಿಗಳಿಗೆ ರಂಗ ತರಬೇತಿ ಶಿಬಿರದ ಸಮಾರೋಪ ಹಾಗೂ ಕರ್ಣಾತರಂಗ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಕೋಪಕ್ಕೆ ಬುದ್ಧಿ ಕೊಟ್ಟಾಗ ತಪ್ಪುಗಳಾಗುತ್ತವೆ. ಯಾವುದೋ ಸನ್ನಿವೇಶದಲ್ಲಿ ಪ್ರಕೋಪಕ್ಕೆ ಒಳಗಾಗಿ ನೀವು ತಪ್ಪು ಮಾಡಿರುತ್ತಿರಿ. ಅದನ್ನು ತಿದ್ದಿಕೊಂಡು ಬದುಕಬೇಕು. ನಾಟಕ ಕಲೆಗಳು ಮನಃ ಪರಿವರ್ತನೆಗೆ ಉತ್ತಮ ಮದ್ದುಗಳು. ಮುಂದಿನ ದಿನಗಳಲ್ಲಿ ಬದಲಾಗಿ ಸಮಾಜದ ಮುಖ್ಯವಾಹಿನಿಗೆ ಬಂದು ಉತ್ತಮ ಜೀವನ ನಡೆಸಬೇಕು ಎಂದು ಕೈದಿಗಳಿಗೆ ಕಿವಿಮಾತು ಹೇಳಿದರು.
ದಕ್ಷಿಣ ವಲಯ ಕಾರಾಗೃಹಗಳ ಮಹಾನಿರೀಕ್ಷಕ ಸೋಮಶೇಖರ್ ಮಾತನಾಡಿ, ಕಾರಾಗೃಹ ಬಂಧಿಗಳನ್ನು ಈ ರೀತಿ ನಾಟಕಗಳು ಹಾಗೂ ಕಲೆಯಲ್ಲಿ ತೊಡಗಿಸುವುದರಿಂದ ಅವರ ಮನಃ ಪರಿವರ್ತನೆ ಸಾಧ್ಯವಾಗುತ್ತದೆ. ಕಾರಾಗೃಹದ ಬಂಧಿಗಳಲ್ಲಿ ವಿವಿಧ ಕಲೆಗಳು ಅಡಗಿರುತ್ತವೆ ಎಂದು ತಿಳಿಸಿದರು.
ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್.ರಮೇಶ್ ಮಾತನಾಡಿ, ಕನ್ನಡ ಅಕ್ಷರವನ್ನು ಓದಲು, ಬರೆಯಲು ಬಾರದವರು ಸಹ ನಾಟಕದಲ್ಲಿ ಪಾತ್ರಧಾರಿಗಳಾಗಿ ಅಭಿನಯಿಸಿದ್ದಾರೆ. ಮೂರು ತಿಂಗಳ ಕಾಲ ನಿರಂತರವಾಗಿ ಅಭ್ಯಾಸ ಮಾಡಿ ನಾಟಕ ಪ್ರದರ್ಶನ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಸಂಚಲನ ರಂಗಸಂಸ್ಥೆಯ ಅಧ್ಯಕ್ಷ ದೀಪಕ್ ಮಾತನಾಡಿ, ಕಾರಾಗೃಹದ ಬಂಧಿಗಳಿಗೆ ಕನ್ನಡ ವರ್ಣಮಾಲೆ ಕಲಿಸಿ ನಾಟಕ ಮಾಡುವ ಹಂತಕ್ಕೆ ಬೆಳೆಸಲಾಗಿದೆ. ಯಾವುದೇ ಮನುಷ್ಯ ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ತೊಡಗಿಸಿಕೊಂಡರೆ ಆತ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ. ಹೀಗಾಗಿ ತಪ್ಪು ಮಾಡಿರುವ ನೀವು ಅದನ್ನು ತಿದ್ದಿಕೊಂಡು ನಡೆಯಬೇಕು. ಸಮಾಜದ ಮುಖ್ಯವಾಹಿನಿಗೆ ಬಂದು ಉತ್ತಮ ಜೀವನ ನಡೆಸಬೇಕು. ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರಾಗೃಹದ ಅಧೀಕ್ಷಕ ಪಿ.ಮಹಾದೇವನಾಯ್ಕ, ಸೈಕಲ್ ಅಗರಬತ್ತಿ ಸಂಸ್ಥೆಯ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.