

| ನವೀನ್ ಬಿಲ್ಗುಣಿ ಶಿವಮೊಗ್ಗ
ರಾಜ್ಯದಲ್ಲಿ ಆನ್ಲೈನ್ ಬೆಟ್ಟಿಂಗ್ ನಿಷೇಧಿಸುವ ಜತೆಗೆ ಹಲವು ಮೊಬೈಲ್ ಆಪ್ಗಳ ಬಳಕೆ ಮೇಲೆ ನಿರ್ಬಂಧ ಹೇರಿ ಸರ್ಕಾರ ಆದೇಶ ಹೊರಡಿಸಿದ್ದರೂ ಆನ್ಲೈನ್ ಜೂಜಾಡುವ ಕೆಲ ಆಪ್ಗಳು ಇನ್ನೂ ಸಕ್ರಿಯವಾಗಿವೆ. ಅದರಂತೆ ಪ್ಲೇಬುಲ್ ಬೆಟ್ಟಿಂಗ್ ಆಪ್ ಜಾಲ ಮಲೆನಾಡು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಳಕಿಗೆ ಬಂದಿದ್ದು, ಪೊಲೀಸರಿಗೆ ತಲೆನೋವು ತರಿಸಿದೆ. ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದಷ್ಟೇ 150ಕ್ಕೂ ಅಧಿಕ ಆನ್ಲೈನ್ ಆಪ್ಗಳನ್ನು ನಿಷೇಧಿಸಿದೆ. ಈ ನಡುವೆ ಹತ್ತು ಹಲವು ಎಪಿಕೆ (ಆಂಡ್ರ್ಯಾಯ್್ಡ ಅಪ್ಲಿಕೇಶನ್ ಪ್ಯಾಕೇಜ್) ಆಪ್ಗಳು ಹುಟ್ಟಿಕೊಂಡಿವೆ. ಯುವಜನತೆ ಸುಲಭವಾಗಿ ಹಣಗಳಿಕೆಗೆ ಇಂಥ ಹೈಟೆಕ್ ಆಪ್ಗಳ ಮೊರೆ ಹೋಗಿದ್ದಾರೆ.
ಬುಕ್ಕಿಗಳ ನಿಯಂತ್ರಣ: ಪ್ಲೇ ಬುಲ್ ಆಪ್ ಜಾಲ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿ ರಾಜ್ಯಾದ್ಯಂತ ವ್ಯಾಪಿಸಿದ್ದು ಆನ್ಲೈನ್ ಜೂಜಾಟದಿಂದ ಹಿಡಿದು ಎಲ್ಲ ರೀತಿಯ ದಂಧೆಗಳೂ ಆಪ್ನಲ್ಲೇ ನಡೆಯುತ್ತವೆ. ಆಯಾ ಜಿಲ್ಲೆ ಅಥವಾ ಪ್ರದೇಶದಲ್ಲಿ ಸ್ಥಳೀಯ ಬುಕ್ಕಿಗಳ ಮೂಲಕ ಕಾರ್ಯಾಚರಣೆಗೊಳ್ಳುತ್ತಿದೆ.
ಪ್ಲೇ ಬುಲ್ ಆಪ್ ಕಾನೂನು ಬಾಹಿರವಾಗಿದ್ದು ಭದ್ರಾವತಿಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಮುಖ್ಯ ಬುಕ್ಕಿಗಳ ಪತ್ತೆಗೆ ಸರ್ವರ್ ಪರಿಶೀಲಿಸಲಾಗುತ್ತಿದೆ. ಬುಕ್ಕಿಗಳು ದೇಶದೊಳಗೂ ಇರಬಹುದು ಅಥವಾ ವಿದೇಶಗಳಲ್ಲೂ ಇರಬಹುದು. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. | ಬಿ.ಎಂ.ಲಕ್ಷ್ಮಿಪ್ರಸಾದ್ ಶಿವಮೊಗ್ಗ ಎಸ್ಪಿ
ಸಿಸಿಬಿ ಕಾರ್ಯಾಚರಣೆ: ರಾಜಧಾನಿ ಬೆಂಗಳೂರಲ್ಲಿ ಪ್ಲೇ ಬುಲ್ ಆಪ್ ಮೂಲಕ ಜೂಜಾಟ ನಡೆಸುತ್ತಿದ್ದ ತಂಡವನ್ನು ಇತ್ತೀಚೆಗೆ ಸಿಸಿಬಿ ಪೊಲೀಸರು ಬೇಧಿಸಿದ್ದರು. ಅದು ಕೇವಲ ಒಂದು ಭಾಗವಷ್ಟೇ ಆಗಿದ್ದು ಅದರ ಮೂಲ ಹುಡುವುದು ಸಾಧ್ಯವಾಗಿಲ್ಲ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಭದ್ರಾವತಿ ನೂಟೌನ್ ಠಾಣೆ ವ್ಯಾಪ್ತಿಯಲ್ಲಿ ಪ್ಲೇಬುಲ್ ಆಪ್ ಸಕ್ರಿಯವಾಗಿರುವ ಬಗ್ಗೆ ಪ್ರೊಬೇ ಷನರಿ ಡಿವೈಎಸ್ಪಿ ಗಜಾನನ ಸುತಾರ ಅವರಿಗೆ ಮಾಹಿತಿ ಸಿಗುತ್ತದೆ. ತಕ್ಷಣಕ್ಕೆ ಎಚ್ಚೆತ್ತುಕೊಂಡ ಅವರು ಆಪ್ ಡೌನ್ಲೋಡ್ ಮಾಡಿಕೊಳ್ಳುತ್ತಾರೆ. ಆದರೆ ಬುಕ್ಕಿಗಳು ಕೂಡಲೇ ತಮ್ಮ ನೆಟ್ವರ್ಕ್ನೊಳಗೆ ಸೇರಿಸಿಕೊಳ್ಳು ವುದಿಲ್ಲ. ಸತತ ಪ್ರಯತ್ನದಿಂದ ನೆಟ್ವರ್ಕ್ನೊಳಗೆ ಸೇರಿಕೊಳ್ಳು ತ್ತಾರೆ. ಅದಾದ ಬಳಿಕ ಇಬ್ಬರನ್ನು ಬಂಧಿಸಿದ್ದಾರೆ. ಸ್ಥಳೀಯ ಬುಕ್ಕಿ ಯೊಬ್ಬ ಪರಾರಿಯಾಗಿದ್ದಾನೆ.
ಏನಿದು ಆ್ಪಪ್: ಇದೊಂದು ಸಂಪೂರ್ಣ ಎಪಿಕೆ ನೆಟ್ವರ್ಕ್ ಆಧಾರಿತ ಜೂಜಾಟ. ಸ್ಮಾರ್ಟ್ಫೋನ್ ಮತ್ತು ಡೇಟಾ ಇದ್ದರೆ ಸಾಕು. ಹೊರಗಿನ ವ್ಯಕ್ತಿಗಳನ್ನು ಬುಕ್ಕಿಗಳು ತಕ್ಷಣಕ್ಕೆ ತಮ್ಮ ನೆಟ್ವರ್ಕ್ಗೆ ಸೇರಿಸಿಕೊಳ್ಳುವುದಿಲ್ಲ. ನಂಬಿಕೆ ಬಂದ ಮೇಲೆ ಅಲ್ಲಿ ಒಂದು ಐಡಿ (ಗುರುತಿನ ಪತ್ರ) ಕ್ರಿಯೇಟ್ ಆಗುತ್ತದೆ. ಆನಂತರ ಆನ್ಲೈನ್ ಮೂಲಕವೇ ಕ್ರಿಕೆಟ್ ಬಿಗ್ಬ್ಯಾಷ್, ಕ್ಯಾಸಿನೋ ಮತ್ತು ಅಂದರ್ ಬಾಹರ್ ಸೇರಿ ತಮಗೆ ಬೇಕಾದ ಗೇಮ್ಳಿಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಾರೆ. ಹಣವನ್ನು ಚಿಪ್ಸ್ ಆಗಿ ಕನ್ವರ್ಟ್ ಮಾಡಲಾಗುತ್ತದೆ. ಗೆದ್ದ ಹಣವನ್ನು ಚಿಪ್ಸ್ ಮಾದರಿಯಲ್ಲೇ ನೀಡಲಾಗುತ್ತದೆ. ಅದು ಆನಂತರ ಹಣಕ್ಕೆ ಕನ್ವರ್ಟ್ ಆಗಲಿದೆ. ಫೋನ್ ಪೇ ಅಥವಾ ಗೂಗಲ್ ಪೇ ಮೂಲಕ ಹಣವನ್ನು ಜೂಜುಕೋರರಿಗೆ ನೀಡಲಾಗುತ್ತದೆ.