ಪ್ರಾಣಭಯದಲ್ಲಿ ಆಟ-ಪಾಠ, ಶಿಕ್ಷಣ ಸಚಿವರ ತವರಿನಲ್ಲಿ ಮಕ್ಕಳಿಗೆ ಸಂಕಷ್ಟ

sakrebail govt school
ಕುಸಿಯುವ ಸ್ಥಿತಿಯಲ್ಲಿರುವ ಸಕ್ರೆಬೈಲ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆ.
Published on

ನವೀನ್ ಬಿಲ್ಗುಣಿ ಶಿವಮೊಗ್ಗ
ಶಾಲಾ ಸಾಕ್ಷರತಾ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತವರು ಕ್ಷೇತ್ರ ಆನವಟ್ಟಿಯಲ್ಲಿ ಎರಡು ದಿನಗಳ ಹಿಂದಷ್ಟೇ ಸರ್ಕಾರಿ ಶಾಲೆ ಕಟ್ಟಡ ಕುಸಿದು ಮಕ್ಕಳು ಅಪಾಯದಿಂದ ಪಾರಾಗಿದ್ದರು. ಇದೀಗ ಮತ್ತೊಂದು ಕಟ್ಟಡ ಅಪಾಯಕಾರಿ ಸ್ಥಿತಿಯಲ್ಲಿದ್ದು, ಮಕ್ಕಳು ಪ್ರಾಣಭಯದಲ್ಲೇ ದಿನನಿತ್ಯ ಪಾಠ ಕೇಳುವಂತಾಗಿದೆ. ಸ್ವಲ್ಪ ಮೈಮರೆತರೂ ಅಪಾಯ ನಿಶ್ಚಿತ.

ಜಿಲ್ಲಾದ್ಯಂತ ಮಳೆ ಅಬ್ಬರ ಮುಂದುವರಿದಿದೆ. ಜುಲೈ ತಿಂಗಳಲ್ಲಿ ವಾಡಿಕೆಗಿಂತ 30 ಸೆಂ.ಮೀ ಹೆಚ್ಚು ಮಳೆ ಬಿದ್ದಿದೆ. ಶಿವಮೊಗ್ಗ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಸಕ್ರೆಬೈಲ್ ಸರ್ಕಾರಿ ಶಾಲೆಗಳ ಎರಡು ಕೊಠಡಿಗಳ ಗೋಡೆಗಳು ಈಗಲೋ ಆಗಲೋ ಕುಸಿಯುವ ಸ್ಥಿತಿಯಲ್ಲಿವೆ. ನಾಲ್ಕೈದು ದಿನಗಳಿಂದ ಇಲಾಖೆ ಗಮನಕ್ಕೆ ತಂದರೂ ಅಧಿಕಾರಿಗಳು ಕಿವಿಗೊಡುತ್ತಿಲ್ಲ. ಈ ಮೂಲಕ ಶಿಕ್ಷಣ ಇಲಾಖೆ ಮಕ್ಕಳ ಜೀವದ ಜತೆ ಚೆಲ್ಲಾಟವಾಡುತ್ತಿದೆ.
ಸಕ್ರೆಬೈಲ್‌ನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ ಒಂದೇ ಆವರಣದಲ್ಲಿವೆ. ಒಂದರಿಂದ 5ನೇ ತರಗತಿವರೆಗೆ 70ಕ್ಕೂ ಅಧಿಕ ಮಕ್ಕಳು ಓದುತ್ತಿದ್ದಾರೆ. ಅಂಗನವಾಡಿಗೂ ಹತ್ತಾರು ಮಕ್ಕಳು ನಿತ್ಯ ಬರುತ್ತಿವೆ. ಅಪಾಯಕಾರಿ ಸ್ಥಿತಿಯ ಕೊಠಡಿಗಳಲ್ಲೇ ಮಕ್ಕಳಿಗೆ ಪಾಠ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕ್ಲಾಸ್ ರೂಂನಲ್ಲಿ ಬಿಸಿಯೂಟ ತಯಾರಿ: ಬಿಸಿಯೂಟದ ಕೊಠಡಿ ಸಂಪೂರ್ಣ ಶಿಥಿಲವಾಗಿದೆ. ಮಳೆಯಿಂದ ಕೊಠಡಿ ಮೇಲ್ಛಾವಣಿ ಸೋರುತ್ತಿದೆ. ಗೋಡೆಗಳು ಬಿರುಕು ಬಿಟ್ಟಿವೆ. ಹಾಗಾಗಿ ತರಗತಿ ಕೊಠಡಿಯಲ್ಲಿ ಮಕ್ಕಳಿಗೆ ಬಿಸಿಯೂಟ ಸಿದ್ಧಪಡಿಸಲಾಗುತ್ತಿದೆ. ವಿಪರ್ಯಾಸವೆಂದರೆ ಇದೇ ಕೊಠಡಿಯಲ್ಲಿ ಪಾಠವನ್ನೂ ಮಾಡಲಾಗುತ್ತಿದೆ. ಗೋಡೆ ಕುಸಿದರೆ ಮಕ್ಕಳ ಜೀವಕ್ಕೆ ಯಾರು ಹೊಣೆ ಎಂಬುದು ಸ್ಥಳೀಯರ ಪ್ರಶ್ನೆ. ಇದು ಕೇವಲ ಸಕ್ರೆಬೈಲ್ ಶಾಲೆಯೊಂದರ ಸ್ಥಿತಿಯಲ್ಲ. ಜಿಲ್ಲೆಯಲ್ಲಿ ನೂರಕ್ಕೂ ಅಧಿಕ ಸರ್ಕಾರಿ ಶಾಲೆಗಳ ಗೋಡೆಗಳು ಕುಸಿಯುವ ಸ್ಥಿತಿಯಲ್ಲಿವೆ. ಇದು ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಸರ್ಕಾರಿ ಶಾಲೆಗಳ ದುಸ್ಥಿತಿಗೆ ಹಿಡಿದ ಕೈಗನ್ನಡಿ.
ಶಿಥಿಲವಾಗಿದೆ ಶಾಲಾ ಕಾಂಪೌಂಡ್: ಶಾಲೆಯ ಕಾಂಪೌಂಡ್ ಕೂಡ ಸಂಪೂರ್ಣ ಶಿಥಿಲಗೊಂಡಿದೆ. ಕನ್ನಡ ಶಾಲೆ ಮತ್ತು ಉರ್ದು ಶಾಲೆಯ ತಲಾ ಒಂದೊಂದು ಕೊಠಡಿ ಮಳೆಗೆ ಸ್ವಲ್ಪ ಕುಸಿದಿದ್ದು, ಯಾವುದೇ ಕ್ಷಣದಲ್ಲಿ ಗೋಡೆಗಳು ಕುಸಿಯಬಹುದು. ಈ ಬಗ್ಗೆ ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಶಿಕ್ಷಣ ಇಲಾಖೆಗೆ ಅನೇಕ ಬಾರಿ ಮನವಿ ಮಾಡಿದ್ದರೂ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿಲ್ಲ.

ತಾಲೂಕು ಶಿವಮೊಗ್ಗ, ಕ್ಷೇತ್ರ ತೀರ್ಥಹಳ್ಳಿ
ಶಿವಮೊಗ್ಗ ತಾಲೂಕು ವ್ಯಾಪ್ತಿಯಲ್ಲಿ ಸಕ್ರೆಬೈಲ್ ಇದೆ. ಆದರೆ ಈ ಗ್ರಾಮ ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಶಾಲೆಯಲ್ಲಿ 70 ಮಕ್ಕಳು ಓದುತ್ತಿದ್ದಾರೆ. ಆದರೆ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬುದು ಗ್ರಾಮಸ್ಥರಿಗೆ ಜಿಜ್ಞಾಸೆ ಮೂಡಿಸಿದೆ. ಶಾಲೆ ಅವ್ಯವಸ್ಥೆ ಬಗ್ಗೆ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಹೇಳಬೇಕೋ ಅಥವಾ ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತರಬೇಕೋ ಎಂಬ ಗೊಂದಲ ಸೃಷ್ಟಿಸಿದೆ.

ಸಕ್ರೆಬೈಲ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಹಾಗೂ ಉರ್ದು ಶಾಲೆ ಕೊಠಡಿಗಳು ಕುಸಿಯುವ ಸ್ಥಿತಿಯಲ್ಲಿವೆ. ಅದೇ ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಅಡುಗೆ ಕೊಠಡಿ ಸೋರುತ್ತಿದ್ದು, ಶಿಥಿಲಾವಸ್ಥೆ ತಲುಪಿದೆ. ಯಾವುದೇ ಕ್ಷಣದಲ್ಲಿ ಗೋಡೆಗಳು ಕುಸಿಯಬಹುದು. ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.- ಅಭಿಲಾಷ್. ಸಕ್ರೆಬೈಲ್ ನಿವಾಸಿ ಸಕ್ರೆಬೈಲ್‌ನಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳ ಗೋಡೆಗಳು ಶಿಥಿಲಾವಸ್ಥೆಯಲ್ಲಿ ಇರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಯಾರೂ ಮನವಿ ಅಥವಾ ದೂರುಗಳನ್ನು ನನಗೆ ಕೊಟ್ಟಿಲ್ಲ. ಆದರೂ ಖುದ್ದು ಶಾಲೆಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ.- ರಮೇಶ್, ಶಿವಮೊಗ್ಗ ಬಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net