

ಶಿರಸಿ: ಸಹಾಯ ಟ್ರಸ್ಟ್ ಸಹಯೋಗದಲ್ಲಿ ನಡೆಯುತ್ತಿರುವ ಕಸ್ತೂರಬಾನಗರದ ಲಿಟ್ಲ ಫ್ಲವರ್ ಶಾಲೆಯ ವಾರ್ಷಿಕ ಕ್ರೀಡಾಕೂಟ ಇತ್ತೀಚೆಗೆ ನಡೆಯಿತು.
ಕ್ರೀಡಾಜ್ಯೋತಿ ಬೆಳಗಿಸಿ ಪಥಸಂಚಲನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಲೆಯ ಅಧ್ಯಕ್ಷ ಸತೀಶ್ ರಾಮಾ ಶೆಟ್ಟಿ, ಮಕ್ಕಳಿಗೆ ಪಾಠದ ಜತೆಗೆ ಆಟವೂ ಮುಖ್ಯ. ವಿದ್ಯಾರ್ಥಿಗಳು ದೈಹಿಕವಾಗಿ ಸಬಲರಾದರೆ ಮಾನಸಿಕವಾಗಿಯೂ ಸಬಲರಾಗಲು ಸಾಧ್ಯ. ಬಾಲ್ಯದಿಂದಲೇ ಕ್ರೀಡೆಯಲ್ಲಿ ಪ್ರಾವೀಣ್ಯ ಪಡೆಯುಬತ್ತ ಸಾಗಿದರೆ ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟು ಆಗಿ ಹೊರಹೊಮ್ಮಲು ಸಾಧ್ಯವಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಸೂಕ್ತ ಮಾರ್ಗದರ್ಶನ ಸಿಕ್ಕಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬಹುದಾದ ವಿದ್ಯಾರ್ಥಿಗಳೂ ನಮ್ಮಲ್ಲಿದ್ದಾರೆ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಸರೋಜಾ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಕಾರ್ಯದರ್ಶಿ ಶಾರದಾ ಶೆಟ್ಟಿ, ಮಂಜುರ್ ಸಾಬ್ ಇತರರಿದ್ದರು.ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಿಕ್ಷಕಿ ಅನ್ನಪೂರ್ಣ ತಡಸ್ ಅವರು ಕ್ರೀಡೆಯ ಮಹತ್ವ ತಿಳಿಸಿದರು. ಸಹ ಶಿಕ್ಷಕಿ ಸುಧಾ ಉದುಪುಡಿ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು. ಸಹ ಶಿಕ್ಷಕಿ ಶಮೀಮ್ ಬಾನು ವಂದಿಸಿದರು. ಆಟೋಟ ಸ್ಪರ್ಧೆಗಳು ಜರುಗಿದವು.