ಪ್ಲಾಸ್ಟಿಕ್ ಬಳಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆ

18cmy2
Published on

ಚಿಕ್ಕಬಳ್ಳಾಪುರ: ಚಿಂತಾಮಣಿ ಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ಕೈಗೊಂಡು ಅಕ್ರಮವಾಗಿ ಬಳಸುತ್ತಿದ್ದ ಮಾರಕ ಪ್ಲಾಸ್ಟಿಕ್ ವಶಪಡಿಸಿಕೊಂಡಿರುವ ಅಧಿಕಾರಿಗಳು, ಮತ್ತೆ ನಿಯಮ ಉಲ್ಲಂಘಿಸಿದ್ದಲ್ಲಿ ಅಂಗಡಿಗಳ ಪರವಾನಗಿ ರದ್ದುಪಡಿಸುವುದರ ಜತೆಗೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಬಳ್ಳಾಪುರವನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸುವ ಯೋಜನೆಯನ್ನು ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧೆಡೆ ಕಾರ್ಯಾಚರಣೆ ಕೈಗೊಂಡು ಪ್ಲಾಸ್ಟಿಕ್ ವಶಪಡಿಸಿಕೊಂಡು ಅಂಗಡಿ ಮಾಲೀಕರಿಗೆ ದಂಡ ವಿಧಿಸಲಾಗುತ್ತಿದೆ. ಅದರಂತೆ ಚಿಂತಾಮಣಿ ನಗರಸಭೆಯ ಅಧಿಕಾರಿಗಳ ತಂಡ ಇಲ್ಲಿನ 40 ಕ್ಕೂ ಹೆಚ್ಚು ಅಂಗಡಿಗಳ ಮೇಲೆ ದಾಳಿ ನಡೆಸಿ 5,500 ರೂಗಳ ದಂಡ ವಸೂಲಿ ಮಾಡಿದೆ.
ಪ್ಲಾಸ್ಟಿಕ್ ನಿಷೇಧ ಜಾರಿ ಆ.15 ರಿಂದ ಜಾರಿಗೆಗೆ ಬಂದಿದೆ. ಆದರೂ ಕೆಲವರು ಕದ್ದು ಮುಚ್ಚಿ ಬಳಸುತ್ತಿದ್ದಾರೆ. ಇದರ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷ್ಯ ತೋರಿದ್ದಾರೆ. ಇದಕ್ಕೆ ವಿವಿಧೆಡೆ ಅಂಗಡಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಮತ್ತೆ ನಿಯಮ ಉಲ್ಲಂಘಿಸಿದ್ದಲ್ಲಿ ಪರವಾನಗಿಯನ್ನು ರದ್ದುಪಡಿಸುವುದರ ಜತೆಗೆ ಪುರಸಭೆ ಕಾಯ್ದೆ ಪ್ರಕಾರ ಕ್ರಿಮಿನಲ್ ಪ್ರಕರಣ ಸಹ ದಾಖಲಿಸಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net