

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತೆ ದೇಶದ ನಂ.1 ಸ್ವಚ್ಛನಗರಿ ಪಟ್ಟ ಕೊಡಿಸಲು ಅಣಿಯಾಗುತ್ತಿರುವ ನಗರಪಾಲಿಕೆ ಭಾನುವಾರ ವಿವಿಧ ಸಂಘ ಸಂಸ್ಥೆಗಳೊಂದಿಗೆ ಆಯೋಜಿಸಿದ್ದ ‘ಮಹಾ ಮೈಸೂರು ಪ್ಲಾಗತಾನ್’ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು.
ಪ್ಲಾಗತಾನ್‌ನಲ್ಲಿ ನೂರಾರು ಜನ ಭಾಗವಹಿಸಿ ಮೈಸೂರನ್ನು ಮತ್ತೆ ಸ್ವಚ್ಛ ನಗರಿಯಾಗಿ ಮಾಡುವ ಸಂಕಲ್ಪ ಕೈಗೊಂಡರು. ಹೆಚ್ಚಾಗಿ ಯುವ ಸಮುದಾಯ ಭಾಗಿಯಾಗಿದ್ದು ವಿಶೇಷವಾಗಿತ್ತು. ಅವರೆಲ್ಲ ಬಟ್ಟೆ ಚೀಲ ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ಓಡುತ್ತಲೇ ಪ್ಲಾಸ್ಟಿಕ್ ಹೆಕ್ಕಿ ಸಂಗ್ರಹಿಸಿದರು. ಆ ಮೂಲಕ ಮಹಾನಗರ ಪಾಲಿಕೆಯ ಸ್ವಚ್ಛತಾ ಅಭಿಯಾನಕ್ಕೆ ಸಾಥ್ ನೀಡಿದರು.
ಪ್ಲಾಗತಾನ್‌ನಲ್ಲಿ ಭಾಗವಹಿಸಿದ್ದ 1100ಕ್ಕೂ ಹೆಚ್ಚು ಜನರನ್ನು ಮೂರು ತಂಡಗಳಾಗಿ ವಿಭಾಗ ಮಾಡಲಾಯಿತು. ಎಲ್ಲರಿಗೂ ಬಟ್ಟೆ ಬ್ಯಾಗ್ ಮತ್ತು ಕೈ ಚೀಲ ವಿತರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ 3 ಕಿ.ಮೀ. ಓಡುತ್ತಾ ಪ್ಲಾಸ್ಟಿಕ್ ಸಂಗ್ರಹಿಸಲು ಸೂಚಿಸಲಾಯಿತು.
ಮೂರು ತಂಡಗಳು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಿಂದ ಓಟ ಆರಂಭಿಸಿ ಹಾರ್ಡಿಂಜ್ ವೃತ್ತ, ಬಸವೇಶ್ವರ ವೃತ್ತ, ಪಾಠ ಶಾಲೆ, ಪಾಲಿಕೆ ರಸ್ತೆ, ಕೆ.ಆರ್.ವೃತ್ತ, ದೇವರಾಜ ಅರಸು ರಸ್ತೆ, ಶಿವರಾಮ ಪೇಟೆ ರಸ್ತೆಗಳಲ್ಲಿ ಓಡಿ ಪ್ಲಾಸ್ಟಿಕ್ ಸಂಗ್ರಹಿಸಿ ಚಿಕ್ಕ ಗಡಿಯಾರದ ಮೂಲಕ ಪುರಭವನದಲ್ಲಿ ಓಟವನ್ನು ಅಂತ್ಯಗೊಳಿಸಿದವು.
ಮಯೂರ್ ಪ್ರಥಮ: 2.5 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿದ ಮಯೂರ್‌ಗೆ ನಗರ ಪಾಲಿಕೆ ವತಿಯಿಂದ 10 ಸಾವಿರ ರೂ. ನಗದು ಬಹುಮಾನ ನೀಡಲಾಯಿತು. ಜತೆಗೆ ಕಡಿಮೆ ಅವಧಿಯಲ್ಲಿ ಹೆಚ್ಚು ಪ್ಲಾಸ್ಟಿಕ್ ಸಂಗ್ರಹಿಸಿದ 20 ಜನರಿಗೆ ಸಮಾಧಾನಕರ ಬಹುಮಾನವಾಗಿ 500 ರೂ. ನೀಡಲಾಯಿತು. ಪ್ಲಾಗತಾನ್ ಮೂಲಕ ಮೂರು ತಂಡಗಳು ಬರೋಬರಿ 2 ಟನ್‌ಗೂ ಹೆಚ್ಚಿನ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿದವು. ಪ್ಲಾಗತಾನ್‌ಗೂ ಚಾಲನೆಗೂ ಮುನ್ನ ಬೀದಿ ನಾಟಕದ ಮೂಲಕ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು. ಡೊಳ್ಳು ಚಂದ್ರ ತಂಡ ನೀಡಿದ ಡೊಳ್ಳು ನೃತ್ಯ ಪ್ರದರ್ಶನ ಗಮನ ಸೆಳೆಯಿತು.
ಚಾಲನೆ: ಪ್ಲಾಗತಾನ್‌ಗೆ ಸ್ವಚ್ಛತಾ ರಾಯಬಾರಿ ಜಾವಗಲ್ ಶ್ರೀನಾಥ್ ಚಾಲನೆ ನೀಡಿದರು. ಬಳಿಕ ಮಾತನಾಡಿ, ಮೈಸೂರು ಮತ್ತೆ ದೇಶದ ನಂ.1 ಸ್ವಚ್ಛನಗರಿ ಪಟ್ಟ ಪಡೆಯಬೇಕು. ಇದಕ್ಕೆ ಪೌರಕಾರ್ಮಿಕರ ಪ್ರೋತ್ಸಾಹ ಮುಖ್ಯವಾಗಿದೆ. ಜತೆಗೆ ಸ್ವಚ್ಛ ಭಾರತ್ ಅಭಿಯಾನದಲ್ಲಿ ಸಿಟಿಜನ್ ಫೀಡ್‌ಬ್ಯಾಕ್ ಕೂಡ ಮುಖ್ಯವಾಗಿದೆ. ಈ ಬಗ್ಗೆ ಎಲ್ಲ ಕಡೆ ಚರ್ಚೆ ನಡೆಯಬೇಕು ಎಂದರು.
ಮನೆಯಲ್ಲೇ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ ನೀಡಬೇಕು. ಆಗ ಪೌರಕಾರ್ಮಿಕರ ಕೆಲಸ ಸುಲಭವಾಗುತ್ತದೆ. ಮನೆಗಳಲ್ಲಿ ತ್ಯಾಜ್ಯವನ್ನು ಪ್ಲಾಸ್ಟಿಕ್ ಬದಲು ಸ್ಟೀಲ್ ಡಬ್ಬಗಳಲ್ಲಿ ಸಂಗ್ರಹಿಸಬೇಕು ಎಂದರು.
ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿದರು. ಶಾಸಕ ಎಲ್.ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್, ಪಾಲಿಕೆ ಸದಸ್ಯರಾದ ರಮೇಶ್, ಶೋಭಾ ಸುನೀಲ್, ಮ.ವಿ.ರಾಮಪ್ರಸಾದ್, ಎಸ್.ಬಿ.ಎಂ.ಮಂಜು, ಸತ್ಯರಾಜು, ಎಂ.ಡಿ.ನಾಗರಾಜು, ಅಂತಾರಾಷ್ಟ್ರೀಯ ಯೋಗಪಟು ಖುಷಿ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಆರೋಗ್ಯಾಧಿಕಾರಿಗಳಾದ ಡಾ.ಜಯಂತ್, ಡಾ.ಜಿ.ನಾಗರಾಜು, ಪರಿಸರ ಇಂಜಿನಿಯರ್ ಮೈತ್ರಿ, ಅಪೋಲೋ ಆಸ್ಪತ್ರೆಯ ಮುಖ್ಯಸ್ಥ ರತೇಶ್ ರೆಡ್ಡಿ , ಭಾರತ್ ಪೆಟ್ರೋಲಿಯಂನ ವ್ಯವಸ್ಥಾಪಕ ಟಿ.ಎಂ.ಜಿ.ರಾವ್ ಇತರರಿದ್ದರು.