ನದಿ ಒಡಲು ಸೇರುತ್ತಿದೆ ಪ್ಲಾಸ್ಟಿಕ್ ತ್ಯಾಜ್ಯ

tyajya
ಶಾಂಭವಿ ನದಿಯಲ್ಲಿ ರಾಶಿ ಬಿದ್ದಿರುವ ತ್ಯಾಜ್ಯ.
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಎಲ್ಲೆಡೆ ಸ್ವಚ್ಛತೆಯ ಬಗ್ಗೆ ಆಗಾಗ್ಗೆ ಅಭಿಯಾನ, ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳು ನಡೆಯುತ್ತಿದ್ದರೂ ನಾಗರಿಕರ ಅನಾಗರಿಕ ವರ್ತನೆಯಿಂದಾಗಿ ಪ್ಲಾಸ್ಟಿಕ್ ತ್ಯಾಜ್ಯಗಳು ನದಿಯ ಒಡಲು ಸೇರುತ್ತಿವೆ.

ಜಿಲ್ಲೆಯಾದ್ಯಂದ ಹಲವಾರು ನದಿಗಳು ಹರಿದು ಕಡಲು ಸೇರುತ್ತಿವೆ. ಜಿಲ್ಲೆಯ ಸ್ವರ್ಣ, ಶಾಂಭವಿ, ಪಾಪನಾಶಿನಿ, ಸೀತಾ ನದಿಗಳು ಸೇರಿದಂತೆ ಸಣ್ಣ ನದಿ ತೊರೆಗಳಲ್ಲಿ ತ್ಯಾಜ್ಯವು ಹೇರಳ ಪ್ರಮಾಣದಲ್ಲಿ ವಿಲೇವಾರಿಯಾಗುತ್ತಿದ್ದು ನೀರು ಕಲುಷಿತವಾಗುತ್ತಿದೆ. ಅಲ್ಲದೆ ಜಲಚರಗಳಿಗೂ ಕಂಟಕವಾಗಿದೆ.

ತ್ಯಾಜ್ಯದ ಕಟ್ಟುಗಳನ್ನು ಕಿಡಿಗೇಡಿಗಳು ನದಿಗೆ ಸುರಿಯುವ ಪರಿಣಾಮ ನದಿಯಲ್ಲಿ ತ್ಯಾಜ್ಯದ ರಾಶಿಗಳು ಗೋಚರಿಸುತ್ತಿವೆ. ಅಲ್ಲದೆ ಅಣೆಕಟ್ಟು ಪ್ರದೇಶದಲ್ಲಿ ರಾಶಿ ರಾಶಿ ತ್ಯಾಜ್ಯ ನದಿಯ ಒಡಲು ಸೇರುತ್ತಿದೆ. ಪಶ್ಚಿಮಘಟ್ಟದಲ್ಲಿ ಹುಟ್ಟಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹರಿದು ಸಾವಿರಾರು ಎಕರೆ ಕೃಷಿ ಭೂಮಿಗೆ ವರದಾನವಾಗುವ ನದಿ ಮೂಲಗಳು ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಸೇರುತ್ತಿರುವುದರ ಪರಿಣಾಮ ಕೃಷಿ ಕಾರ್ಯಕ್ಕೂ ತೊಂದರೆಯಾಗಿದೆ.

ನದಿಯಲ್ಲಿ ರಾಶಿ ರಾಶಿ ತ್ಯಾಜ್ಯ: ರಾತ್ರಿ ವೇಳೆ ಹಾಗೂ ವಾಹನಗಳಲ್ಲಿ ಅತ್ತಿತ್ತ ಸಾಗುವ ಕೆಲವರು ತ್ಯಾಜ್ಯವನ್ನು ತಂದು ನದಿಗೆ ಎಸೆಯುವುದರ ಪರಿಣಾಮ ಅಣೆಕಟ್ಟುಗಳ ಪಕ್ಕದಲ್ಲಿ ಗಬ್ಬೆದ್ದು ನಾರುವ ಸ್ಥಿತಿ ನಿರ್ಮಾಣವಾಗಿದೆ. ಪ್ಲಾಸ್ಟಿಕ್ ತ್ಯಾಜ್ಯದ ಜೊತೆಗೆ ಕೋಳಿ ತ್ಯಾಜ್ಯವನ್ನೂ ನದಿಗೆ ಸುರಿಯುತ್ತಿದ್ದು ನೀರು ಮಲಿನಗೊಂಡು ಜಲಚರಗಳ ಜೀವಕ್ಕೂ ಕಂಟಕ ಎದುರಾಗಿದೆ. ಬೇಸಿಗೆಯಲ್ಲಿ ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿ ನದಿ ತುಂಬಾ ತ್ಯಾಜ್ಯದ ರಾಶಿಯೇ ಗೋಚರಿಸುತ್ತದೆ. ನೀರು ಕುಡಿಯಲು ಹೋಗುವ ಜಾನುವಾರುಗಳೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸೇವಿಸುತ್ತಿವೆ. ನದಿಗೆ ತ್ಯಾಜ್ಯ ಎಸೆಯುವವರ ವಿರುದ್ಧ ಸೂಕ್ತ ಕ್ರಮದ ಅಗತ್ಯವಿದೆ ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

ಕೃಷಿ ಕಾರ್ಯಕ್ಕೂ ತೊಂದರೆ: ನದಿ ಮೂಲದ ಒಂದಷ್ಟು ಕೃಷಿಕರು ಪ್ರತೀ ಮಳೆಗಾಲ ಸೇರಿದಂತೆ ಬೇಸಿಗೆಯ ಸಂದರ್ಭದಲ್ಲೂ ನದಿಯ ನೀರಿನ್ನೇ ಆಶ್ರಯಿಸಿ ಕೃಷಿ ಚಟುವಟಿಯಲ್ಲಿ ನಿರತರಾಗುತ್ತಾರೆ. ಬೇಸಿಗೆಯಲ್ಲಿ ನೀರಿನ ಜೊತೆಯಲ್ಲಿ ಪ್ಲಾಸ್ಟಿಕ್ ಸಹಿತ ಇತರ ತ್ಯಾಜ್ಯಗಳು ಕೃಷಿ ಭೂಮಿಯನ್ನು ಸೇರುತ್ತಿದ್ದು ಕೃಷಿಕರು ಕಂಗಾಲಾಗಿದ್ದಾರೆ.

ಸೂಕ್ತ ಕ್ರಮ ಅಗತ್ಯ

ನದಿಗಳಿಗೆ ತ್ಯಾಜ್ಯ ಸುರಿಯುವ ಕಿಡಿಗೇಡಿಗಳ ವಿರುದ್ಧ ಸ್ಥಳೀಯ ಪಂಚಾಯಿತಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ. ಇತ್ತೀಚಿನ ಕೆಲ ದಿನಗಳಿಂದ ಬಹುತೇಕ ನದಿಯ ಮೂಲದಲ್ಲಿ ರಾಶಿ ರಾಶಿ ತ್ಯಾಜ್ಯ ವಿಲೇವರಿಯಾಗುತ್ತಿದೆ. ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮದ ಅಗತ್ಯವಿದೆ ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

ಬೇಸಿಗೆಯ ಸಂದರ್ಭದಲ್ಲಿ ನದಿಯನ್ನು ನೋಡಲು ಬೇಸರವಾಗುತ್ತದೆ. ಅಣೆಕಟ್ಟು ಹಾಗೂ ಸೇತುವೆಯ ಬಳಿಯಲ್ಲಿ ರಾಶಿ ರಾಶಿ ತ್ಯಾಜ್ಯಗಳು ತುಂಬಿರುತ್ತದೆ. ಇದರಿಂದ ಜಲ ಮಾಲಿನ್ಯಕ್ಕೂ ಕಾರಣವಾಗುತ್ತದೆ. ತ್ಯಾಜ್ಯ ಎಸೆಯುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ರಮೇಶ್ ಕುಮಾರ್, ಕೃಷಿಕ ಅಣೆಕಟ್ಟಿನ ನೀರನ್ನು ಬಳಸಿ ಕೃಷಿ ಮಾಡುತ್ತೇವೆ. ಇತ್ತೀಚಿನ ದಿನಗಳಲ್ಲಿ ನೀರಿನ ಜತೆಗೆ ತ್ಯಾಜ್ಯವೂ ಕೃಷಿಭೂಮಿಯನ್ನು ಸೇರುತ್ತಿದ್ದು ಕೃಷಿ ಕಾರ್ಯಕ್ಕೆ ತೊಂದರೆಯಾಗುತ್ತಿದೆ. ಬುದ್ಧಿವಂತರಾದ ನಾವು ತ್ಯಾಜ್ಯವನ್ನು ನದಿಗೆ ಎಸೆಯುವುದನ್ನು ಮೊದಲು ನಿಲ್ಲಿಸಬೇಕು. ಸುಂದರ್ ಶೆಟ್ಟಿ, ಪ್ರಗತಿಪರ ಕೃಷಿಕ ನದಿಗೆ ತ್ಯಾಜ್ಯವನ್ನು ಎಸೆಯುವುದರಿಂದ ನಮ್ಮ ಮನೆ ಪರಿಸರ ಸ್ವಚ್ಛವಾಗಬಹುದು. ಆದರೆ ನದಿಯ ಜಲಮೂಲ ಮಾಲಿನ್ಯವಾಗುತ್ತದೆ. ಇದರಿಂದ ಸಾಕಷ್ಟು ಜಲಚರಗಳಿಗೂ ತೊಂದರೆಯಾಗುತ್ತದೆ. ನದಿಗೆ ತ್ಯಾಜ್ಯವನ್ನು ಎಸೆಯುವುದನ್ನು ಮೊದಲು ನಿಲ್ಲಿಸಬೇಕಾಗಿದೆ. ರಮಾನಂದ, ಪರಿಸರ ಪ್ರೇಮಿ https://www.vijayavani.net/community-outreach-program-at-hangarakatte-school https://www.vijayavani.net/leather-ball-cricket-tournament-from-21st

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net