

ಮೈಸೂರು: ‘ನಮ್ಮ ಮೈಸೂರು ಸ್ವಚ್ಛ ಮೈಸೂರು’ಗೆ ಬೆಂಬಲ ನೀಡಿದ ಸಾವಿರಾರು ಜನರು, ನಗರದ ರಿಂಗ್ ರಸ್ತೆಯಲ್ಲಿರುವ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ಸಂಗ್ರಹಣೆ ಮಾಡಿದರು.
ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಶನಿವಾರ ‘ನಮ್ಮ ಮೈಸೂರು ಸ್ವಚ್ಛ ಮೈಸೂರು ಶೀರ್ಷಿಕೆಯಲ್ಲಿ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನಕ್ಕೆ ಬೆಂಬಲ ವ್ಯಕ್ತವಾಯಿತು.
ಈ ಅಭಿಯಾನದಲ್ಲಿ ಪಾಲಿಕೆ ಸಿಬ್ಬಂದಿ, ಕಾನ್ಫಡರೇಷನ್ ಅಫ್ ಇಂಡಿಯನ್ ಇಂಡಸ್ಟ್ರೀಸ್(ಸಿಐಐ) ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳು ಕೈ ಜೋಡಿಸಿದರು.
ಮೈಸೂರಿನ ರಿಂಗ್ ರಸ್ತೆಯುದ್ದಕ್ಕೂ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ರಸ್ತೆಯ ಎರಡೂ ಬದಿಯಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿದರು. ಸಾವಿರಕ್ಕೂ ಹೆಚ್ಚು ಜನರು ‘ನಮ್ಮ ಮೈಸೂರು-ಸ್ವಚ್ಛ ಮೈಸೂರು ಸಂದೇಶ ಸಾರಿದರು.
ಸ್ವಚ್ಛತೆಯೊಂದಿಗೆ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಬೇಕು:
ರಿಂಗ್‌ರಸ್ತೆಯಲ್ಲಿ ಸ್ವಚ್ಛತಾ ಅಭಿಯಾನ ಪೂರ್ಣಗೊಂಡ ನಂತರ ಸಂಗ್ರಹವಾದ ಪ್ಲಾಸ್ಟಿಕ್ ತ್ಯಾಜ್ಯದೊಂದಿಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನಕ್ಕೆ ಸ್ವಯಂ ಸೇವಕರು, ವಿದ್ಯಾರ್ಥಿಗಳು ಆಗಮಿಸಿದರು.
ಈ ವೇಳೆ ಪಾಲಿಕೆಯಿಂದ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನದ ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಸಾಂಸ್ಕೃತಿಕ ನಗರಿ ಮೈಸೂರು ನಗರ ಸ್ವಚ್ಛತೆಗೆ ಹೆಸರಾಗಿದೆ. ಈ ಹಿಂದೆ ಸ್ವಚ್ಛ ನಗರಿ ಎಂಬ ಬಿರುದಿಗೂ ಪಾತ್ರವಾಗಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು.
ಮೈಸೂರು ನಗರದಲ್ಲಿ ಸ್ವಚ್ಛತೆ ಕಾಪಾಡುವುದರೊಂದಿಗೆ ಪರಿಸರಕ್ಕೆ ಧಕ್ಕೆಯಾಗುವ ಏಕ ಬಳಕೆ ಪ್ಲಾಸ್ಟಿಕ್ ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕಾಗಿದೆ. ನಾಗರಿಕರು ಇದಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.