ಕೆರೆ ಆರೋಗ್ಯಕ್ಕೆ ಪ್ಲಾಸ್ಟಿಕ್ ತ್ಯಾಜ್ಯ ಕಂಟಕ

garbage
ಪ್ಲಾಸ್ಟಿಕ್ ತ್ಯಾಜ್ಯ ಕಂಟಕ
Published on

ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
ತಾಲೂಕಿನ ಕೆರೆಗಳನ್ನು ಪ್ಲಾಸ್ಟಿಕ್ ಭೂತ ಬಿಟ್ಟೂ ಬಿಡದಂತೆ ಕಾಡುತ್ತಿದೆ. ಸ್ಥಳೀಯರು ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯ, ಸ್ಥಳೀಯ ಆಡಳಿತಗಳ ಇಚ್ಛಾಶಕ್ತಿಯ ಕೊರತೆಯಿಂದ ಕೆರೆಗಳ ಅಂದ ಅಷ್ಟೇ ಅಲ್ಲ, ಆರೋಗ್ಯ ಕೂಡ ಹಾಳಾಗುತ್ತಿದೆ.
ತಾಲೂಕಿನ ಬಹುತೇಕ ಕೆರೆ ಅಂಗಳದಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ರಾರಾಜಿಸುತ್ತಿದ್ದು, ಅದರ ನಿರ್ವಹಣೆಯೇ ದೊಡ್ಡ ಸವಾಲಾಗಿದೆ.
ಬಹುತೇಕ ಅಂತರ್ಜಲ ಮೂಲಗಳೇ ಕೆರೆಗಳಾಗಿವೆ. ಆದರೆ, ಅದರ ಸಂರಕ್ಷಣೆ ಮಾತ್ರ ಸಾಧ್ಯವಾಗುತ್ತಿಲ್ಲ. ಗ್ರಾಪಂ ವ್ಯಾಪ್ತಿಯ ಕೆರೆಗಳು ಹಾಗೂ ನಗರ ವ್ಯಾಪ್ತಿಯ ಕೆರೆಗಳು ಸೇರಿ ಬಹುತೇಕ ಕೆರೆ ಅಂಗಳ ಪ್ಲಾಸ್ಟಿಕ್ ಆವೃತವಾಗುತ್ತಿವೆ. ಅದರಲ್ಲೂ ಬಾಶೆಟ್ಟಿಹಳ್ಳಿ ಕೈಗಾರಿಕೆ ಪ್ರದೇಶ ಸಮೀಪದ ಕೆರೆಗಳಲ್ಲಿ ಪ್ಲಾಸ್ಟಿಕ್ ಪ್ರಮಾಣ ಹೆಚ್ಚಾಗಿದೆ. ಕೆಲವರು ಕೆರೆಗಳನ್ನು ಕಸ ಹಾಕುವ ತೊಟ್ಟಿ ಮಾಡಿಕೊಂಡಿದ್ದಾರೆ. ಸ್ಥಳೀಯ ಸಂಸ್ಥೆಗಳು ಕಾರ್ಯ ಪ್ರವೃತ್ತರಾಗದಿದ್ದರೆ, ಕೆರೆಗಳ ಅಂದದ ಜತೆಗೆ ಆರೋಗ್ಯ ಕೂಡ ಹಾಳಾಗುತ್ತದೆ.
ಕೆರೆ ಅಂಗಳಕ್ಕೆ ಪ್ಲಾಸ್ಟಿಕ್ ತ್ಯಾಜ್ಯ: ಕೇಂದ್ರ, ರಾಜ್ಯ ಸರ್ಕಾರಗಳು ಪ್ಲಾಸ್ಟಿಕ್ ಬಳಕೆಯನ್ನು ನಿರ್ಬಂಧಿಸುವಂತೆ ಸೂಚನೆ ನೀಡಿದೆ. ಆದರೆ, ಕೆರೆಗಳಲ್ಲಿ ಮಾತ್ರ ಪ್ಲಾಸ್ಟಿಕ್ ರಾರಾಜಿಸುತ್ತಲೇ ಇದೆ. ಜನರು ತಾವು ಬಳಸಿದ ಪ್ಲಾಸ್ಟಿಕ್‌ಗಳನ್ನು ಸಮೀಪದ ಕೆರೆಗೆ ಹಾಕುವುದು, ಕೈಗಾರಿಕೆಗಳು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಂದು ಸುರಿಯುವುದು, ವಾಣಿಜ್ಯ ಮಳಿಗೆಗಳ ತ್ಯಾಜ್ಯ ಸೇರಿ ಸಾಕಷ್ಟು ವಿಧಾನದಲ್ಲಿ ಕೆರೆಯ ಅಂಗಳವನ್ನು ಪ್ಲಾಸ್ಟಿಕ್ ಪ್ರವೇಶಿಸುತ್ತಿದೆ. ಜತೆಗೆ ಸಲೂನ್‌ಗಳ ಕೂದಲು, ಕೋಳಿ ತ್ಯಾಜ್ಯ ಕೂಡ ಕೆರೆಯಂಗಳ ಸೇರುತ್ತಿದ್ದು, ಕೆರೆಗೆ ಮತ್ತಷ್ಟು ಮಾರಕವಾಗುತ್ತಿದೆ.

ನಿರ್ಲಕ್ಷ್ಯ ಧೋರಣೆ:
ಬಯಲುಸೀಮೆ ಜಿಲ್ಲೆಗಳಿಗೆ ಕೆರೆಗಳೇ ಜಲ ಮೂಲ. ಆದರೆ, ಸಂರಕ್ಷಣೆ ವಿಚಾರದಲ್ಲಿ ಮಾತ್ರ ಅನೇಕ ವರ್ಷಗಳಿಂದ ಜಾಣ ಕುರುಡು ವ್ಯಕ್ತವಾಗುತ್ತಿದೆ. ಕೆರೆಗಳಿಗೆ ಒಂದೆಡೆ ಒತ್ತುವರಿ ಸಮಸ್ಯೆಯಾದರೆ, ಇನ್ನೊಂದೆಡೆ ತ್ಯಾಜ್ಯದ ಕಗ್ಗಂಟ್ಟು, ಆದರೆ, ಈ ಬಗ್ಗೆ ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಧೋರಣೆ ಕೆರೆಗಳನ್ನು ಹಾಳುಮಾಡುತ್ತಿದೆ. ನಗರಸಭೆ, ಪಟ್ಟಣ ಪಂಚಾಯಿತಿ, ಗ್ರಾಪಂಗಳು ಸೇರಿ ಬಹುತೇಕ ಎಲ್ಲ ಸ್ಥಳೀಯ ಸಂಸ್ಥೆಗಳು ತ್ಯಾಜ್ಯ ಸುರಿಯದಂತೆ, ಸುರಿದ ತ್ಯಾಜ್ಯ ನಿರ್ವಹಣೆ ಸೇರಿ ಯಾವುದೇ ಕೆಲಸ ಸೂಕ್ತ ಸಮಯಕ್ಕೆ ಆಗುತ್ತಿಲ್ಲ. ಇನ್ನಾದರೂ ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net