ಅಪಾಯ ತಂದೊಡ್ಡುತ್ತಿರುವ ಪ್ಲಾಸ್ಟಿಕ್

28 KRN-1
ಕೆ.ಆರ್.ನಗರ ಪಟ್ಟಣದ ಬಡಾವಣೆಯೊಂದರಲ್ಲಿ ರಸ್ತೆ ಬದಿಯಲ್ಲಿನ ಕಸದಲ್ಲಿ ಪ್ಲಾಸ್ಟಿಕ್ ತಿನ್ನುತ್ತಿರುವ ಹಸು.
Published on

ಕೆ.ಆರ್.ನಗರ: ಪಾಸ್ಟಿಕ್ ಬಳಕೆ ಹೆಚ್ಚಳ ಜಾನುವಾರುಗಳ ಪಾಲಿಗೆ ಶಾಪವಾಗುತ್ತಿದ್ದು, ಅದನ್ನು ತಿಂದ ಹಸುಗಳು ಅನಾರೋಗ್ಯ ಸಮಸ್ಯೆಯಿಂದ ಬಳಲಿ ಮೃತಪಡುತ್ತಿವೆ. ರೈತರು ಮತ್ತು ಪಶು ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ.

ಬೆಲೆ ಬಾಳುವ ಮತ್ತು ಹಾಲು ಕೊಡುವ ಹಸುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ತಿಂದು ಮೃತಪಡುತ್ತಿವೆ. ಸುಲಭವಾಗಿ ಕರಗದ ಪ್ಲಾಸ್ಟಿಕ್ ಬಳಕೆಯನ್ನು ಸರ್ಕಾರ ಅಧಿಕೃತವಾಗಿ ನಿಷೇಧ ಮಾಡಿದ್ದರೂ ಕಾಳಸಂತೆಯಲ್ಲಿ ಪ್ಲಾಸ್ಟಿಕ್ ಕೈ ಬ್ಯಾಗುಗಳು ವ್ಯಾಪಾರಿಗಳ ಕೈ ಸೇರುತ್ತಿವೆ. ಅಂಗಡಿ ಮುಂಗಟ್ಟುಗಳಿಂದ ದಿನಸಿ, ಸಾಂಬಾರ ಪದಾರ್ಥ ಸೇರಿದಂತೆ ಇತರ ವಸ್ತುಗಳನ್ನು ಪೊಟ್ಟಣಗಳಲ್ಲಿ ಕಟ್ಟಿ ಕೊಡಲಾಗುತ್ತಿದ್ದು, ಮನೆಗೆ ತಂದ ನಂತರ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕವರ್‌ಗಳನ್ನು ಬೀದಿಗೆ ಎಸೆಯಲಾಗುತ್ತಿದೆ.

ಜಮೀನುಗಳಲ್ಲಿ ಮೇಯುವ ಮತ್ತು ಮನೆ ಬಳಿಯಲ್ಲಿ ಕಟ್ಟಿದ ಜಾನುವಾರುಗಳು ಮೇವು ತಿನ್ನುವ ಸಂದರ್ಭ ಗಾಳಿಯಿಂದ ಹಾರಿ ಬಂದ ಅಥವಾ ಕುಟುಂಬದವರ ನಿರ್ಲಕ್ಷೃದಿಂದ ಆಕಸ್ಮಿಕವಾಗಿ ಮೇವಿನ ಜತೆ ಪ್ಲಾಸ್ಟಿಕ್ ಕವರ್‌ಗಳು ಜಾನುವಾರುಗಳ ದೇಹ ಸೇರುತ್ತಿವೆ. ಇನ್ನೊಂದು ರೀತಿಯಲ್ಲಿ ಪಟ್ಟಣದಲ್ಲಿ ಮೇವಿಗಾಗಿ ಬಿಡುವ ಹಸುಗಳು ಮೇವು ಅರಸಿಕೊಂಡು ತಿರುಗುವಾಗ ರಸ್ತೆ ಬದಿಗಳಲ್ಲಿನ ತ್ಯಾಜ್ಯ ತಿನ್ನುವಾಗ ಪ್ಲಾಸ್ಟಿಕ್ ಜಾನುವಾರುಗಳ ದೇಹ ಸೇರುತ್ತಿದೆ.

ಪಶು ಪಾಲಾನಾ ಇಲಾಖೆಯ ವೈದ್ಯರ ವರದಿ ಪ್ರಕಾರ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನಲ್ಲಿ ಪ್ರತಿ ವರ್ಷ 20ಕ್ಕೂ ಹೆಚ್ಚು ಜಾನುವಾರುಗಳು ಪ್ಲಾಸ್ಟಿಕ್ ತಿಂದು ಅನಾರೋಗ್ಯಕ್ಕೆ ತುತ್ತಾಗಿ ಮೃತಪಡುತ್ತಿವೆ. ಶವಪರೀಕ್ಷೆ ನಡೆಸಿದ ಸಂದರ್ಭದಲ್ಲಿ ದೇಹಗಳಲ್ಲಿ ಹತ್ತರಿಂದ ಇಪ್ಪತ್ತು ಕೆಜಿಯಷ್ಟು ಪ್ಲಾಸ್ಟಿಕ್ ತಾಜ್ಯ ಕಂಡುಬರುತ್ತಿದೆ ಎನ್ನಲಾಗಿದೆ.

ಹಸುಗಳಲ್ಲೇ ಹೆಚ್ಚು ಪತ್ತೆ: ಹೆಚ್ಚು ಹಾಲು ಉತ್ಪಾದನೆ ಮಾಡಿ ಕೈತುಂಬ ಹಣ ಸಂಪಾದಿಸಿ ಆರ್ಥಿಕವಾಗಿ ಸಬಲರಾಗಬೇಕೆಂಬ ಉದ್ದೇಶದಿಂದ ಪ್ರಸ್ತುತ ಜರ್ಸಿ, ಇಲಾಯಿತಿಯಂತಹ ವಿದೇಶಿ ಹೈಬ್ರೀಡ್ ತಳಿಗಳನ್ನು ರೈತರು ಮತ್ತು ಪಶುಪಾಲಕರು ಸಾಕುತ್ತಿದ್ದಾರೆ. ಅವುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಮೇಯಿಸಿದರೆ ಹಾಲಿನ ಇಳುವರಿ ಕಡಿಮೆ ಎಂದು ಹಳ್ಳಿಗಳಲ್ಲಿ ಜಮೀನು, ಖಾಲಿ ಜಾಗಕ್ಕೆ ಬಿಟ್ಟರೆ, ನಗರ ಪ್ರದೇಶಗಳಲ್ಲಿ ಬೀದಿಗೆ ಬಿಡುತ್ತಾರೆ. ರಸ್ತೆ ಬದಿಗಳಲ್ಲಿ ಕಸದ ಜತೆಯಲ್ಲಿ ತರಕಾರಿ ಸಿಪ್ಪೆಗಳು, ಕೊಳೆತ ಹಣ್ಣುಗಳು, ಅಳಿದುಳಿದ ಆಹಾರ ಪದಾರ್ಥಗಳನ್ನು ತಿನ್ನಲು ಹೋಗುವ ಹಸುಗಳು ಪ್ಲಾಸ್ಟಿಕ್ ಸೇವನೆ ಮಾಡಿ ಅಪಾಯ ತಂದುಕೊಳ್ಳುತ್ತಿವೆ.

ಜಾನುವಾರುಗಳು ಪ್ಲಾಸಿಕ್ ತಿಂದ ತಕ್ಷಣ ಮೃತಪಡುವುದಿಲ್ಲ. ಆದರೆ ಅದು ದೇಹ ಸೇರಿದ ನಂತರ ಮೇವಿನ ಜತೆ ಜೀರ್ಣಗೊಳ್ಳದೆ ಹೊಟ್ಟೆಯಲ್ಲಿ ಶೇಖರಣೆಯಾಗಿ ಕರುಳಿಗೆ ಸುತ್ತಿಕೊಳ್ಳುತ್ತದೆ. ಆಹಾರ ಜೀರ್ಣಕ್ರಿಯೆ ಸುಗಮವಾಗಿ ನಡೆಯದೆ ನಿಧಾನವಾಗಿ ಉಸಿರಾಟ ಹಾಗೂ ಇತರ ಕಾರಣಗಳಿಂದ ಇದ್ದಕ್ಕಿದ್ದಂತೆ ಮೃತಪಡುತ್ತವೆ ಎನ್ನುತ್ತಾರೆ ವೈದ್ಯರು.

ಬಳಕೆಗೆ ಯಾರು ಹೊಣೆ?: ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ಅಪಾಯವನ್ನು ಮನಗಂಡಿರುವ ಸರ್ಕಾರವೇನೋ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಕೈ ತೊಳೆದುಕೊಂಡಿದೆ. ಆದರೆ ಹಲವಾರು ವರ್ಷಗಳಿಂದ ಪ್ಲಾಸ್ಟಿಕ್ ಬಳಕೆಗೆ ಒಗ್ಗಿಕೊಂಡಿರುವ ಜನಸಾಮಾನ್ಯರು ಮನಸ್ಸು ಮಾಡುತ್ತಿಲ್ಲ. ಜನರನ್ನು ಕೇಳಿದರೆ ವ್ಯಾಪಾರಿಗಳು ಕೊಡುವುದನ್ನು ನಿಲ್ಲಿಸಲಿ ಎನ್ನುತ್ತಾರೆ. ವ್ಯಾಪಾರಿಗಳು ಸರ್ಕಾರ ಪ್ಲಾಸ್ಟಿಕ್ ತಯಾರಿಸುವ ಕಾರ್ಖಾನೆಗಳನ್ನು ಮುಚ್ಚಿಸಲಿ ಎನ್ನುತ್ತಾರೆ. ಅಧಿಕಾರಿಗಳು ಇತ್ತ ಸರ್ಕಾರದತ್ತ ಬೊಟ್ಟು ಮಾಡಲಾಗದೆ ವ್ಯಾಪಾರಿಗಳಿಂದ ಜಪ್ತಿಮಾಡಿ ಅಲ್ಪ ಸ್ವಲ್ಪ ದಂಡ ವಿಧಿಸಿ ಕೈತೊಳೆದುಕೊಳ್ಳುವುದರಿಂದ ಪ್ಲಾಸ್ಟಿಕ್ ಬಳಕೆ ಸಮಸ್ಯೆ ಬಗೆಹರಿಯುತ್ತಿಲ್ಲ. ಇದು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇನ್ನಾದರೂ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡು ಜನ, ಜಾನುವಾರು ಹಾಗೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಿ ಎಂಬುದು ಸಾರ್ವಜನಿಕರ ಆಶಯ.

ಮೂರು ದಿನಗಳ ಹಿಂದೆಯಷ್ಟೇ ನಮ್ಮ ಎತ್ತು ಮೃತಪಟ್ಟಿತು. ಅದು ಪ್ಲಾಸ್ಟಿಕ್ ಕವರ್‌ಗಳನ್ನು ತಿಂದಿದ್ದರಿಂದ ಮೃತಪಟ್ಟಿದೆ ಎಂಬುದು ಶವ ಪರೀಕ್ಷೆ ಮಾಡಿಸಿದ ಸಂದರ್ಭದಲ್ಲಿ ಗೊತ್ತಾಯಿತು. 10 ಕೆಜಿಯಷ್ಟು ಪ್ಲಾಸ್ಟಿಕ್ ಹುಂಡೆಯನ್ನು ಎತ್ತಿನ ದೇಹದಿಂದ ಹೊರ ತೆಗೆಯಲಾಯಿತು. ಇದು ನಮ್ಮ ಅರಿವಿಗೆ ಬಾರದ್ದರಿಂದ ಎತ್ತನ್ನು ಕಳೆದುಕೊಂಡು ಆರ್ಥಿಕ ನಷ್ಟ ಅನುಭವಿಸುವಂತಾಯಿತು.
ಕೆ.ಎನ್.ಪ್ರವೀಣ್ ರೈತ, ಬನ್ನಿಮಂಟಪ ಬಡಾವಣೆ

ಜಾನುವಾರುಗಳು ಪ್ಲಾಸ್ಟಿಕ್ ತಿನ್ನುವುದರಿಂದ ತಕ್ಷಣ ಮೃತಪಡದಿದ್ದರೂ ನಿಧಾನವಾಗಿ ದೇಹದ ಮೇಲೆ ಪರಿಣಾಮ ಬೀರುತ್ತದೆ. ಹಂತ ಹಂತವಾಗಿ ಬೆಳವಣಿಗೆ ಕುಂಠಿತವಾಗಿ ಹಾಲಿನ ಪ್ರಮಾಣ ಕಡಿಮೆಯಾಗುತ್ತದೆ. ಹೊಟ್ಟೆ ಕಟ್ಟಿಕೊಳ್ಳುವುದು, ಉಬ್ಬರಿಸಿಕೊಳ್ಳುವುದು, ಅಲ್ಸರ್ ಸೇರಿದಂತೆ ಅನಾರೋಗ್ಯಕ್ಕೆ ತುತ್ತಾಗುತ್ತವೆ. ಗ್ರಾಮೀಣ ಪ್ರದೇಶಕ್ಕಿಂತ ಪಟ್ಟಣದಲ್ಲೇ ಹೆಚ್ಚು ಮೃತಪಡುತ್ತಿವೆ.
ಡಾ.ಕೆ.ಸಿ.ರಾಮು, ಪಶುವೈದ್ಯ, ಕೆ.ಆರ್.ನಗರ

ಪ್ಲಾಸ್ಟಿಕ್ ಬಳಕೆ ಜಾನುವಾರುಗಳ ಮೇಲೆ ಮಾತ್ರ ಪರಿಣಾಮ ಬೀರುತ್ತಿಲ್ಲ. ಬದಲಾಗಿ ಪರಿಸರದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಮಾರಕವಾಗಿ ಪರಿಣಮಿಸಲಿದೆ. ಸರ್ಕಾರ ಪ್ಲಾಸ್ಟಿಕ್ ನಿಷೇಧದ ಜತೆಗೆ, ಜನಸಾಮಾನ್ಯರು ಹಾಗೂ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಪರಿಹಾರ ಕಂಡುಕೊಳ್ಳಬೇಕಿದೆ.
ಕೆಂಚಿ ಮಂಜು, ಆರೋಗ್ಯ ರಕ್ಷ ಕಮಿಟಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net