ಪ್ಲಾಸ್ಟಿಕ್ ಸರ್ಜರಿಯು ಕೇವಲ ಸೌಂದರ್ಯವರ್ಧನೆಗೆ ಮಾತ್ರವಲ್ಲದೇ ಅಪಘಾತದಂತಹ ಪ್ರಕರಣಗಳಲ್ಲಿ ಗಾಯಗೊಂಡವರಿಗೆ ಹೆಚ್ಚು ಉಪಯುಕ್ತ

18
Published on

ಮೈಸೂರು: ಪ್ಲಾಸ್ಟಿಕ್ ಸರ್ಜರಿಯು ಕೇವಲ ಸೌಂದರ್ಯವರ್ಧನೆಗೆ ಮಾತ್ರವಲ್ಲದೇ ಅಪಘಾತದಂತಹ ಪ್ರಕರಣಗಳಲ್ಲಿ ಗಾಯಗೊಂಡವರಿಗೆ ಹೆಚ್ಚು ಉಪಯುಕ್ತ ಆಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ನಗರದ ಮೈಸೂರು ಮೆಡಿಕಲ್ ಕಾಲೇಜಿನ ಪ್ಲಾಸ್ಟಿಕ್ ಸರ್ಜರಿ ವಿಭಾಗದ ವತಿಯಿಂದ ಸೋಮವಾರ ಆಯೋಜಿಸಿದ್ದ ‘ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಪಘಾತ ಸಂತ್ರಸ್ತರಿಗೆ ಪ್ಲಾಸ್ಟಿಕ್ ಸರ್ಜರಿ ವರದಾನ ಆಗಿದೆ. ಅದಕ್ಕೆ ಪೂರಕವಾಗಿ ಮೆಡಿಕಲ್ ಕಾಲೇಜಿನಲ್ಲಿ ಚರ್ಮ ಬ್ಯಾಂಕಿನಂತಹ ಅತಿ ಉಪಯುಕ್ತ ಸೌಲಭ್ಯಗಳನ್ನು ಹೊಂದುತ್ತಿರುವುದು ಉತ್ತಮ ಬೆಳವಣಿಗೆ. ಮೈಸೂರು ಮೆಡಿಕಲ್ ಕಾಲೇಜು 1924ರಲ್ಲಿ ಆರಂಭ ಆಗಿದ್ದು ಒಂದು ಕಾಲದಲ್ಲಿ ಯುರೋಪ್ ದೇಶಗಳಿಗೆ ಸರಿಸಮನಾಗಿ ವೈದ್ಯಕೀಯ ಚಿಕಿತ್ಸೆ ನೀಡುವ ಮೂಲಕ ಖ್ಯಾತಿ ಗಳಿಸಿತ್ತು. ಇಲ್ಲಿನ ಕೆ.ಆರ್. ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆಗಳು ಜನಸಾಮಾನ್ಯರಿಗೆ ಶತಮಾನದ ಕಾಲ ವೈದ್ಯಕೀಯ ಸೇವೆ ನೀಡುವ ಮೂಲಕ ಖ್ಯಾತಿ ಗಳಿಸಿವೆ. ಈ ಸಂಸ್ಥೆಗೆ ಅಂತಹ ಘನ ಇತಿಹಾಸ ಇದ್ದು, ಅದು ಮುಂದುವರಿಯಬೇಕು. ಸಮಾಜದ ಜನರಿಗೆ ಇನ್ನಷ್ಟು ಗುಣಮಟ್ಟದ ಆರೋಗ್ಯ ಚಿಕಿತ್ಸೆ ಸಿಗಬೇಕು ಎಂದು ಆಶಿಸಿದರು.

ಮೆಡಿಕಲ್ ಕಾಲೇಜಿನ ಡೀನ್ ದಾಕ್ಷಾಯಿಣಿ ಅಧ್ಯಕ್ಷತೆ ವಹಿಸಿದ್ದರು. ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ವಿಜಯಕುಮಾರ್, ವೈದ್ಯರಾದ ಸ್ಮಿತಾ ಸೇಗೂರು,

ಶೋಭಾ, ರಾಜೇಂದ್ರ, ಮಧು, ದಿನೇಶ್ ಹಾಜರಿದ್ದರು. ಸಭಾ ಕಾರ್ಯಕ್ರಮದ ನಂತರ ನಡೆದ ವಿಚಾರ ಸಂಕಿರಣದಲ್ಲಿ ವಿವಿಧ ಆಸ್ಪತ್ರೆಗಳ ಪ್ಲಾಸ್ಟಿಕ್ ಸರ್ಜರಿ ತಜ್ಞರು ವಿಚಾರ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net