ಬಿಎಲ್‌ಡಿಇಯಲ್ಲಿ ಪ್ಲಾಸ್ಟಿಕ್ ಸರ್ಜರಿ ದಿನ ಆಚರಣೆ

PLASTIC SURGERY
ವಿಜಯಪುರದ ಬಿ.ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಪ್ಲಾಸ್ಟಿಕ್ ಸರ್ಜರಿ ದಿನಾಚರಣೆಯನ್ನು ಡಾ. ರಾಜೇಶ ಹೊನ್ನುಟಗಿ ಹಾಗೂ ಡಾ. ವಿಜಯಕುಮಾರ ಕಲ್ಯಾಣಪ್ಪಗೊಳ ಜಂಟಿಯಾಗಿ ಉದ್ಘಾಟಿಸಿದರು. ಡಾ. ಎಂ. ಬಿ. ಪಾಟೀಲ, ಡಾ. ಸಂತೋಶ ನಂದಿ ಮತ್ತಿತರರಿದ್ದಾರೆ.
Published on

ವಿಜಯಪುರ: ಪ್ಲಾಸ್ಟಿಕ್ ಸರ್ಜರಿ ಕ್ಷೇತ್ರ ತುಂಬಾ ವಿಶಾಲವಾಗಿದ್ದು, ಸೂಕ್ಷ್ಮಾತಿ ಸೂಕ್ಷ್ಮ ಶಸ್ತ್ರಚಿಕಿತ್ಸೆಗಳ ಮೂಲಕ ಗಾಯದ ಗುರುತುಗಳನ್ನು ಕಾಣದಂತೆ ಕಸಿ ಮಾಡಬಹುದಾಗಿದೆ ಎಂದು ಬಿಎಲ್ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ವಿಜಯಕುಮಾರ ಹುಡೆದ ಹೇಳಿದರು.

ಆಸ್ಪತ್ರೆಯಲ್ಲಿ ರಾಷ್ಟ್ರೀಯ ಪ್ಲಾಸ್ಟಿಕ್ ಸರ್ಜರಿ ದಿನದ ಅಂಗವಾಗಿ ಶನಿವಾರ ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪ್ಲಾಸ್ಟಿಕ್ ಸರ್ಜರಿ ಕೇವಲ ಸೌಂದರ್ಯ ವರ್ಧಕಕ್ಕೆ ಮಾತ್ರ ಸೀಮಿತವಾಗಿಲ್ಲ. ಸೌಂದರ್ಯ ವರ್ಧಕ ಪ್ಲಾಸ್ಚಿಕ್ ಸರ್ಜರಿಯ ಒಂದು ಭಾಗವಾಗಿದೆ. ಕೈ ಶಸ್ತ್ರ ಚಿಕಿತ್ಸೆ, ಸೂಕ್ಷ್ಮ ಶಸ್ತ್ರ ಚಿಕಿತ್ಸೆ, ಕಾರ್ನಿಯೊ- ಮ್ಯಾಕ್ಸೋಫೆಶಿಯಲ್ ಶಸ್ತ್ರಚಿಕಿತ್ಸೆ, ಮಕ್ಕಳ ಪ್ಲಾಸ್ಚಿಕ್ ಸರ್ಜರಿ ಸೇರಿದಂತೆ ಹಲವಾರು ಶಾಖೆಗಳನ್ನು ಹೊಂದಿದೆ. ಈ ಸರ್ಜರಿ ಮೂಲಕ ಸೂಕ್ಷ್ಮಾತಿ ಸೂಕ್ಷ್ಮ ಅಂಗಕ್ಕೆ ಮರುರೂಪ ನೀಡಬಹುದಾಗಿದೆ. ಅಂಗವನ್ನು ಯೋಜನಾಬದ್ಧವಾಗಿ ಕತ್ತರಿಸಿ ಆಧುನಿಕ ತಂತ್ರಜ್ಞಾನ ಬಳಸಿ ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಗಾಯದ ಗುರುತು ಕಾಣದಂತೆ ಕಸಿ ಮಾಡಬಹುದು ಎಂದು ಅವರು ಹೇಳಿದರು.

ಉಪಪ್ರಾಚಾರ್ಯ ಡಾ. ಎಂ.ಬಿ. ಪಾಟೀಲ ಮಾತನಾಡಿ, ಬಿಎಲ್ಡಿಇ ಆಸ್ಪತ್ರೆಯಲ್ಲಿ ಈಗ ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯಗಳು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಲಭ್ಯವಿವೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಬಿಎಲ್‌ಡಿಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ವೈದ್ಯಕೀಯ ಅಧೀಕ್ಷಕ ಡಾ. ವಿಜಯಕುಮಾರ ಕಲ್ಯಾಣಪ್ಪಗೊಳ ಮತ್ತಿತರರು ಜಂಟಿಯಾಗಿ ಉದ್ಘಾಟಿಸಿದರು.
ಡಾ. ಅನಿಕೇತನ ವಲ್ಲಭ ಮತ್ತಿತರರಿದ್ದರು. ಚನ್ನಬಸವ ಕೊಟಗಿ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net