

ಚನ್ನರಾಯಪಟ್ಟಣ: ಪಟ್ಟಣದಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರ ಮಳಿಗೆಗೆಗಳ ಮೇಲೆ ಗುರುವಾರ ಪುರಸಭಾ ಮುಖ್ಯಾಧಿಕಾರಿ ಹೇಮಂತ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ, ಮಾಲು ವಶಕ್ಕೆ ಪಡೆದು 14 ಸಾವಿರ ರೂ. ದಂಡ ವಿಧಿಸಿದೆ.
ಪಟ್ಟಣದ ಬಾಗೂರು ರಸ್ತೆ, ನೇತಾಜಿ ರಸ್ತೆ ಹಾಗೂ ನೃಪತುಂಗ ವೃತ್ತದ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ದಾಳಿ ನಡೆಸಿದ ಸಂದರ್ಭದಲ್ಲಿ 50 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ವಶಪಡಿಸಿಕೊಂಡಿದೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿ ಹೇಮಂತ್ ಕುಮಾರ್ ಹೇಳಿದರು.
ಸರ್ಕಾರ ಎಲ್ಲ ರೀತಿಯ ಕ್ಯಾರಿ ಬ್ಯಾಗ್ ಪ್ಲಾಸ್ಟಿಕ್ ಲೋಟ, ತಟ್ಟೆ, ಚಮಚ ನಿಷೇಧಿಸಿದೆ. ಆದರೂ ಉದ್ಯಮಿಗಳು ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ದಾಳಿ ನಡೆಸಲಾಗಿದೆ. ವ್ಯಾಪಾರಿಗಳು ನಿಯಮ ಪಾಲಿಸಬೇಕು. ಇಲ್ಲದಿದ್ದಲ್ಲಿ ವ್ಯಾಪಾರದ ಪರವಾನಗಿಯನ್ನೂ ರದ್ದು ಮಾಡುವ ಚಿಂತನೆ ನಡೆದಿದೆ ಎಂದರು.
ಶ್ರವಣಬೆಳಗೊಳ ಮುಖ್ಯ ರಸ್ತೆ ಹಾಗೂ ಹೇಮಾವತಿ ನಾಲೆ ರಸ್ತೆ ಬದಿ ತ್ಯಾಜ್ಯ ಸಂಗ್ರಹವಾಗುತ್ತಿರುವ ದೂರಿನ ಬಗ್ಗೆ ಕ್ರಮ ವಹಿಸಲಾಗಿದೆ. ಇದನ್ನು ಪತ್ತೆ ಹಚ್ಚಲು ರಾತ್ರಿ ಪಾಳಿಗೆ ವೇಳೆ ಪುರಸಭಾ ಸಿಬ್ಬಂದಿಯನ್ನು ನೇಮಿಸಿ ಕಸ ಸುರಿಯುವವರನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು. ಆರೋಗ್ಯ ನಿರೀಕ್ಷಕರಾದ ಡಿ.ಪಿ.ರಾಜು , ಬಿ.ಎಂ. ಮಂಜುನಾಥ, ಪರಿಸರ ಇಂಜಿನಿಯರ್ ಕಾವ್ಯಶ್ರೀ ಹಾಗೂ ಪುರಸಭಾ ನೌಕರರು ದಾಳಿಯಲ್ಲಿ ಭಾಗವಹಿಸಿದ್ದರು.