

ವಿಕ್ರಮ ನಾಡಿಗೇರ ಧಾರವಾಡ
ಪರಿಸರ ಕಾಳಜಿ ಬಗ್ಗೆ ಸಾಕಷ್ಟು ತಿಳಿವಳಿಕೆ ನೀಡುವ, ಮಣ್ಣಿನ ಫಲವತ್ತತೆ ಕುರಿತು ಮಾತನಾಡುವ ಕೃಷಿ ವಿಶ್ವ ವಿದ್ಯಾಲಯವು 4 ದಿನಗಳ ಕಾಲ
ಏರ್ಪಡಿಸಿದ್ದ ಕೃಷಿ ಮೇಳವನ್ನು ಪರಿಸರ ಸ್ನೇಹಿ ಮೇಳವನ್ನಾಗಿ ಮಾಡುವಲ್ಲಿ ಸಂಪೂರ್ಣ ಎಡವಿದೆ.
ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಸಾಕಷ್ಟು ಹಾನಿಯಾಗಲಿದೆ. ಪ್ಲಾಸ್ಟಿಕ್ ಮುಕ್ತ ನಗರ ಮಾಡುವ ಪ್ರಯತ್ನ ನಡೆದಿದೆ ಎಂದು ಎಲ್ಲರೂ
ಹೇಳುತ್ತಾರೆ. ಆದರೆ, ಇದು ಬರೀ ಮಾತಿಗಷ್ಟೇ ಸೀಮಿತ ಎಂಬುದು ಸ್ಪಷ್ಟ. ಕೃಷಿ ಮೇಳದಲ್ಲಿ ಸಹ ಪ್ಲಾಸ್ಟಿಕ್ ಬಳಕೆ ಯಥೇಚ್ಛವಾಗಿ ನಡೆದಿದೆ.
ಬಹುತೇಕ ಮಳಿಗೆಗಳಲ್ಲಿ ಎಗ್ಗಿಲ್ಲದೆ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿತ್ತು. ಮೇಳ ಪೂರ್ಣಗೊಂಡ ಬಳಿಕ ಕೃಷಿ ವಿವಿ ಪ್ರಾಂಗಣದ ಎಲ್ಲ ಕಡೆಗಳಲ್ಲಿ
ಪ್ಲಾಸ್ಟಿಕ್ ಬಾಟಲಿ ಹಾಗೂ ಕವರ್‌ಗಳು ಕಣ್ಣಿಗೆ ರಾಚುತ್ತಿರುವುದೇ ಇದಕ್ಕೆ ಸಾಕ್ಷಿ.
ಮೇಳದಲ್ಲಿ ಸ್ಥಾಪನೆಯಾಗಿದ್ದ ಪ್ರತಿ ಮಳಿಗೆಗಳಲ್ಲೂ ಪ್ಲಾಸ್ಟಿಕ್‌ಗಳ ರಾಶಿಗಳು ರಾರಾಜಿಸುತ್ತಿವೆ. ಪ್ರಾಂಗಣದ ಸ್ವಚ್ಛತೆ ಮಾಡುತ್ತಿರುವ ಸಿಬ್ಬಂದಿ
ಪ್ಲಾಸ್ಟಿಕ್ ವಿಲೇವಾರಿ ಮಾಡುವಲ್ಲೇ ಹೈರಾಣಾಗಿದ್ದಾರೆ. ಇಲ್ಲಿ ಶೇಖರಣೆಯಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಮಣ್ಣಿನಲ್ಲಿ ಮುಚ್ಚಿದರೂ ಕಷ್ಟ. ಬೇರೆ
ಪ್ರದೇಶದಲ್ಲಿ ಬಿಸಾಡಿದರೆ ಮತ್ತೊಂದು ಕಷ್ಟ. ಇದೇ ಕಾರಣಕ್ಕೆ ಪ್ಲಾಸ್ಟಿಕ್ ತ್ಯಾಜ್ಯ ಕೃಷಿ ವಿವಿ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.
ಕೃಷಿ ಮೇಳವನ್ನು ಪ್ಲಾಸ್ಟಿಕ್ ಮುಕ್ತ ಮೇಳ ಮಾಡುವಲ್ಲಿ ವಿಶ್ವ ವಿದ್ಯಾಲಯ ಪ್ರಯತ್ನ ಮಾಡಬೇಕಿತ್ತು. ನಿತ್ಯ ಲಕ್ಷಾಂತರ ಜನರು
ಆಗಮಿಸುವುದರಿಂದ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡುವುದು ಕಷ್ಟ ಎಂಬ ಮಾತು ಸಹಜ. ಆದರೆ ಮನಸು ಮಾಡಿದರೆ ಎಲ್ಲವೂ
ಸಾಧ್ಯವಾಗಲಿದೆ ಎಂಬುದಕ್ಕೆ ಇತ್ತೀಚೆಗೆ 5 ದಿನಗಳ ಕಾಲ ಏರ್ಪಡಿಸಿದ್ದ ರಾಷ್ಟ್ರ ಮಟ್ಟದ ಯುವಜನೋತ್ಸವವೇ ತಾಜಾ ಉದಾಹರಣೆ.
ಯುವ ಜನೋತ್ಸವ ಆರಂಭಕ್ಕೂ ಪೂರ್ವ ಪ್ಲಾಸ್ಟಿಕ್ ಮುಕ್ತ ಉತ್ಸವ ಹಾಗೂ ಪರಿಸ್ನೇಹಿ ಆಗಿರಲಿದೆ ಎಂದು ಘೋಷಿಸಲಾಗಿತ್ತು. ಅದೇ ರೀತಿ
ನಡೆದುಕೊಂಡಿದ್ದು ಎಲ್ಲರಿಗೂ ಮಾದರಿಯಾಗಿದೆ. 5 ದಿನಗಳಲ್ಲಿ ಒಂದು ದಿನವೂ ಪ್ಲಾಸ್ಟಿಕ್ ಬಾಟಲಿ ಬಳಸಿದ್ದು ಕಂಡು ಬರಲಿಲ್ಲ. ಇದಲ್ಲದೆ
ಆವರಣದಲ್ಲಿ ಪ್ಲಾಸ್ಟಿಕ್ ಸಹ ಕಂಡಿರಲಿಲ್ಲ. ಇದೇ ರೀತಿ ಕೃಷಿ ವಿಶ್ವ ವಿದ್ಯಾಲಯ ಸಹ ಮಾರಾಟಗಾರರಿಗೆ ಮಳಿಗೆ ನೀಡುವ ಸಮಯದಲ್ಲಿ
ಪ್ಲಾಸ್ಟಿಕ್ ಬಳಸುವಂತಿಲ್ಲ ಎಂಬ ಷರತ್ತಿನೊಂದಿಗೆ ಮಳಿಗೆ ನೀಡಬೇಕು.
ಒಂದು ವೇಳೆ ಷರತ್ತು ಮೀರಿದರೆ ಏನೆಲ್ಲ ಕ್ರಮಕೈಗೊಳ್ಳಬಹುದು ಎಂಬುದನ್ನೂ ಯೋಚಿಸಬೇಕು. ಇದರಿಂದ ಒಂದೇ ಮೇಳಕ್ಕೆ ಪ್ಲಾಸ್ಟಿಕ್ ಮುಕ್ತ
ಆಗಲು ಸಾಧ್ಯವಿಲ್ಲ. ಆದರೆ ಕೊಂಚವಾದರೂ ಪ್ಲಾಸ್ಟಿಕ್ ಬಳಕೆ ಕಡಿಮೆ ಆಗಲು ಸಾಧ್ಯವಾಗಲಿದೆ. ಮುಂದಿನ ಕೃಷಿ ಮೇಳದಲ್ಲಿ ಕೃವಿವಿ ಈ
ಪ್ರಯೋಗ ಮಾಡಲು ಚಿಂತಿಸಲಿ ಎಂಬುದು ಪರಿಸರವಾದಿಗಳ ಆಶಯವಾಗಿದೆ.
ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಮಾಡುವುದು ಕಷ್ಟ. ಮುಂದಿನ ವರ್ಷದ ಕೃಷಿ ಮೇಳ ಸಮಯದಲ್ಲಿ ಪ್ಲಾಸ್ಟಿಕ್ ಮುಕ್ತ ಮೇಳ ಮಾಡುವ ಪ್ರಯತ್ನ ಮಾಡಲಾಗುವುದು. ಮೇಳದಲ್ಲಿ ಮಳಿಗೆ ಹಂಚಿಕೆ ಸಮಯದಲ್ಲೇ ಮಾಲೀಕರಿಗೆ ಪ್ಲಾಸ್ಟಿಕ್ ನಿಷೇಧ ಕುರಿತು ತಿಳಿವಳಿಕೆ ನೀಡಲಾಗುವುದು. * ಡಾ. ಪಿ.ಎಲ್. ಪಾಟೀಲ, ಕೃಷಿ ವಿವಿ ಕುಲಪತಿ