ರಾಜಕಾಲುವೆಗಳಲ್ಲಿ ಪ್ಲಾಸ್ಟಿಕ್ ರಾಶಿ, 2ವರ್ಷದ ಅವಧಿಯಲ್ಲಿ 10.4 ಟನ್ ತ್ಯಾಜ್ಯ ಸಂಗ್ರಹ, ಪ್ಲಾಸ್ಟಿಕ್ ಫ್ರಿಶ್ಚರ್‌ನಿಂದ ಕಸ ವಿಂಗಡಣೆ ಮತ್ತು ಸಂಸ್ಕರಣೆ

mng-may30-kasa1
ಪ್ಲಾಸ್ಟಿಕ್ ಫ್ರಿಶ್ಚರ್ ಸಂಸ್ಥೆಯು ರಾಜಕಾಲುವೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕ್ಕಾಗಿ ಹಾಕಿರುವ ತ್ರಾಶ್ ಬೂಮ್ ಎಂಬ ಕಸ ಸಂಗ್ರಹದ ಬಲೆಯಲ್ಲಿ ಶೇಖರಣೆಯಾಗಿರುವ ಪ್ಲಾಸ್ಟಿಕ್ ತ್ಯಾಜ್ಯ.
Published on

ರಕ್ಷಾ ಬಿ. ಬದಿಯಡ್ಕ

ಮಳೆನೀರು ಸರಾಗವಾಗಿ ಹರಿದು ಸಮುದ್ರ ಸೇರಲು ಮಾಡಿರುವ ನಗರ ವ್ಯವಸ್ಥೆಯೇ ರಾಜಕಾಲುವೆ. ಆದರೆ ಈ ರಾಜಕಾಲುವೆಗಳಲ್ಲಿ ನೀರಿಗಿಂತ ಪ್ಲಾಸ್ಟಿಕ್ ತ್ಯಾಜ್ಯವೇ ಹೆಚ್ಚಾಗಿ ಸೇರುತ್ತಿರುವುದು ವಿಪರ್ಯಾಸ.

ಕಳೆದ 2 ವಾರದಿಂದ ಮಂಗಳೂರಿನಲ್ಲಿ ಮಳೆಯಾಗುತ್ತಿರುವುದರಿಂದ ರಾಜಕಾಲುವೆಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಆದರೆ ಕೂಳೂರು, ಕೊಟ್ಟಾರ ಚೌಕಿ ಸಹಿತ ಹಲವು ಭಾಗದ ರಾಜಕಾಲುವೆಗಳಲ್ಲಿ ನೀರಿನ ಜತೆಗೆ ತ್ಯಾಜ್ಯ ರಾಶಿಯೂ ಕಂಡು ಬಂದಿದೆ. ಪ್ಲಾಸ್ಟಿಕ್ ಫ್ರಿಶ್ಚರ್ ಸಂಸ್ಥೆಯು ನಗರದ ಆರು ರಾಜಕಾಲುವೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕ್ಕಾಗಿ ಹಾಕಿರುವ ತ್ರಾಶ್ ಬೂಮ್ ಎಂಬ ಕಸ ಸಂಗ್ರಹದ ಬಲೆಯಲ್ಲಿ ಕಳೆದ 2 ವರ್ಷದಿಂದ 10.4 ಟನ್ ಪ್ಲಾಸ್ಟಿಕ್ ತ್ಯಾಜ್ಯ ಹೊರತೆಗೆದಿದೆ.

*155 ಟನ್ ಪ್ಲಾಸ್ಟಿಕ್ ಸಂಗ್ರಹ

ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರ ಸೇರಿ ಜಲಚರಗಳಿಗೆ ಹಾನಿ ಮಾಡುವ ಜತೆಗೆ ಸಮುದ್ರ ನೀರನ್ನು ಕಲುಷಿತಗೊಳಿಸುವುದನ್ನು ತಡೆಗಟ್ಟುವ ಉದ್ದೇಶದಿಂದ ಉಡುಪಿ ಮೂಲದವರಾದ ಹರೀಶ್ ಶೆಣೈ ನೇತೃತ್ವದಲ್ಲಿ ಭಾರತದಲ್ಲಿ ಕಾರ್ಯಾರಂಭಿಸಿದ ಈ ಪ್ಲಾಸ್ಟಿಕ್ ಫ್ರಿಶ್ಚರ್ ಸಂಸ್ಥೆ 2022ರ ಆಗಸ್ಟ್ 20ರಿಂದ ಮಂಗಳೂರಿನಲ್ಲಿಯೂ ರಾಜಕಾಲುವೆಗಳಲ್ಲಿ ಪ್ಲಾಸ್ಟಿಕ್ ಸಂಗ್ರಹ ಕಾರ್ಯ ನಡೆಸುತ್ತಿದೆ. ಮಂಗಳೂರಿನ ಅಳಕೆ, ಜಪ್ಪು, ಪಾಂಡೇಶ್ವರ, ಕಡೆಕಾರು, ಮಾಲಾಡಿ ಮತ್ತು ಕೂಳೂರು ರಾಜಕಾಲುವೆಗಳಲ್ಲಿ ಸಂಸ್ಥೆಯಿಂದ ಪ್ಲಾಸ್ಟಿಕ್ ಸಂಗ್ರಹದ ಈ ತ್ರಾಶ್ ಬೂಮ್ (ಕಸದ ತೊಟ್ಟಿ)ಗಳನ್ನು ಅಳವಡಿಸಲಾಗಿದೆ. ಈವರೆಗೆ ಈ ತೊಟ್ಟಿಗಳಿಂದ ಒಟ್ಟು 10.4 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ. ಇದೇ ಅವಧಿಯಲ್ಲಿ ಸಂಸ್ಥೆಯ ನೇತೃತ್ವದಲ್ಲಿ ನಗರದ ವಿವಿಧ ಬೀಚ್‌ಗಳಲ್ಲಿ ನಡೆದ ತಾಜ್ಯ ಸಂಗ್ರಹಣಾ ಅಭಿಯಾನದ ವೇಳೆ 155 ಟನ್ ಪ್ಲಾಸ್ಟಿಕ್ ಸಂಗ್ರಹಿಸಿದೆ.

----------------

ತ್ಯಾಜ್ಯದ ವಿಂಗಡಣೆ ಮತ್ತು ಸಂಸ್ಕರಣೆ

ಪ್ಲಾಸ್ಟಿಕ್ ಫ್ರಿಶ್ಚರ್ ಸಂಸ್ಥೆಯ ವತಿಯಿಂದ ಮಂಗಳೂರಿನ ಸ್ಥಳೀಯ ಯುವಕರನ್ನೇ ಉಪಯೋಗಿಸಿಕೊಂಡು, ಪ್ಲಾಸ್ಟಿಕ್ ತ್ಯಾಜ್ಯವನ್ನೇ ಬಳಸಿಕೊಂಡು ರಚಿಸಲಾಗಿರುವ ಈ ತ್ರಾಶ್ ಬೂಮ್‌ಗಳಲ್ಲಿ ಸಾರ್ವಜನಿಕರು ಎಸೆದ ಪ್ಲಾಸ್ಟಿಕ್ ತ್ಯಾಜ್ಯದ ಜತೆ ಬಿಯರ್ ಬಾಟಲಿಗಳು, ಒಡೆದ ಗಾಜಿನ ಚೂರುಗಳು, ಚಪ್ಪಲಿ, ಬಟ್ಟೆ ಬರೆ ಮಾತ್ರವಲ್ಲದೆ ಸಿರಿಂಜ್‌ಗಳೂ ಸಂಗ್ರಹವಾಗುತ್ತಿದೆ. ಈ ತ್ಯಾಜ್ಯವು ನೇತ್ರಾವತಿ ಮತ್ತು ಫಲ್ಗುಣಿ ನದಿ ಹಾಗೂ ಸಮುದ್ರಕ್ಕೂ ಸೇರುತ್ತದೆ. ಪ್ಲಾಸ್ಟಿಕ್ ಪಿಶ್ಚರ್ ಸಂಸ್ಥೆಯು ಸ್ಥಳೀಯ ತಂತ್ರಜ್ಞಾನ ಉಪಯೋಗಿಸಿ ಈ ತ್ರಾಶ್ ಬೂಮ್ ತಯಾರಿಸಿದ್ದು, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶವನ್ನೂ ಈ ಸಂಸ್ಥೆಯ ಮೂಲಕ ನೀಡಲಾಗುತ್ತಿದೆ. ಮಂಗಳೂರು ಮಹಾನಗರ ಪಾಲಿಕೆ ಸಹಕಾರದಲ್ಲಿ ಮೆಟೀರಿಯಲ್ ರಿಕವರಿ ಫೆಸಿಲಿಟಿ (ಎಂಆರ್‌ಎಫ್) ವ್ಯವಸ್ಥೆಯನ್ನು ಬಜಾಲ್‌ನಲ್ಲಿ ಆರಂಭಿಸಿದ್ದು, ಇಲ್ಲಿ ಸಂಗ್ರಹವಾದ ತ್ಯಾಜ್ಯದ ವಿಂಗಡಣೆ ನಡೆಸಿ ಸಂಸ್ಕರಣೆ ಮಾಡಲಾಗುತ್ತದೆ.

--------------------

ಸಮುದ್ರ ಹಾಗೂ ಜಲಮೂಲಗಳಿಗೆ ಪ್ಲಾಸ್ಟಿಕ್ ಸಹಿತ ಅಪಾಯಕಾರಿ ತ್ಯಾಜ್ಯ ಸೇರಬಾರದೆಂಬ ಉದ್ದೇಶದಿಂದ ಪ್ಲಾಸ್ಟಿಕ್ ಫ್ರಿಶ್ಚರ್ ಸಂಸ್ಥೆಯ ಮೂಲಕ ಈ ಕಾರ್ಯ ನಡೆಯುತ್ತಿದೆ. ಮಂಗಳೂರಿನ ಆರು ರಾಜಕಾಲುವೆಗಳಲ್ಲಿ ಸಂಸ್ಥೆಯಿಂದ 2022ರ ಆಗಸ್ಟ್ 20ರಂದು ತ್ರಾಶ್ ಬ್ರೂಮ್ ಅಳವಡಿಸಲಾಗಿದೆ. ಈವರೆಗೆ ಪ್ಲಾಸ್ಟಿಕ್ ಮಾತ್ರವೇ 10.4 ಟನ್ ಸಂಗ್ರಹವಾಗಿದೆ.

ಹರೀಶ್ ಶೆಣೈ, ನಿರ್ದೇಶಕರು, ಪ್ಲಾಸ್ಟಿಕ್ ಫ್ರಿಶ್ಚರ್

-----------------

ರಾಜಕಾಲುವೆಗಳಲ್ಲಿ ಅಳವಡಿಸಲಾಗಿರುವ ತ್ರಾಶ್ ಬೂಮ್‌ನಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಪ್ರತ್ಯೇಕಿಸಿಸುವ ಕಾರ್ಯ ಪ್ಲಾಸ್ಟಿಕ್ ಫ್ರಿಶ್ಚರ್ ಸಂಸ್ಥೆ ಮಾಡುತ್ತಿದೆ. ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆಯಿದ್ದರೂ ಸಾರ್ವಜನಿಕರ ಅಜಾಗರೂಕತೆಯಿಂದ ಅಲ್ಲಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹಾಕುವ ಪರಿಪಾಠ ಬೆಳೆದಿದೆ. ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆಮಾಡುವಂತೆ ಪಾಲಿಕೆಯಿಂದ ಸುತ್ತೋಲೆ ನೀಡಲಾಗಿದೆ.

ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರು ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net