ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ತ್ವರಿತಗೊಳಿಸಿ : ಸಂಸದ ಕ್ಯಾ.ಬ್ರಿಜೇಶ್ ಚೌಟ ಸೂಚನೆ

artic_87916_24081756
Published on


ಮಂಗಳೂರು : ಮಂಗಳೂರು ತಾಲೂಕಿನ ಗಂಜಿಮಠದಲ್ಲಿ ಸ್ಥಾಪಿಸಲು ಉದೇಶಿಸಿರುವ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ನಡೆಸುವಂತೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಸೂಚಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಸ್ತುತ 32 ಕೋಟಿ ರೂ. ಅನುದಾನ ಇದ್ದರೂ, ಕಾಮಗಾರಿ ಸ್ಥಗಿತಗೊಂಡಿದೆ. 104 ಎಕರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಕಾಮಗಾರಿಯನ್ನು ಸಣ್ಣಪುಟ್ಟ ಸಮಸ್ಯೆಗಳಿಗಾಗಿ ಇಡೀ ಯೋಜನೆಯನ್ನು ಸ್ಥಗಿತಗೊಳಿಸಿರುವುದು ಸರಿಯಲ್ಲ ಎಂದರು.
ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಜಿಲ್ಲೆಯ ಅಭಿವೃದ್ಧಿಗೆ ಮಹತ್ವದ ಯೋಜನೆಯಾಗಿದ್ದು, ಸಾವಿರಾರು ಮಂದಿಗೆ ಉದ್ಯೋಗ ದೊರಕಲಿದೆ. ಈ ನಿಟ್ಟಿನಲ್ಲಿ ಕ್ರಿಯಾಯೋಜನೆ ರಚಿಸಿ ಕಾಮಗಾರಿ ಮುಂದುವರಿಸುವಂತೆ ಸಂಸದರು ಸೂಚಿಸಿದರು.
ಜಲಜೀವನ ಯೋಜನೆ
ಜಲಜೀವನ ಯೋಜನೆಯಡಿ ಮನೆ ಮನೆಗೆ ನೀರು ಸರಬರಾಜು ಮಾಡುವ ಯೋಜನೆಯ ಕಾಮಗಾರಿ ಪರಿಶೀಲಿಸಿದ ಅವರು, ಯೋಜನೆಯ ಅನುಷ್ಠಾನದಲ್ಲಿ ವಿಳಂಬ ಸಲ್ಲದು. ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡುವ ಈ ಯೋಜನೆಯನ್ನು ಸಮರ್ಪಕವಾಗಿ, ಅನುಷ್ಠಾನಗೊಳಿಸಬೇಕು. ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಿ, ಪ್ರಚಾರ ಮಾಡಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ತಿಳಿಸಿದರು.
ಪ್ರಧಾನಮಂತ್ರಿ ಉದ್ಯೋಗ ಖಾತರಿ ಯೋಜನೆಯಲ್ಲಿ(ಪಿಎಂಇಜಿಪಿ) ಬ್ಯಾಂಕ್ ಸಾಲವನ್ನು ಅರ್ಹರಿಗೆ ಮಾತ್ರ ದೊರಕುವುದನ್ನು ಖಾತ್ರಿ ಪಡಿಸಬೇಕು. ಬೇರೆ ಯೋಜನೆಯ ಸಾಲವನ್ನು ಪಿಎಂಇಜಿಪಿ ಯೋಜನೆಯಡಿ ಮಂಜೂರು ಮಾಡುವುದನ್ನು ಒಪ್ಪಲಾಗದು. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸಂಸದರು ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಎಲ್ಲ ಬ್ಯಾಂಕುಗಳು ತಮ್ಮ ಸಿಎಸ್‌ಆರ್ ಅನುದಾನವನ್ನು ಜಿಲ್ಲೆಗೆ ಸಮರ್ಪಕವಾಗಿ ಬಳಸಿ, ಸಾರ್ವಜನಿಕ ಉಪಯೋಗಿ ಕಾರ್ಯಗಳಿಗೆ ವೆಚ್ಚ ಮಾಡಬೇಕು. ಗ್ರಾಮೀಣ ಪ್ರದೇಶಗಳ ಬ್ಯಾಂಕ್ ಶಾಖೆಗಳಲ್ಲಿ ಕನ್ನಡ ಮಾತನಾಡಬಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲು ಒತ್ತು ನೀಡಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net