ಪ್ಲಾಸ್ಟಿಕ್ ಈಗ ಆದಾಯದ ಮೂಲ..!

mcc (3)
Published on

ಸದೇಶ್ ಕಾರ್ಮಾಡ್ ಮೈಸೂರು
ಸ್ವಚ್ಛತೆಯಲ್ಲಿ ದೇಶದ ಗಮನ ಸೆಳೆದ ಸಾಂಸ್ಕೃತಿಕ ನಗರಿ ಮೈಸೂರು ಇದೀಗ ಪ್ಲಾಸ್ಟಿಕ್ ತ್ಯಾಜ್ಯ ಮರು ಬಳಕೆಯ ವಿಚಾರದಲ್ಲೂ ದೇಶದ ಗಮನ ಸೆಳೆದಿದೆ. ಪ್ಲಾಸ್ಟಿಕ್ ಮರು ಬಳಕೆಯಲ್ಲಿ ಪಾಲಿಕೆ ಕೈಗೊಂಡಿರುವ ದಿಟ್ಟಹೆಜ್ಜೆಯು ಮುಂದಿನ ದಿನಗಳಲ್ಲಿ ಪಾಲಿಕೆಯ ಆದಾಯವನ್ನೂ ವೃದ್ಧಿಸಲಿದೆ..!

ಏಕ ಬಳಕೆಯ ಪ್ಲಾಸ್ಟಿಕ್ ಮರುಬಳಕೆಯಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಇಪಿಆರ್ ಸರ್ಟಿಫಿಕೇಟ್ ಪಡೆದುಕೊಂಡ ದೇಶದ ಪ್ರಥಮ ಮತ್ತು ಏಕೈಕ ನಗರ ಎಂಬ ಹೆಗ್ಗಳಿಕೆಗೆ ಮೈಸೂರು ಪಾತ್ರವಾಗಿದೆ. ದೇಶದ ನಂ.1 ಸ್ವಚ್ಛ ನಗರಿ ಇಂದೋರ್ ಮರು ಬಳಕೆ ಮಾಡಬಹುದಾದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕ ಅಳವಡಿಕೆ ಮಾಡಿದ್ದು, ಈ ವಿಭಾಗದಲ್ಲಿ ಇಂದೋರ್ ದೇಶದಲ್ಲಿ ಇಪಿಆರ್ ಸರ್ಟಿಫಿಕೇಟ್ ಪಡೆದುಕೊಂಡ ದೇಶದ ಪ್ರಥಮ ನಗರವಾಗಿದ್ದು, ಮೈಸೂರು ದ್ವಿತೀಯ ನಗರವಾಗಿದೆ. ಈ ಎರಡು ಸರ್ಟಿಫಿಕೆಟ್‌ಗಳು ಮುಂದಿನ ದಿನಗಳಲ್ಲಿ ಪಾಲಿಕೆ ಸಾಕಷ್ಟು ಆದಾಯ ತಂದುಕೊಡುವ ನಿರೀಕ್ಷೆ ಹೊಂದಲಾಗಿದೆ.

ಸಾಮಾನ್ಯವಾಗಿ ವಿವಿಧ ನಗರಗಳು ಏಕಬಳಕೆಯ ಪ್ಲಾಸ್ಟಿಕ್‌ಗಳನ್ನು ಮರು ಬಳಕೆ ಮಾಡಲು ಮುಂದಾಗುವುದಿಲ್ಲ. ಏಕ ಬಳಕೆಯ ಪ್ಲಾಸ್ಟಿಕ್‌ಅನ್ನು ಸಿಮೆಂಟ್ ಕಾರ್ಖಾನೆಗಳಿಗೆ ನೀಡಲಾಗುತ್ತದೆ. ಆದರೆ, ಮೈಸೂರು ಸುತ್ತಮುತ್ತ ಸಿಮೆಂಟ್ ಕಾರ್ಖಾನೆಗಳು ಇಲ್ಲದೆ ಇರುವ ಹಿನ್ನೆಲೆಯಲ್ಲಿ ಇಲ್ಲಿ ಸಂಗ್ರಹವಾಗುವ ಏಕಬಳಕೆಯ ಪ್ಲಾಸ್ಟಿಕ್ ತ್ಯಾಜ್ಯವನ್ನು ನಗರ ಪಾಲಿಕೆ ಮರು ಬಳಕೆ ಮಾಡುತ್ತಿದ್ದು, ಇದು ದೇಶದಕ್ಕೆ ಮಾದರಿಯಾದ ನಡೆಯಾಗಿದೆ.

ಆದಾಯ ಹೇಗೆ?

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮ ಪ್ರಕಾರ-2022ರ ಪ್ರಕಾರ ವಿವಿಧ ವಸ್ತುಗಳನ್ನು ಪ್ಲಾಸ್ಟಿಕ್ ಮೂಲಕ ಪ್ಯಾಕೇಜಿಂಗ್ ಮಾಡಿ ಮಾರುಕಟ್ಟೆಗೆ ಕಳುಹಿಸುವ ಕಂಪನಿಗಳು ಸದರಿ ನಿಯಮ ಪ್ರಕಾರ ತಮ್ಮ ಕಂಪನಿಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರು ಸಂಗ್ರಹಣೆ ಮಾಡ ಬೇಕು. ಅಂದರೆ, ಗ್ರಾಹಕರು ವಿವಿಧ ವಸ್ತುಗಳನ್ನು ಖರೀದಿಸಿ ಉಪಯೋಗಿಸಿದ ನಂತರ ವಸ್ತುಗಳ ಪ್ಯಾಕೇಜಿಂಗ್‌ಗೆ ಬಳಕೆ ಮಾಡುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಸೆಯುತ್ತಾರೆ. ಇಂತಹ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಂಪನಿಯವರೇ ಸಂಗ್ರಹಿಸಿ ಮರುಬಳಕೆ ಅಥವಾ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಬೇಕು. ಆದರೆ, ವಾಸ್ತವವಾಗಿ ಯಾವುದೇ ಕಂಪನಿಗಳು ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ. ವಿವಿಧ ಕಂಪನಿಗಳು ಪ್ಯಾಕೇಜಿಂಗ್‌ಗೆ ಬಳಕೆ ಮಾಡುವ ಪ್ಲಾಸ್ಟಿಕ್ ತ್ಯಾಜ್ಯವನ್ನು ನಗರ ಪಾಲಿಕೆಯೇ ಸಂಗ್ರಹಿಸಿ ಸಂಸ್ಕರಣೆ ಮಾಡುತ್ತಿದೆ. ನಿಯಮಾನುಸಾರ ಕಂಪನಿಗಳು ತಾವು ಉತ್ಪಾದಿಸುವ ಪ್ಲಾಸ್ಟಿಕ್ ಪೈಕಿ ಶೇ.75 ರಿಂದ 90 ರಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಣೆ ಮಾಡಬೇಕು.

ವಿವಿಧ ಕಂಪನಿಗಳು ಪ್ಲಾಸ್ಟಿಕ್ ತ್ಯಾಜ್ಯ ಮರು ಬಳಕೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಸರ್ಕಾರಕ್ಕೆ ಪ್ರತಿ ವರ್ಷ ವರದಿ ಸಲ್ಲಿಸುತ್ತಿದ್ದವು. ಆದರೆ, ಇನ್ನು ಮುಂದೆ ಈ ರೀತಿ ಸ್ವಯಂ ಘೋಷಿತ ಪ್ರಮಾಣ ಪತ್ರ ಸಲ್ಲಿಸಲು ಅವಕಾಶವಿಲ್ಲ. ಹಾಗಾಗಿ ಇಂತಹ ಕಂಪನಿಗಳು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಇಪಿಆರ್ ಸರ್ಟಿಫಿಕೇಟ್ ಪಡೆದುಕೊಂಡಿರುವ ನಗರ ಪಾಲಿಕೆಯನ್ನು ಸಂಪರ್ಕಿಸಿ ತಮ್ಮ ಕಂಪನಿಯಲ್ಲಿ ಉತ್ಪಾದನೆಯಾಗುತ್ತಿರುವ ಉತ್ಪನಗಳ ಪ್ರಮಾಣಕ್ಕೆ ಅನುಗುಣವಾಗಿ ಪ್ಲಾಸ್ಟಿಕ್ ತ್ಯಾಜ್ಯದ ಮರು ಬಳಕೆಯ ಸರ್ಟಿಫಿಕೇಟ್ ಪಡೆಯಬೇಕು. ಈ ಸರ್ಟಿಫಿಕೇಟ್ ಪಡೆಯಲು ಕಂಪನಿಗಳು ಪಾಲಿಕೆಗೆ ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ. ಈ ಶುಲ್ಕದ ಮೂಲಕ ನಗರ ಪಾಲಿಕೆಗೆ ಹೆಚ್ಚಿನ ಆದಾಯ ನಿರೀಕ್ಷೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ಕಾರ್ಖಾನೆಗಳು ಇದ್ದು, ಸಾಕಷ್ಟು ಆದಾಯ ಹರಿದು ಬರಲಿದೆ. ಕೇವಲ ಜಿಲ್ಲೆ ಮಾತ್ರವಲ್ಲ, ರಾಜ್ಯ ಹಾಗೂ ಹೊರ ರಾಜ್ಯದ ಕಂಪನಿಗಳು ಸಹ ನಗರ ಪಾಲಿಕೆಯಿಂದ ಇಪಿಆರ್ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು. ಇಪಿಆರ್ ಸರ್ಟಿಫಿಕೇಟ್ ಪಡೆಯುವುದನ್ನು ಕಂಪನಿಗಳಿಗೆ ಕಡ್ಡಾಯಗೊಳಿಸಲಾಗಿದೆ.

ವಿವಿಧ ಉಪಕರಣಗಳ ತಯಾರಿ

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳು-2022, ಶೆಡ್ಯೂಲ್-2ರ ಪ್ರಕಾರ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡಿ, ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನಿಯಮಾನುಸಾರ ಸಂಸ್ಕರಿಸಲು ಕ್ರಮ ಕೈಗೊಳ್ಳುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಯಾಗಿರುತ್ತದೆ. ಈ ನಿಟ್ಟಿನಲ್ಲಿ ಮೈಸೂರು ನಗರಪಾಲಿಕೆ ನಗರದಲ್ಲಿ ಸಂಗ್ರಹವಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಣಾ ಘಟಕಕ್ಕೆ ಕಳುಹಿಸಿ ಇಂಟರ್‌ಲಾಕ್ ಟೈಲ್ಸ್, ಟೇಬಲ್, ಕುರ್ಚಿ ಸೇರಿದಂತೆ ವಿವಿಧ ಉಪಕರಣಗಳನ್ನು ತಯಾರಿಸುತ್ತಿದೆ. ನಗರದಲ್ಲಿ ನಗರ ಪಾಲಿಕೆಯು ಜಾಗೃತ್‌ಟೆಕ್ ಸಂಸ್ಥೆ ಸಹಭಾಗಿತ್ವದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಣಾ ಘಟಕ ಪ್ರಾರಂಭಿಸಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.

ನಗರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಮರು ಬಳಕೆ ಮಾಡಲಾಗುತ್ತಿದೆ. ನಗರ ಪಾಲಿಕೆಯು ಖಾಸಗಿ ಸಹಭಾಗಿತ್ವದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಅಳವಡಿಸಿದೆ. ಈ ಘಟಕದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ಅನ್ನು ಸಹ ಮರು ಬಳಕೆ ಮಾಡಲಾಗುತ್ತಿದೆ. ದೇಶದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ಅನ್ನು ನಮ್ಮಲ್ಲಿ ಮಾತ್ರ ಮರುಬಳಕೆ ಮಾಡಲಾಗುತ್ತಿದೆ. ಏಕ ಬಳಕೆಯ ಪ್ಲಾಸ್ಟಿಕ್ ಮರುಬಳಕೆಯಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಇಪಿಆರ್ ಸರ್ಟಿಫಿಕೇಟ್ ಪಡೆದುಕೊಂಡ ದೇಶದ ಪ್ರಥಮ ಮತ್ತು ಏಕೈಕ ನಗರ ಎಂಬ ಹೆಗ್ಗಳಿಕೆಗೆ ಮೈಸೂರು ಪಾತ್ರವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ನಗರ ಪಾಲಿಕೆಗೆ ಸಾಕಷ್ಟು ಆದಾಯ ದೊರೆಯುವ ನಿರೀಕ್ಷೆ ಹೊಂದಿದ್ದೇವೆ.
ಡಾ.ಡಿ.ಜಿ.ನಾಗರಾಜ್, ಪಾಲಿಕೆ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net