

ಚಿಕ್ಕಬಳ್ಳಾಪುರ: ನಿಯಮ ಬಾಹಿರವಾಗಿ ಹಲವು ವರ್ಷಗಳಿಂದಲೂ ಬಳಕೆಯಲ್ಲಿರುವ ಮಾರಕ ಪ್ಲಾಸ್ಟಿಕ್‌ಗೆ ಜಿಲ್ಲಾದ್ಯಂತ ಸಂಪೂರ್ಣವಾಗಿ ಕಡಿವಾಣ ಹಾಕುವುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಿನ ಸವಾಲಾಗಿ ಪರಿಣಿಮಿಸಿದೆ.
ಹೌದು! ನಿರಂತರ ದಾಳಿ, ಜಾಗೃತಿ ಕಾರ್ಯಕ್ರಮಗಳ ನಡುವೆಯೂ ಹಲವರು ರಾಜಾರೋಷವಾಗಿ ಈ ಉತ್ಪನ್ನವನ್ನು ಬಳಸುತ್ತಿದ್ದಾರೆ. ಇದರಿಂದ ಚಿಕ್ಕಬಳ್ಳಾಪುರವನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸಲು ತೊಡಕಾಗುತ್ತಿದೆ. ಜನರಿಂದಲೂ, ವ್ಯಾಪಾರಿಗಳಿಂದಲೂ ಉತ್ತಮ ಸ್ಪಂದನೆ ಸಿಗುತ್ತಿಲ್ಲ. ನಿಯಮವನ್ನು ಉಲ್ಲಂಘಿಸಲಾಗುತ್ತಿದೆ. ಈಗಲೂ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಂತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಅಭಿವೃದ್ಧಿಗೆ ಪೂರಕವಾದ ದೂರದೃಷ್ಟಿ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಪ್ಲಾಸ್ಟಿಕ್‌ಗೆ ಕಡಿವಾಣ ಹಾಕುವುದು ಸಹ ಒಂದು.
* ರಾಜಾರೋಷವಾಗಿ ಬಳಕೆ
ಜಿಲ್ಲಾದ್ಯಂತ ಪಾಸ್ಟಿಕ್ ಅನ್ನು ನಿಷೇಧಿಸಲಾಗಿದೆ. ಈ ನಿಯಮವನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತಿದೆ. ಉದ್ದಿಮೆದಾರರ ಪರವಾನಗಿಯನ್ನು ರದ್ದುಪಡಿಸಲಾಗುತ್ತಿದೆ. ಇದರ ನಡುವೆ ಆಕರ್ಷಕ ಪ್ರವಾಸಿ ತಾಣಗಳು, ಮುಜರಾಯಿ, ವಕ್ಫ್ ಗೆ ಸಂಬಂಧಿಸಿದ ದೇವಾಲಯಗಳಲ್ಲಿ ನಿಯಮ ಕೇವಲ ಅಲ್ಪ ಪ್ರಮಾಣದಲ್ಲಿ ಪಾಲನೆಯಾಗುತ್ತಿದೆ.
ಜಿಲ್ಲಾ ಕೇಂದ್ರದಲ್ಲಿನ ನಗರದ ಹಳೇ ಸಂತೆ ಮೈದಾನ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗ ಮತ್ತು ವಾಪಸಂದ್ರದ ಕೋಳಿ, ಕುರಿ ಮೇಕೆ ಮಾಂಸ ಮಾರಾಟದ ಅಂಗಡಿಗಳಲ್ಲಿ ಮಾಂಸವನ್ನು ಕವರ್ ನಲ್ಲಿಯೇ ನೀಡಲಾಗುತ್ತಿದೆ. ನಗರಸಭೆ ಕಚೇರಿ ಮುಂಭಾಗದ ಹೋಟೆಲ್, ಅಂಗಡಿಗಳಲ್ಲಿ ಹಣ್ಣು ತರಕಾರಿ, ಊಟ ತಿಂಡಿ ಪಾರ್ಸೆಲ್‌ಗೆ ಪ್ಲಾಸ್ಟಿಕ್ ಅನ್ನೇ ಬಳಸಲಾಗುತ್ತಿದೆ. ಇದನ್ನು ಪ್ರತಿದಿನ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ನೋಡುತ್ತಿದ್ದರೂ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ದಾಳಿ ಕಾರ್ಯಾಚರಣೆಗಳು ದಂಡ ವಸೂಲಿಗೆ ಮಾತ್ರ ಸೀಮಿತವಾಗಿವೆ.
* ಇನ್ನೂ ಸಿಗದ ಸಮರ್ಪಕ ಸ್ಪಂದನೆ
ಎಲ್ಲೆಂದರಲ್ಲಿ ಕಂಡು ಬರುವ ಕಸದ ರಾಶಿಯಲ್ಲಿ ಶೇ.೪೦ ರಷ್ಟು ಪ್ಲಾಸ್ಟಿಕ್ ಇರುತ್ತದೆ. ಇದು ಮಿತಿ ಮೀರಿ ಬಳಕೆಯ ಸಂಕೇತ ಮತ್ತು ನಿಯಮ ಪಾಲನೆಯ ವಿಚಾರದಲ್ಲಿ ಸಮರ್ಪಕವಾಗಿ ಸ್ಪಂದನೆ ಸಿಗುತ್ತಿಲ್ಲ ಎಂಬುದರ ಸೂಚಕವಾಗಿದೆ. ಹಸಿ ಮತ್ತು ಒಣ ಕಸ ಸಂಗ್ರಹದ ನಡುವೆಯೂ ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ ಕಂಡು ಬರುತ್ತಿದೆ. ಇದರ ಬಗ್ಗೆ ಸಂಬಂಧಪಟ್ಟ ಸಿಬ್ಬಂದಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದಕ್ಕೆ ಆಯಾ ವಾರ್ಡುಗಳಲ್ಲಿ ಅನೈರ್ಮಲ್ಯಕ್ಕೆ ಎಡೆ ಮಾಡಿಕೊಡುವ ಕಸದ ತಿಪ್ಪೆಗುಂಡಿಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಮನೆ ಮನೆಯಲ್ಲಿನ ಸಂಗ್ರಹದ ತ್ಯಾಜ್ಯವನ್ನು ಅನೇಕರು ತೆಗೆದುಕೊಂಡು ಹೋಗಿ ರಸ್ತೆಬದಿ, ಪ್ರಮುಖ ವೃತ್ತಗಳಲ್ಲಿ ಬಿಸಾಡುತ್ತಿದ್ದಾರೆ.
* ಈಗಾಗಲೇ ಜಿಲ್ಲೆಯಲ್ಲಿ ಮಾರಕ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಇನ್ನೂ ಇದರಲ್ಲಿ ಒಮ್ಮೆಲೆ ಯಶಸ್ಸು ಕಾಣುವುದು ಕಷ್ಟ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಹಂತ ಹಂತವಾಗಿ ಸುಧಾರಣೆ ಕಾಣಬೇಕಾಗಿದೆ. ಇದಕ್ಕೆ ಅಧಿಕಾರಿಗಳು ದಾಳಿ ನಡೆಸಿ, ಪ್ಲಾಸ್ಟಿಕ್ ವಶಪಡಿಸಿಕೊಳ್ಳುವುದರ ಜತೆಗೆ ಸಂಬಂಧಪಟ್ಟವರಿಗೆ ದಂಡ ವಿಧಿಸುತ್ತಿದ್ದಾರೆ.
ಡಾ ಎಂ.ಸಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ, ಚಿಕ್ಕಬಳ್ಳಾಪುರ
* ಉಸ್ತುವಾರಿ ಸಚಿವರು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದರಿಂದ ನಿರಂತರವಾಗಿ ಅಂಗಡಿ, ಹೋಟೆಲ್‌ಗಳ ಮೇಲೆ ದಾಳಿ ನಡೆಸುವುದರ ಜತೆಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ನಿಯಮ ಉಲ್ಲಂಘನೆಯು ನಿಂತಿಲ್ಲ. ಜನರು ಹೆಚ್ಚಿನ ಸಹಕಾರ ನೀಡುತ್ತಿಲ್ಲ.
ಹೆಸರು ಹೇಳಲು ಇಚ್ಚಿಸದ ಅಧಿಕಾರಿ, ಚಿಕ್ಕಬಳ್ಳಾಪುರ