

ಶ್ರವಣ್‌ಕುಮಾರ್ ನಾಳ ಪುತ್ತೂರು
ಸ್ವಚ್ಛಭಾರತ್ ಯೋಜನೆ ಕಲ್ಪನೆಯೊಂದಿಗೆ ಪ್ಲಾಸ್ಟಿಕ್‌ಮುಕ್ತ ಸ್ವಚ್ಛ ಗ್ರಾಮ ನಿರ್ಮಾಣದ ಸಂಕಲ್ಪದೊಂದಿಗೆ ಬನ್ನೂರು ಗ್ರಾಪಂ ಸೈಕಲ್ ರಥ ನಿರ್ಮಿಸಿದ್ದು, ಗ್ರಾಮಾದ್ಯಂತ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸುವ ವಿನೂತನ ಯೋಜನೆಗೆ ಕೈಹಾಕಿದೆ.
ಗಾಂಧಿ ಪ್ರೇರಿತ ಗ್ರಾಮ ಸ್ವರಾಜ್ಯದ ಕಡೆಗೆ ನಮ್ಮ ನಡಿಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಈ ರಥವನ್ನು ಗ್ರಾಪಂ ಅಧ್ಯಕ್ಷ, ಸದಸ್ಯರ ಮುತುವರ್ಜಿಯಲ್ಲಿ ನಿರ್ಮಾಣ ಮಾಡಲಾಗಿದೆ. ಬನ್ನೂರು ಗ್ರಾಪಂ ವ್ಯಾಪ್ತಿಯ ಬನ್ನೂರು, ಚಿಕ್ಕಮುಡ್ನೂರು ಹಾಗೂ ಪಡ್ನೂರು ಗ್ರಾಮಗಳಲ್ಲಿ ಚಲಿಸಿ ಜನರಲ್ಲಿ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಜಾಗೃತಿ ಮೂಡಿಸುತ್ತಿದೆ.
ಮಹತ್ತರ ಯೋಜನೆ ಬನ್ನೂರು ಗ್ರಾಪಂನ ಮಹತ್ತರ ಯೋಜನೆಯಾದ ಜಾಗೃತಿ ಯೋಜನೆ ಈಗಾಗಲೇ ಗ್ರಾಪಂ ವತಿಯಿಂದ ವಿವಿಧ ಸಂಘ ಸಂಸ್ಥೆಗಳು, ಅಂಗನವಾಡಿಗಳ ಸಹಕಾರದೊಂದಿಗೆ ಸ್ವಚ್ಛತಾ ಸೇವಾಹೀ ಸೇವಾ ಕಾರ್ಯಕ್ರಮದಡಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಡಂಪಿಂಗ್ ಯಾರ್ಡ್‌ಗೆ ವಿಲೇವಾರಿ, ಪ್ಲಾಸ್ಟಿಕ್ ದುಷ್ಪರಿಣಾಮದ ಕುರಿತು ಮಾಹಿತಿ, ಗ್ರಾಮದ ಮನೆಗಳು ಸಹಿತ ಹೋಟೆಲ್, ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ, ಬಟ್ಟೆ ಕೈಚೀಲ ಬಳಕೆ ಮಾಡುವ ಕುರಿತು ಜಾಗೃತಿ, ವಾಹನ ರ‌್ಯಾಲಿ ಮುಂತಾದ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಸೈಕಲ್ ರಥದ ವಿಶೇಷತೆಯೆಂದರೆ ದೇಶದ ಮಹಾನ್ ವ್ಯಕ್ತಿಗಳಾದ ಸ್ವಾಮಿ ವಿವೇಕಾನಂದ, ಮದರ್ ತೆರೆಸಾ, ಭಗತ್‌ಸಿಂಗ್ ಹಾಗೂ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ದೇಶದ ಪ್ರಜೆಗಳಿಗಾಗಿ ನೀಡಿದ ಧ್ಯೇಯ ವಾಕ್ಯಗಳ ಸಂದೇಶಗಳನ್ನು ರಥದ ಒಂದು ಬದಿಯಲ್ಲಿ ಅಚ್ಚು ಹಾಕಲಾದರೆ, ಎದುರು ಭಾಗದಲ್ಲಿ ಸ್ವಚ್ಛ ಭಾರತ ಪ್ಲಾಸ್ಟಿಕ್‌ಮುಕ್ತ ಭಾರತ ಹಾಗೂ ಹಿಂಬದಿಯಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಸ್ಲೋಗನ್‌ಗಳನ್ನು ಹಾಕಿರುವುದು ಜಾಗೃತಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಗ್ರಾಮವನ್ನು ಪ್ಲಾಸ್ಟಿಕ್‌ಮುಕ್ತ, ಸೋಲಾರ್, ಹಸಿರು ಗ್ರಾಮದ ನಿರ್ಮಾಣವನ್ನು ಕ್ರಮಬದ್ಧವಾಗಿ ಕೈಗೊಳ್ಳುವುದರ ಜತೆಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸೈಕಲ್ ರಥವನ್ನು ನಿರ್ಮಾಣ ಮಾಡಲಾಗಿದೆ. ಗ್ರಾಪಂ ವ್ಯಾಪ್ತಿಯ ಅಂಗನವಾಡಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ನಡೆಯುವ ಸಭೆ, ಸಮಾರಂಭಗಳಲ್ಲಿ ಈ ಸೈಕಲ್ ರಥ ಭಾಗವಹಿಸಲಿದೆ. ಶಾರದಾ, ಬನ್ನೂರು ಪ್ರಭಾರ ಪಿಡಿಒ ಪ್ಲಾಸ್ಟಿಕ್ ಮುಕ್ತ ಗ್ರಾಮದ ಪರಿವರ್ತನೆ, ಜಾಗೃತಿಗಾಗಿ ಸೈಕಲ್ ರಥ ನಿರ್ಮಾಣಗೊಂಡು ಗ್ರಾಮಾದ್ಯಂತ ಸಂಚರಿಸುತ್ತಿದೆ. ಹಲವು ರೀತಿಯಲ್ಲಿ ಜಾಗೃತಿ ಮೂಡಿಸಿದರೂ ಕಸ ಸಮಸ್ಯೆ ನಿರಂತರ ಉಂಟಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಈ ಸೈಕಲ್ ರಥ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಜನರ ಸಹಕಾರ, ಪ್ರೋತ್ಸಾಹದೊಂದಿಗೆ ಪ್ಲಾಸ್ಟಿಕ್‌ಮುಕ್ತ ಗ್ರಾಮವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ರತ್ನಾಕರ ಪ್ರಭು ಬನ್ನೂರು ಗ್ರಾಪಂ ಸದಸ್ಯ