

ಬಸವಕಲ್ಯಾಣ: ತ್ರಿಪುರಾಂತ ಸಂಸ್ಥಾನ ಗವಿ ಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ೧೯ನೇ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಹಾಗೂ ೩೮ನೇ ಜನ್ಮೋತ್ಸವ ನಿಮಿತ್ತ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮತ್ತು ಆರೋಗ್ಯದ ಮೇಲಾಗುತ್ತಿರುವ ಪ್ರತಿಕೂಲ ಪರಿಣಾಮ ಕುರಿತು ಪ್ಲಾಸ್ಟಿಕ್‌ಮುಕ್ತ ಜೀವನ ಜನಜಾಗೃತಿ ಪಾದಯಾತ್ರೆ ನಗರದಲ್ಲಿ ಶುಕ್ರವಾರ ಜರುಗಿತು.
ಗಾಂಧಿ ವೃತ್ತದಿಂದ ಮುಖ್ಯ ರಸ್ತೆ ಮಾರ್ಗವಾಗಿ ತ್ರಿಪುರಾಂತನ ಮಡಿವಾಳ ಮಾಚಿದೇವರ ವೃತ್ತದವರೆಗೆ ಅಭಿನವ ಶ್ರೀ ನೇತೃತ್ವದಲ್ಲಿ ಜನಜಾಗೃತಿ ಮೂಡಿಸುವಂಥ ಫಲಕಗಳೊಂದಿಗೆ ನಡೆದ ಪಾದಯಾತ್ರೆಯಲ್ಲಿ ಬೇಡ-ಬೇಡ ಪ್ಲಾಸ್ಟಿಕ್ ಬಳಕೆ ಬೇಡ, ಸ್ಚಚ್ಛ ಪರಿಸರ ಉತ್ತಮ ಆರೋಗ್ಯಕ್ಕಾಗಿ ಪ್ಲಾಸ್ಟಿಕ್ ಬೇಡ, ಪ್ಲಾಸ್ಟಿಕ್‌ಮುಕ್ತ ಜೀವನ ನಮ್ಮೆಲ್ಲರದಾಗಲಿ ಎಂಬ ಘೋಷಣೆಗಳು ಮೊಳಗಿದವು.
ಹಿರಿಯ ಚಲನಚಿತ್ರ ನಟಿ ಡಾ.ಪಂಕಜ ವೆಂಕಟರಮಣ ಮಾತನಾಡಿ, ಸಮಾಜದ ಆರೋಗ್ಯ ಮತ್ತು ಏಳಿಗೆ ಆಶಯದೊಂದಿಗೆ ಪ್ಲಾಸ್ಟಿಕ್‌ಮುಕ್ತ ಸಮಾಜಕ್ಕಾಗಿ ಅಭಿನವ ಶ್ರೀಗಳು ಪಾದಯಾತ್ರೆ ನಡೆಸುತ್ತಿರುವುದು ಶ್ಲಾಘನೀಯ. ನಗರ ಸೇರಿ ಗ್ರಾಮೀಣ ಭಾಗಕ್ಕೂ ವ್ಯಾಪಿಸಿರುವ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ಜನರು ಮುಂದಾಗಬೇಕು. ಪ್ಲಾಸ್ಟಿಕ್‌ಮುಕ್ತ ಕಲ್ಯಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಬಿಡಿವಿಸಿ ಉಪಾಧ್ಯಕ್ಷರಾದ ಮಕ್ಕಳ ತಜ್ಞ ಡಾ.ಜಿ.ಎಸ್. ಭುರಳೆ ಮಾತನಾಡಿ, ಪ್ಲಾಸ್ಟಿಕ್‌ನಲ್ಲಿ ಆಹಾರವಷ್ಟೇ ಅಲ್ಲ ಚಹಾ ಸೇವನೆಯೂ ಆರೋಗ್ಯಕ್ಕೆ ಹಾನಿಕರ ಎಂಬುದು ಗೊತ್ತಿದ್ದರೂ ಸೇವಿಸುತ್ತೇವೆ. ಪ್ಲಾಸ್ಟಿಕ್ ಬಳಕೆ ಬಗ್ಗೆ ಜಾಗ್ರತೆ ವಹಿಸುವ ಅಗತ್ಯವಿದೆ. ಪ್ಲಾಸ್ಟಿಕ್‌ಮುಕ್ತ ಸಮಾಜ ನಿರ್ಮಾಣವಾಗಬೇಕು ಎಂಬ ಸಂಕಲ್ಪ, ಸದಾಶಯದೊಂದಿಗೆ ಶ್ರೀಗಳು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದರು.
ನಿವೃತ್ತ ಟಿಎಚ್‌ಒ ಡಾ.ವಿ.ಎಸ್. ಮಠಪತಿ ಮಾತನಾಡಿ, ಜನರು ಪ್ಲಾಸ್ಟಿಕ್ ಬಳಸುವುದರಿಂದ ತಮ್ಮ ಆರೋಗ್ಯದ ಮೇಲಷ್ಟೇ ಅಲ್ಲ ಸುತ್ತಲಿನ ಪರಿಸರದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ಸಂಬಂಧ ಪರಿಣಾಮಕಾರಿ ಕಾನೂನು ರೂಪಿಸಿ ಅನುಷ್ಠಾನಕ್ಕೆ ತರಬೇಕು. ಆರೋಗ್ಯ ಇಲಾಖೆಯಿಂದ ಹೋಟೆಲ್, ಅಂಗಡಿಗಳಲ್ಲಿ ಪರಿಶೀಲಿಸಿ ಪ್ಲಾಸ್ಟಿಕ್ ಬಳಸಿದರೆ ದಂಡ ಹಾಕಬೇಕು. ಜತೆಗೆ ಸ್ವಯಂ ಜಾಗೃತರಾಗಿ ಪ್ಲಾಸ್ಟಿಕ್ ಬಳಸುವುದನ್ನು ಬಿಡಬೇಕು ಎಂದು ಸಲಹೆ ನೀಡಿದರು.
ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಆಶೀರ್ವಚನ ನೀಡಿದರು. ಉಪನ್ಯಾಸಕರ ಸಂಘದ ರಾಜ್ಯ ಕಾರ್ಯದರ್ಶಿ ನರಸಿಂಗರೆಡ್ಡಿ ಗದಲೇಗಾಂವ, ಪ್ರಮುಖರಾದ ಅರ್ಜುನ ಕನಕ, ಶಿವಕುಮಾರ ಬಿರಾದಾರ, ರವಿ ನಾವದ್ಗೇಕರ ಮಾತನಾಡಿ, ಪ್ರತಿವರ್ಷ ಜನ್ಮದಿನ ನಿಮಿತ್ತ ಜನಹಿತ ದೃಷ್ಟಿಯಿಂದ ಜನಜಾಗೃತಿ ಮೂಡಿಸುವ ಶ್ರೀಗಳ ಸಮಾಜಮುಖಿ ಕಾರ್ಯಕ್ಕೆ ಎಲ್ಲರೂ ಬೆಂಬಲಿಸಬೇಕು ಎಂದು ಕೋರಿದರು.
ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೊರಕೆ, ನಿರ್ದೇಶಕ ಮಲ್ಲಯ್ಯ ಹಿರೇಮಠ, ಗವಿಮಠ ಟ್ರಸ್ಟ್ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ, ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಶ್ರೀಶೈಲ ವಾತಡೆ, ಪ್ರಮುಖರಾದ ಬಸವಂತಪ್ಪ ಲವಾರೆ, ಎ.ಜಿ. ಪಾಟೀಲ್, ಲೋಕೇಶ ಮೋಳಕೆರೆ, ರುದ್ರೇಶ್ವರ ಗೋರ್ಟಾ, ಬಸವಣಪ್ಪ ನೆಲೋಗಿ, ಡಾ.ವಿ.ಎಸ್. ರಾಜೋಳೆ, ರಾಹುಲ್ ತುತಾರೆ, ಜಗನ್ನಾಥ ಪತಂಗೆ, ರಮೇಶ ರಾಜೋಳೆ, ಬಸವಂತಪ್ಪ ಪಾಟೀಲ್, ಮರೆಪ್ಪ ಪಾಟೀಲ್, ರಾಕೇಶ ಪುರವಂತ, ರಾಚಯ್ಯ ಮಠಪತಿ, ದಯಾನಂದ ಶೀಲವಂತ, ಶಿವಲಿಂಗ ಸ್ವಾಮಿ ಕನ್ನಾಡೆ, ಸಿದ್ದು ಉಳ್ಳೆ, ಸಂದೀಪ ಪಾಟೀಲ್, ಲಿಂಗರಾಜ ಬಿರಾದಾರ, ಲಿಂಗರಾಜ ಘಾಳೆ, ಲಕ್ಷ್ಮೀಪುತ ನಿಂಬಾಳಕರ್, ಶಾಂತವೀರ ಸ್ವಾಮಿ, ರೇವಣಸಿದ್ದಯ್ಯ ವಸ್ತ್ರದ, ಶಿವು ಮಠಪತಿ, ಪ್ರಕಾಶ ಬಿರಾದಾರ ಇತರರು ಪಾಲ್ಗೊಂಡಿದ್ದರು.
ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಳಸುವುದನ್ನು ಬಿಡುವ ಸಂಕಲ್ಪ ಮಾಡುವುದೇ ನೀವು ನನಗೆ ಜನ್ಮದಿನ ನಿಮಿತ್ತ ನೀಡುವ ಬಹುದೊಡ್ಡ ಕಾಣಿಕೆ. ಪಟ್ಟಾಧಿಕಾರ ವರ್ಧಂತಿ ಮತ್ತು ಜನ್ಮದಿನ ನಿಮಿತ್ತ ಪ್ರತಿವರ್ಷ ಸಮಾಜಕ್ಕೆ ಒಳ್ಳೆಯದಾಗಲಿ ಎಂಬ ಆಶಯದೊಂದಿಗೆ ಪಾದಯಾತ್ರೆ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ.
| ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಪೀಠಾಧಿಪತಿ, ಸಂಸ್ಥಾನ ಗವಿಮಠ ತ್ರಿಪುರಾಂತ