ಅರಣ್ಯಕ್ಕೆ ಪ್ಲಾಸ್ಟಿಕ್ ಸೇರದಂತೆ ಕಟ್ಟೆಚ್ಚರ ವಹಿಸಿ

21-GPT-2
Published on

ಗುಂಡ್ಲುಪೇಟೆ: ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಅರಣ್ಯದೊಳಗೆ ಹೋಗದಂತೆ ಕಾಡಂಚಿನ ಜನರು ಕಟ್ಟೆಚ್ಚರ ವಹಿಸಬೇಕಿದೆ ಎಂದು ಪಟ್ಟಣ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ ಹೇಳಿದರು.

ತಾಲೂಕಿನ ಮಂಗಲ ಗ್ರಾಮ ಪಂಚಾಯಿತಿ ಹಾಗೂ ಪಗ್ ಪ್ಯಾಟ್ರೋಲ್ಸ್ ಸಂಸ್ಥೆ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾಡಂಚಿನ ಗ್ರಾಮಗಳಲ್ಲಿ ಪ್ಲಾಸ್ಟಿಕ್ ತೆರವು ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. ಈಗಾಗಲೇ ವಿಶ್ವಾದ್ಯಂತ ಪ್ಲಾಸ್ಟಿಕ್ ತ್ಯಾಜ್ಯದಿಂದ ತೀವ್ರ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇದರ ಬಳಕೆಯನ್ನು ಸರ್ಕಾರ ನಿರ್ಬಂಧಿಸಿದ್ದರೂ ಸಂಪೂರ್ಣ ಪ್ರಮಾಣದಲ್ಲಿ ತಡೆಗಟ್ಟಲು ಸಾಧ್ಯವಾಗಿಲ್ಲ. ಪ್ರತಿ ದಿನವೂ ಬಂಡೀಪುರಕ್ಕೆ ಬರುವ ಪ್ರವಾಸಿಗರು, ಸಾರ್ವಜನಿಕರು ಹಾಗೂ ಗ್ರಾಮಗಳ ನಿವಾಸಿಗಳು ಬಳಸಿ ಬೀಸಾಡಿದ ಪ್ಲಾಸ್ಟಿಕ್ ತ್ಯಾಜ್ಯ ಕಾಡಿನೊಳಗೆ ಹೋದರೆ ವನ್ಯಜೀವಿಗಳ ಜೀವಕ್ಕೆ ಅಪಾಯವಾಗಲಿದೆ. ಆದ್ದರಿಂದ ಸ್ವಯಂಸೇವಾ ಸಂಸ್ಥೆ ಹಾಗೂ ಗ್ರಾಮಪಂಚಾಯಿತಿ ನಡೆಸುತ್ತಿರುವ ಅಭಿಯಾನ ಸಕಾಲಿಕವಾಗಿದೆ. ಈ ಬಗ್ಗೆ ಕಾಡಂಚಿನ ಜನರಿಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.

80 ಚೀಲ ಪ್ಲಾಸ್ಟಿಕ್ ಸಂಗ್ರಹ: ಗ್ರಾಮ ಪಂಚಾಯಿತಿ ನೌಕರರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು, ಪೊಲೀಸ್ ಸಿಬ್ಬಂದಿ ಹಾಗೂ ಸ್ವಯಂಸೇವಾ ಸಂಸ್ಥೆಯ 130 ಸದಸ್ಯರು 10 ತಂಡಗಳಲ್ಲಿ ಬಂಡೀಪುರ ಹುಲಿ ಯೋಜನೆಯ ಕಾಡಂಚಿನ ಮಂಗಲ, ಆನಂಜಿಹುಂಡಿ, ಗ್ರಾಮದ ಮಾರಮ್ಮನ ದೇವಾಲಯದ ಬಳಿಯಿಂದ ಹುಲಿಯಮ್ಮನ ದೇವಸ್ಥಾನ, ಬೂರದಾರಹುಂಡಿ, ಮಂಗಲ ಮುಖ್ಯರಸ್ತೆಗಳಲ್ಲಿ ಬೀಸಾಡಿದ್ದ 80 ಚೀಲ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿದರು.
ಮಂಗಲ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹನ್ ಕುಮಾರ್, ಪಗ್ ಪ್ಯಾಟ್ರೋಲ್ಸ್ ತಂಡದ ನಿತೀಶ್ ರೆಡ್ಡಿ, ಮಂಗಲ ಕುಮಾರ್, 10 ಪೊಲೀಸ್ ಸಿಬ್ಬಂದಿ, ನಮ್ಮ ಗುಂಡ್ಲುಪೇಟೆ ತಂಡ, ಕ್ಲೀನ್ ಮೈಸೂರು ಟೀಮ್‌ನ ಸ್ವಯಂಸೇವಕರಿಗೆ ಪ್ರಮಾಣಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net