

ಮಂಡ್ಯ: ಶಾಲಾ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆಂದು ಆಯೋಜಿಸುವ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳಿಂದಾಗುತ್ತಿರುವ ತೊಂದರೆ ಬಗ್ಗೆ ಜಾಗೃತಿ ಮೂಡಿಸಲಾಯಿತು.
ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಮದ ಚನ್ನಮ್ಮ ಕಾನ್ವೆಂಟ್‌ನಲ್ಲಿ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಹೊಳಲು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪರಿಸರ ಮಿತ್ರ ಜಯಶಂಕರ ಅವರು, ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಿಂದಾಗುತ್ತಿರುವ ತೊಂದರೆ ಹಾಗೂ ಪರಿಸರದ ಮೇಲಾಗುತ್ತಿರುವ ಮಾಲಿನ್ಯದ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಿದರು. ಮಾತ್ರವಲ್ಲದೆ ಎಲ್ಲರಿಗೂ ಬಟ್ಟೆ ಬ್ಯಾಗ್ ವಿತರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ಸೌಭಾಗ್ಯಾ ಮಾತನಾಡಿ, ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಇದೊಂದು ಉತ್ತಮ ವೇದಿಕೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಸ್ಪರ್ಧೆಗಳಲ್ಲಿ ಪಾರದರ್ಶಕವಾಗಿ ತೀರ್ಪು ಕೊಡಲು ಸಲಹೆ ನೀಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ.ನಾಗೇಶ್, ಬಿಆರ್‌ಸಿ ಶಿವರಾಂ, ಇಸಿಒಗಳಾದ ಚಂದ್ರಪ್ಪ, ಶಶಿಧರ್, ರಾಮಯ್ಯ, ಬಿಆರ್‌ಪಿ ಶಿವರಾಂ ಇತರರಿದ್ದರು. ಸಮಾರೋಪ ಸಮಾರಂಭದಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ, ಪುಸ್ತಕ ನೀಡಲಾಯಿತು. ಚನ್ನಮ್ಮ ಸಂಸ್ಥೆಯ ವತಿಯಿಂದ ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗಿತ್ತು.