ಪರಿಸರಸ್ನೇಹಿ ವಸ್ತುಗಳ ಬಳಕೆ ಹೆಚ್ಚಾಗಲಿ: ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ ಸಹಾಯಕ ಮಹಾಪ್ರಬಂಧಕ ಆನಂದ ಸಿ.ಹೆಗ್ಡೆ ಸಲಹೆ

08_11_Mdy_04(Plastic)
Published on

ಮಂಡ್ಯ: ಜೀವಸಂಕುಲಗಳ ಉಳಿವಿಗೆ ಪ್ಲಾಸ್ಟಿಕ್ ಬಳಕೆ ತಡೆಗಟ್ಟಿ ಪರಿಸರ ಸ್ನೇಹಿ ವಸ್ತುಗಳ ಬಳಕೆ ಹೆಚ್ಚಾಗಬೇಕು ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ ಸಹಾಯಕ ಮಹಾಪ್ರಬಂಧಕ ಆನಂದ ಸಿ.ಹೆಗ್ಡೆ ಸಲಹೆ ನೀಡಿದರು.

ತಾಲೂಕಿನ ಕೆ.ಗೌಡಗೆರೆ ಗ್ರಾಮದಲ್ಲಿ ಮಹಿಳಾ ಸರ್ಕಾರಿ ಕಾಲೇಜಿನ ವಿಭಾಗದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ವತಿಯಿಂದ ಸೋಮವಾರ ಪ್ಲಾಸ್ಟಿಕ್ ಮುಕ್ತ ಗ್ರಾಮದ ನಿಮಿತ್ತ ಮನೆಮನೆಗೂ ಬಟ್ಟೆ ಕೈಚೀಲವನ್ನು ವಿತರಿಸಿ ಮಾತನಾಡಿದರು.

ಸಸ್ಯ, ಪಕ್ಷಿ ಮತ್ತು ಮಾನವ ಸಂಕುಲಗಳು ಮುಂದಿನ ತಲೆಮಾರಿಗೆ ಉಳಿಯಲು ಸ್ವಾಭಾವಿಕ ಸಂಪನ್ಮೂಲಗಳ ರಕ್ಷಣೆಯನ್ನು ಯುವಜನರು ಮಾಡಬೇಕಿದೆ. ಇಂದಿನ ಶತಮಾನ ಯುವಜನರ ಶತಮಾನವಾಗಬೇಕು. ಅವರು ಅನ್ವೇಷಣಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರೂ ಜೀವನಮಟ್ಟ ಸುಧಾರಣೆಯ ಜತೆಗೆ ಸಮುದಾಯದ ಅಭಿವೃದ್ಧಿಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾಗಿದೆ ಎಂದರು.

ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಕ್ರಿಯಾತ್ಮಕ ಪರಿಸರ ಸ್ನೇಹ ಚಟುವಟಿಕೆಗಳನ್ನು ಹಮ್ಮಿಕೊಂಡು ಬಾಲ್ಯದಲ್ಲೇ ಮಕ್ಕಳಿಗೆ ಪ್ಲಾಸ್ಟಿಕ್‌ನಿಂದ ಆಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವುದು ಅನಿವಾರ್ಯವಾಗಿದೆ. ಮಣ್ಣಿನ ಸವಕಳಿ, ಫಲವತ್ತತೆ ಕುರಿತು ಜಾಗೃತಿ ಮೂಡಿಸುವುದು ಅವಶ್ಯವೆನಿಸಿದೆ ಎಂದರು.

ಕಾಲೇಜಿನ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಪ್ರೊ.ಭಾಗ್ಯಾ, ಸಹ ಶಿಬಿರಾಧಿಕಾರಿ ಅನ್ನಪೂರ್ಣ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ನಾಗರಾಜು ಇತರರಿದ್ದರು.

ಪ್ಲಾಸ್ಟಿಕ್ ಮುಕ್ತ ಗ್ರಾಮಕ್ಕಾಗಿ ಜಾಗೃತಿ ಜಾಥಾ ನಡೆಸುವುದರ ಜತೆಗೆ ಮನೆ ಮನೆಗೂ ಬಟ್ಟೆ ಕೈ ಚೀಲಗಳನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net