ಅಭಿವೃದ್ಧಿಯ ಧ್ವನಿ ಹತ್ತಿಕ್ಕಲು ಅವಿಶ್ವಾಸದ ಅಸ್ತ್ರ

CTD Sridevi Chakravarti----
Published on

ಚಿತ್ರದುರ್ಗ: ಈಚೆಗೆ ಚಿತ್ರದುರ್ಗ ನಗರಸಭೆ ಆಯುಕ್ತೆ ಎಂ.ರೇಣುಕಾ ಅವರಿಗೆ ಪುನರ್ಬಳಕೆ ಸಾಧ್ಯವಿಲ್ಲದ ಪ್ಲಾಸ್ಟಿಕ್ ನಿಷೇಧಕ್ಕೆ ಹಾಗೂ ತರಕಾರಿ ಮಾರುಕಟ್ಟೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದ್ದೆ. ಇದು ನನ್ನ ಸ್ಥಾನಕ್ಕೆ ಕುತ್ತು ತರಲಿದೆ ಎಂಬುದನ್ನೂ ನಿರೀಕ್ಷಿಸಿದ್ದೆ ಎಂದು ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ ಹೇಳಿದ್ದಾರೆ.

ಮನವಿ ಸಲ್ಲಿಕೆ ಬಳಿಕ ಒಂದಿಷ್ಟು ಕೆಲಸಗಳು ಆಗಿರುವುದಕ್ಕೆ ಆಯುಕ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈಚಿನ ರಾಜಕೀಯ ಬೆಳವಣಿಗೆಯಲ್ಲಿ ತಮ್ಮ ವಿರುದ್ಧ ಅವಿಶ್ವಾಸ ಮಂಡನೆಗೆ ಸದಸ್ಯರು ಮುಂದಾಗಿದ್ದಾರೆ. ನಗರದ ಅಭಿವೃದ್ಧಿ ಮುಖ್ಯ. ಅಧಿಕಾರ ಶಾಶ್ವತವಲ್ಲ, ಕೆಲಸ ಶಾಶ್ವತ. ಅಧಿಕಾರದ ಮೇಲೆ ವ್ಯಾಮೋಹವಿಲ್ಲ. ಅವಿಶ್ವಾಸ ನಡೆಯಿಂದ ನನಗೆ ಯಾವುದೇ ಬೇಸರವಾಗಿಲ್ಲ ಎಂದರು.

2024 ಸೆಪ್ಟೆಂಬರ್26ರಂದು ನಾಲ್ಕನೇ ಅವಧಿಗೆ ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಕೆಲಸ ಮಾಡುವವರಿಗೆ, ವ್ಯವಸ್ಥೆಯನ್ನು ಪ್ರಶ್ನಿಸುವವರಿಗೆ ಇದು ಕಾಲವಲ್ಲ. ನಗರಸಭೆ ಸದಸ್ಯೆಯಾದ ಕ್ಷಣದಿಂದ ಗೌರವಧನವನ್ನು ನನ್ನ 33ನೇ ವಾರ್ಡ್‌ನ ಅಭಿವೃದ್ಧಿಗೆ ಮೀಸಲಿಟ್ಟಿದ್ದೇನೆ. ಸದಸ್ಯೆ, ಉಪಾಧ್ಯಕ್ಷೆಯಾಗಿ ಒತ್ತಡಕ್ಕೆ ಮಣಿಯದೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ವಾರ್ಡ್‌ನ ಪ್ರಮುಖ ವೃತ್ತಗಳಿಗೆ ಶ್ರೀ ಮಹರ್ಷಿ ವಾಲ್ಮೀಕಿ, ಡಾ.ಎ.ಪಿ.ಜೆ. ಅಬ್ದುಲ್‌ಕಲಾಂ, ಪೈಲ್ವಾನ್ ನಂಜಪ್ಪ ಹಾಗೂ ರಸ್ತೆಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹೆಸರಿಡಲಾಗಿದೆ. ದುರ್ಗ ಅಭಿವೃದ್ಧಿ ಮಾಡುತ್ತೇವೆಂದು ಬಂದವರು ತಾವು ಅಭಿವೃದ್ಧಿಯಾಗುತ್ತಿದ್ದಾರೆ ಹೊರತು, ನಗರದ ಅಭಿವೃದ್ಧಿ ಆಗಲಿಲ್ಲ. ನಗರ, ಜಿಲ್ಲೆಯನ್ನು ಬೇರೆ ಊರಿನ ರಾಜಕಾರಣಿಗಳು ಗುತ್ತಿಗೆ ಪಡೆಯುತ್ತಿದ್ದಾರೆ ಎಂಬುದು ಬೇಸರ ತರಿಸಿದೆ.

ಚಿತ್ರದುರ್ಗದಿಂದ ಬೇರೆಯಾದ ದಾವಣಗೆರೆ ಪ್ರತ್ಯೇಕ ಜಿಲ್ಲೆಯಾಗಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ಆದರೆ, ಐತಿಹಾಸಿಕ ನಗರ ಚಿತ್ರದುರ್ಗ ಏನಾಗಿದೆ ಎಂಬುದನ್ನು ಪ್ರತಿಯೊಬ್ಬರೂ ಪ್ರಶ್ನಿಸಿಕೊಳ್ಳಬೇಕು. ಇಚ್ಛಾಶಕ್ತಿ ಇಲ್ಲದ ರಾಜಕಾರಣಿಗಳಿಗೆ ಮಣೆ ಹಾಕುವ ಸದಸ್ಯರಿಗೆ ಅಭಿವೃದ್ಧಿ ಬೇಕಿಲ್ಲ ಎಂದು ಶ್ರೀದೇವಿ ಚಕ್ರವರ್ತಿ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net