

ಮಡಿಕೇರಿ:
ಮಡಿಕೇರಿಯನ್ನು ಸ್ವಚ್ಛ್ಚ, ಸುಂದರ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯಿದ್ದು, ಆ ನಿಟ್ಟಿನಲ್ಲಿ ಮನೆಯಲ್ಲಿನ ಕಸವನ್ನು ಪ್ಲಾಸ್ಟಿಕ್‌ನಿಂದ ವಿಂಗಡಿಸಿ ನಗರಸಭೆ ವಾಹನಕ್ಕೆ ನೀಡುವಂತಾಗಬೇಕು ಎಂದು ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಹೇಳಿದರು. ಇಲ್ಲಿನ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಸಂಬAಧಿಸಿದAತೆ ಮಂಗಳವಾರ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು.
ಏಕ ಬಳಕೆ ಪ್ಲಾಸ್ಟಿಕ್ ಬಳಸಬಾರದು. ಸಾರ್ವಜನಿಕರು ಸಹ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿಸಾಡದೆ ಡಸ್ಟ್ಬಿನ್‌ಗೆ ಹಾಕಬೇಕು. ನಗರವನ್ನು ಸುಂದರ, ಸ್ವಚ್ಛವಾಗಿ ಕಾಣುವಂತಾಗಲು ಎಲ್ಲರೂ ನಗರಸಭೆಯ ಜೊತೆ ಕೈಜೋಡಿಸಬೇಕು. ‘ನಮ್ಮ ತ್ಯಾಜ್ಯ, ನಮ್ಮ ಹೊಣೆ’ ಎಂಬುದನ್ನು ಅರ್ಥಮಾಡಿಕೊಂಡು ಪ್ರತಿಯೊಂದು ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಂಗಡಿಸಿ ನೀಡಬೇಕು. ಪ್ಲಾಸ್ಟಿಕ್ ಹೊರತು ಪಡಿಸಿ ಉಳಿದ ಕಸದಿಂದ ಗೊಬ್ಬರವನ್ನು ಉತ್ಪಾದಿಸಬಹುದಾಗಿದೆ ಎಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್ ಮಾತನಾಡಿ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿ ಎಂಬುದನ್ನು ತಿಳಿಯಬೇಕಿದೆ. ಆದ್ದರಿಂದ ಪ್ಲಾಸ್ಟಿಕ್ ಬಳಸದೆ ಬಟ್ಟೆ ಬ್ಯಾಗನ್ನು ಬಳಸುವಂತಾಗಬೇಕು ಎಂದರು.
ನಗರಸಭೆ ಪರಿಸರ ಎಂಜಿನಿಯರ್ ಸೌಮ್ಯ ಮಾತನಾಡಿ ಜಿಲ್ಲೆಯ ಸ್ವಚ್ಛತೆಗಾಗಿ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ. ನಗರದಲ್ಲಿ ತರಕಾರಿ, ಹೂವು, ಹಣ್ಣು ಮಾರಾಟಗಾರರು, ಬೀದಿಬದಿ ವ್ಯಾಪಾರಸ್ಥರು, ಅಂಗಡಿ ಮಾಲೀಕರು ಹಾಗೂ ಸೂಪರ್ ಮಾರ್ಕೆಟ್ ಅಂಗಡಿಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ’ ಎಂದು ಹೇಳಿದರು.
ಸರ್ಕಾರದ ವತಿಯಿಂದ ರಿಯಾಯಿತಿ ದರದಲ್ಲಿ ಬಟ್ಟೆ ಬ್ಯಾಗ್ ನೀಡಿದ್ದಲ್ಲಿ ಅದನ್ನು ಜನರಿಗೆ ನೀಡುವ ಮೂಲಕ ಜಾಗೃತಿ ಮೂಡಿಸಬಹುದು ಎಂದು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಧನಂಜಯ ಹೇಳಿದರು.
ಸಭೆಯಲ್ಲಿ ಹೋಂ ಸ್ಟೇ ಅಸೋಷಿಯೇಶನ್ ಉಪಾಧ್ಯಕ್ಷೆ ಮೊಂತಿ ಗಣೇಶ್, ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ವಿಭಾಗದ ಪ್ರಧಾನ ಕಾರ್ಯದರ್ಶಿ ಅಂಬೆಕಲ್ಲು ನವೀನ್, ಹೋಟೆಲ್ ಅಸೋಷಿಯೇಶನ್ ಸದಸ್ಯರುಗಳು ಹಾಗೂ ಬೀದಿಬದಿ ವ್ಯಾಪಾರಸ್ಥರು, ಅಂಗಡಿ ಮಾಲೀಕರು ಇತರರು ಹಲವು ಸಲಹೆ ನೀಡಿದರು.