

ಮರಿದೇವ ಹೂಗಾರ ಹುಬ್ಬಳ್ಳಿ
ಕರೊನಾ ಎರಡನೇ ಅಲೆ ಬರಲಿದೆ ಎಂಬ ಆತಂಕದಲ್ಲಿದ್ದ ಜನರಿಗೆ ಕೊಂಚ ನಿರಾಳವಾಗಿದೆ. ಚಳಿ ಅಧಿಕವಾಗಿದ್ದರೂ ಕರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಪರಿಣಾಮ ನಗರದ ಕಿಮ್ಸ್ನಲ್ಲಿ ಪ್ಲಾಸ್ಮಾ ಥೆರಪಿಯೂ ಬಂದ್ ಆಗಿದೆ !
ಕರೊನಾ ಸೋಂಕು ಉತ್ತುಂಗದಲ್ಲಿದ್ದಾಗ ತೀವ್ರ ಉಸಿರಾಟ, ಗಂಭೀರ ಸ್ವರೂಪದ ಸಮಸ್ಯೆ ಇದ್ದವರಿಗೆ ಯಾವ ಚಿಕಿತ್ಸೆ ಕೊಡಬೇಕೆಂಬ ಆತಂಕ ವೈದ್ಯರಿಗಿತ್ತು. ಎಚ್ಸಿಕ್ಯೂ, ಪ್ಯಾರಾಸಿಟಮಲ್, ಕೆಮ್ಮಿನ ಔಷಧ ಕೊಡುತ್ತಿದ್ದರು. ಇದರಿಂದಲೇ ಬಹಳಷ್ಟು ಸೋಂಕಿತರು ವಾಸಿಯಾಗಿದ್ದರು. ಇದರ ಮಧ್ಯೆಯೂ ಪ್ಲಾಸ್ಮಾ ಥೆರಪಿ ಚಿಕಿತ್ಸೆಯ ಪ್ರಯೋಗವನ್ನೂ ಕಿಮ್್ಸ ವೈದ್ಯರ ತಂಡ ಮಾಡಿತು.
ರಾಜ್ಯದಲ್ಲಿಯೇ ಮೊದಲು ಪ್ಲಾಸ್ಮಾ ಥೆರಪಿ ನಡೆಸಿ ಯಶಸ್ವಿಯಾಗಿದ್ದ ವೈದ್ಯರ ತಂಡ ಈಗಾಗಲೇ 108 ಜನರಿಗೆ ಪ್ಲಾಸ್ಮಾ ಥೆರಪಿ ಮಾಡಿದ್ದಾರೆ. ಪ್ಲಾಸ್ಮಾ ಥೆರಫಿಗೆ ಒಳಪಟ್ಟಿದ್ದರೂ ಕೆಲವರಿಗೆ ಬಹು ಕಾಯಿಲೆಗಳು ಇದ್ದುದರಿಂದ ಯಶಸ್ವಿಯಾಗದೆ ಮೃತಪಟ್ಟಿದ್ದಾರೆ. ಆದರೂ ಪ್ಲಾಸ್ಮಾ ಥೆರಪಿ ನಡೆಸಿ ರಾಜ್ಯದಲ್ಲಿಯೇ ಕಿಮ್್ಸ ಹೆಸರು ಮಾಡಿತ್ತು. ಈಗೀಗ ಕೋವಿಡ್ ಆಸ್ಪತ್ರೆಗೆ ದಾಖಲಾಗುವ ತೀವ್ರ ಉಸಿರಾಟದ ಸಮಸ್ಯೆ ಇರುವ ಕರೊನಾ ಸೋಂಕಿತರ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಪ್ಲಾಸ್ಮಾ ಥೆರಪಿ ನಡೆಸುತ್ತಿಲ್ಲ ಎಂದು ವೈದ್ಯರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಇದೆಲ್ಲ ಬೆಳವಣಿಗೆ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಒಪ್ಪಿಗೆ ಪಡೆದು ಪ್ಲಾಸ್ಮಾ ಥೆರಪಿ ನಡೆಸಲಾಗಿತ್ತು. ಅಲ್ಲದೆ, ಪ್ಲಾಸ್ಮಾ ದಾನಿಗಳಿಗೆ ರಾಜ್ಯ ಸರ್ಕಾರ 5 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ಪ್ರಕಟಿಸಿತು. ಪರಿಣಾಮವಾಗಿ 60ಕ್ಕೂ ಹೆಚ್ಚು ಜನರು ದಾನ ಮಾಡಿದ್ದಾರೆ. ಕೆಲವು ವೈದ್ಯರು ಮುಂದೆ ಬಂದು ಕೊಟ್ಟಿದ್ದ ಉದಾಹರಣೆಗಳಿವೆ.
ಅಗತ್ಯವಿದ್ದರೆ ಬಳಕೆ: ಕರೊನಾ ಎರಡನೇ ಅಲೆ ಬಂದರೆ ಮತ್ತೆ ಪ್ಲಾಸ್ಮಾ ಚಿಕಿತ್ಸೆ ನೀಡಬಹುದು ಎಂದು ಅಧ್ಯಯನ ಮಾಡಿದ್ದ ವೈದ್ಯರ ತಂಡ, ಪ್ಲಾಸ್ಮಾವನ್ನು ಸಂಗ್ರಹಿಸಿಟ್ಟಿದ್ದರು. ತಲಾ 200 ಎಂಎಲ್ನ 12 ಬಾಟಲ್ ಹಾಗೂ ಒಂದು 100 ಎಂಎಲ್ ಬಾಟಲ್ ಸದ್ಯ ಇವೆ. ಅಗತ್ಯ ಬಿದ್ದರೆ ಬಳಕೆ ಮಾಡಲು ನಿರ್ಧರಿಸಲಾಗಿದೆ.
ಹೀಗೆ ನಡೆದಿತ್ತು: ಸೋಂಕು ದೃಢಪಟ್ಟು ಗುಣಹೊಂದಿದ ವ್ಯಕ್ತಿಯಿಂದ 400 ಮಿಲಿ ಲೀಟರ್ ಪ್ಲಾಸ್ಮಾ ಪಡೆಯಲಾಗುತ್ತದೆ. ಅದರಲ್ಲಿ ತೀವ್ರ ತರಹದ ಸೋಂಕುಳ್ಳ ವ್ಯಕ್ತಿಗೆ 200 ಎಂಎಲ್ ಪ್ಲಾಸ್ಮಾವನ್ನು ಮೊದಲ ಬಾರಿಗೆ ನೀಡಲಾಗುತ್ತಿದೆ. ಕೆಲ ದಿನಗಳು ಬಿಟ್ಟು ಮತ್ತೆ 200 ಎಂಎಲ್ ಕೊಡಲಾಗುತ್ತದೆ. ಆ ಮೇಲೆ ಥೆರಪಿಗೊಳಪಟ್ಟ ವ್ಯಕ್ತಿಯ ಮೇಲೆ ನಿಗಾ ಇಡಲಾಗುತ್ತಿತ್ತು. ಕರಾಡಿ ಓಣಿಯ ಸೋಂಕುಮುಕ್ತ ಅಜ್ಜ ಮೊದಲ ಬಾರಿ ಪ್ಲಾಸ್ಮಾ ದಾನ ಮಾಡಿದ್ದರು.
ಸೇವೆ ಸ್ಮರಣೀಯ: ಕಿಮ್ಸ್ನ ಮೆಡಿಸಿನ್ ವಿಭಾಗದ ಡಾ. ರಾಮ ಕೌಲಗುಡ್ಡ, ಪ್ಯಾಥಾಲಜಿ ವಿಭಾಗದ ಡಾ. ಪುರುಷೋತ್ತಮ ರೆಡ್ಡಿ, ಡಾ. ಕವಿತಾ ಏವೂರು, ಎಸ್ಡಿಎಂ ಆಸ್ಪತ್ರೆಯ ಡಾ. ಜೀವಪ್ರಿಯಾ, ಡಾ. ಗಿರೀಶ ಕಾಮತ್, ನವನಗರ ಕ್ಯಾನ್ಸರ್ ಆಸ್ಪತ್ರೆಯ ಡಾ. ಉಮೇಶ ಹಳ್ಳಿಕೇರಿ ನೇತೃತ್ವದ ತಂಡ ಶ್ರಮಿಸಿದ ಸೇವೆ ಸ್ಮರಣೀಯ ಹಾಗೂ ಇತಿಹಾಸ.