

ಬಾಳೆಹೊನ್ನೂರು: ಶಾಲಾ ಪರಿಸರ ಅಂದ, ಚೆಂದವಾಗಿದ್ದರೆ ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ವಿ.ಶ್ರೀನಿವಾಸಗೌಡ ಹೇಳಿದರು.
ಪಟ್ಟಣದ ಲಯನ್ಸ್ ಕ್ಲಬ್‌ನಿಂದ ಮೇಲ್ಪಾಲ್ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ವಿವಿಧ ಅಲಂಕಾರಿಕ ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸಿ ಮಾತನಾಡಿದ ಅವರು, ಮೇಲ್ಪಾಲ್ ಸರ್ಕಾರಿ ಪ್ರೌಢಶಾಲೆ ಸುಸಜ್ಜಿತವಾಗಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣವಿದೆ. ಈ ಹಿನ್ನೆಲೆಯಲ್ಲಿ ಲಯನ್ಸ್ ಕ್ಲಬ್‌ನಿಂದ ಅಲಂಕಾರಿಕಾ ಗಿಡಗಳನ್ನು ನೆಡಲು ಯೋಜನೆ ರೂಪಿಸಿ 25ಕ್ಕೂ ಅಧಿಕ ಹೂವು ಹಾಗೂ ಅಲಂಕಾರಿಕ ಗಿಡಗಳನ್ನು ನೆಡಲಾಗಿದೆ ಎಂದರು.
ಕರ್ಕೇಶ್ವರ ಗ್ರಾಪಂ ಅಧ್ಯಕ್ಷ ಕೆ.ಎಸ್.ರಾಜೇಶ್ ಮಾತನಾಡಿ, ಲಯನ್ಸ್ ಕ್ಲಬ್‌ನವರು ಶಾಲೆಗೆ ಕೊಡುಗೆಯಾಗಿ ನೀಡಿರುವ ಅಲಂಕಾರಿಕ ಗಿಡಗಳು ಶಾಲೆ ಅಂದವನ್ನು ಹೆಚ್ಚಿಸಲಿದೆ. ಶಾಲೆಯಲ್ಲಿ ನೆಟ್ಟಿರುವ ಗಿಡಗಳನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾಲಕ್ಕೆ ಸರಿಯಾಗಿ ನಿರ್ವಹಣೆ ಮಾಡಿ ನೀರು, ಗೊಬ್ಬರ, ಮಣ್ಣು ಪೂರೈಕೆ ಮಾಡಬೇಕು ಎಂದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಂ.ನಾರಾಯಣ, ನಿಕಟಪೂರ್ವ ಅಧ್ಯಕ್ಷ ಎಂ.ಡಿ.ಶಿವರಾಮ್, ಪ್ರಾಂತ್ಯ ರಾಯಬಾರಿ ಎಂ.ಆರ್.ಮಂಜುನಾಥ್, ಪೂರ್ವಾಧ್ಯಕ್ಷ ಎ.ಸಿ.ಕೃಷ್ಣಮೂರ್ತಿ, ಮಂಜುನಾಥ್ ತುಪ್ಪೂರು, ನಿಯೋಜಿತ ಅಧ್ಯಕ್ಷ ಎಚ್.ಜೆ.ವಿಕ್ರಮ್, ಸದಸ್ಯರಾದ ಟಿ.ಎಂ.ಗುರುಮೂರ್ತಿ, ದಯಾನಂದ್, ವಿಜಯೇಂದ್ರ, ಕೆ.ಸಿ.ರವೀಂದ್ರ, ಕೆ.ನಾರಾಯಣಶೆಟ್ಟಿ, ಶಿಕ್ಷಕ ಕೆ.ಎಂ.ರಾಘವೇಂದ್ರ, ವಿಶ್ವನಾಥ್ ಮತ್ತಿತರರು ಹಾಜರಿದ್ದರು.