

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಉತ್ತಮ ತಳಿ, ಖಾತ್ರಿ ಸಲು ಎಂಬ ಗ್ಯಾರಂಟಿಯೊಂದಿಗೆ ತೋಟಗಾರಿಕಾ ಬೆಳೆಗಳ ಉತ್ತೇಜನಕ್ಕೆ ವಿವಿಧ ಜಾತಿಯ ಸಸಿ ವಿತರಿಸಲು ಜಿಲ್ಲಾ ತೋಟಗಾರಿಕೆ ಇಲಾಖೆ ಸಜ್ಜಾಗಿದೆ.
2023-24ನೇ ಸಾಲಿನಲ್ಲಿ ಜಿಲ್ಲೆಯಲ್ಲಿರುವ ಇಲಾಖೆ ನರ್ಸರಿಗಳಲ್ಲಿ ಈಗಾಗಲೇ ಸಸಿಗಳು ಲಭ್ಯವಿದ್ದು, ರೈತರು ಹಾಗೂ ಪ್ರತಿ ಸಾರ್ವಜನಿಕರು ಸಸಿಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ ತಿಳಿಸಿದ್ದಾರೆ.
ಪ್ರತೀ ವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ತೋಟಗಾರಿಕೆ ಇಲಾಖೆಯ ನರ್ಸರಿಗಳಲ್ಲಿ ಕಸಿ ಮಾಡಿದ ಉತ್ತಮ ಜಾತಿಯ ಸಸಿ ವಿತರಿಸುವ ಕಾರ್ಯಕ್ರಮ ರೂಪಿಸಲಾಗುತ್ತದೆ. ಈ ಬಾರಿಯೂ ವಿತರಿಸಲು ಇಲಾಖೆ ಸಜ್ಜಾಗಿದೆ. ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಲಾಖೆಯ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಲಭ್ಯವಿರುವ ತೆಂಗು, ಮಾವು, ಸೀಬೆ, ನುಗ್ಗೆ, ಕರಿಬೇವು, ನೆಲ್ಲಿ ಮತ್ತು ನಿಂಬೆ ಮತ್ತಿತರ ಕಸಿ ಸಸಿಗಳನ್ನು ಇಲಾಖೆ ನಿಗದಿಪಡಿಸಿದ ದರದಲ್ಲಿ ಖರೀದಿಸಬಹುದಾಗಿದೆ.
ರಾಜ್ಯದೆಲ್ಲೆಡೆ ಒಂದೇ ದರ: ರಾಜ್ಯದ ಎಲ್ಲ ಜಿಲ್ಲೆಗಳ ತೋಟಗಾರಿಕೆ ನರ್ಸರಿಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಏಕರೂಪ ದರದಲ್ಲಿ ಸಸಿ ವಿತರಿಸಲಾಗುತ್ತದೆ. ಅದೇ ರೀತಿ ಜಿಲ್ಲೆಯ ನರ್ಸರಿಗಳಲ್ಲೂ ರಿಯಾಯಿತಿ ದರದಲ್ಲಿ ಸಸಿ ವಿತರಣೆ ನಡೆಯಲಿದೆ. ಸಾರ್ವಜನಿಕರು ಹಾಗೂ ರೈತರು ಮುಕ್ತವಾಗಿ ಸಸಿ ಖರೀದಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿವಿಧ ಪರಿಶೀಲನೆ: ಸಾಮಾನ್ಯವಾಗಿ ಖಾಸಗಿ ನರ್ಸರಿಗಳಿಗೆ ಹೋಲಿಸಿದರೆ ತೋಟಗಾರಿಕೆ ಇಲಾಖೆಯಲ್ಲಿನ ಸಸಿಗಳ ಗುಣಮಟ್ಟದಲ್ಲಿ ಖಾತ್ರಿ ಇರುತ್ತದೆ. ವಿವಿಧ ಹಂತದಲ್ಲಿ ಕೃಷಿ ತಜ್ಞರು ಪರೀಕ್ಷೆ ನಡೆಸಿ ಒಪ್ಪಿಗೆ ಸೂಚಿಸಿರುತ್ತಾರೆ. ವಿವಿಧ ಜಿಲ್ಲೆಯ ಪ್ರಗತಿಪರ ರೈತರು ಹಾಗೂ ಅಧಿಕಾರಿಗಳ ತಂಡದಿಂದಲೂ ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂಬುದು ಇಲಾಖೆಯ ಖಾತ್ರಿಯಾಗಿದೆ.
ಯಾವ್ಯಾವ ನರ್ಸರಿಗಳಲ್ಲಿ ಲಭ್ಯ? ದೇವನಹಳ್ಳಿ ತಾಲೂಕು ಕನ್ನಮಂಗಲ ನರ್ಸರಿಯಲ್ಲಿ 3,596 ಮಾವು, 3,510 ಸೀಬೆ, 1,830 ನಿಂಬೆ, 9,485 ತೆಂಗು, 1,977 ಪಪ್ಪಾಯ, 1,262 ನುಗ್ಗೆ, 1,977 ಕರಿಬೇವು, 6,968 ಇತರ ಸಸಿಗಳಿವೆ. ನಗರೂರು ನರ್ಸರಿಯಲ್ಲಿ 10,750, ದೊಡ್ಡಬಳ್ಳಾಪುರ ನರ್ಸರಿಯಲ್ಲಿ, 18,032 ಗಿಡಗಳಿವೆ. ತಿಪ್ಪಗೊಂಡನಹಳ್ಳಿ ನರ್ಸರಿಯಲ್ಲಿ 45,435 ಗಿಡಗಳಿವೆ. ಕೆ.ಪೂಜೇನಹಳ್ಳಿ ನರ್ಸರಿಯಲ್ಲಿ 16,273 ಗಿಡ ಸೇರಿ ಜಿಲ್ಲೆಯಲ್ಲಿ 8,314 ಮಾವು, 9,510 ಸೀಬೆ, 6,242 ನಿಂಬೆ, 52,110 ತೆಂಗು, 1,977 ಪಪ್ಪಾಯ, 22,000 ಅಡಕೆ, 4170 ನುಗ್ಗೆ, 3,667 ಕರಿಬೇವು, ಇತರ 13,100 ಸೇರಿ 1,21,095 ಗಿಡಗಳು ವಿತರಣೆಗೆ ಲಭ್ಯವಿವೆ.
ಹೆಚ್ಚಿನ ಮಾಹಿತಿ ಪಡೆಯಿರಿ: ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಜೆ.ಲಕ್ಷ್ಮೀ 9449045052, ಕೆ.ಪೂಜೇನಹಳ್ಳಿ ತೋಟಗಾರಿಕೆ ಕ್ಷೇತ್ರ ಸಹಾಯಕ ತೋಟಗಾರಿಕೆ ನಿರ್ದೇಶಕಿ ಸ್ಮಿತಾ 90359-58286, ಕನ್ನಮಂಗಲ ಮಾವು ಉತ್ಕೃಷ್ಟ ಕೇಂದ್ರದ ಸಹಾಯಕ ತೋಟಗಾರಿಕೆ ನಿರ್ದೇಶಕ ಶಾಮಣ್ಣ. 7338011518, ತಿಪ್ಪಗೊಂಡನಹಳ್ಳಿ ತೋಟಗಾರಿಕೆ ಕ್ಷೇತ್ರದ ಸಹಾಯಕ ತೋಟಗಾರಿಕೆ ನಿರ್ದೇಶಕ ವಿಜಯ್ ಕುಮಾರ್ 90357-20179, ದೊಡ್ಡಬಳ್ಳಾಪುರ ತೋಟಗಾರಿಕೆ ಕ್ಷೇತ್ರ ತೋಟಗಾರಿಕೆ ಸಹಾಯಕ 91640-21289 ಶಿವಾನಂದ್ ಸಂಪರ್ಕಿಸಿ.