ಜಿಲ್ಲೆಯ ವನಸಂಪತ್ತಿಗೆ 8 ಲಕ್ಷ ಸಸಿಗಳ ಹಸಿರು

plantion
Published on

ಕೋಟಿ ಸಸಿ ನೆಡುವ ಆಂದೋಲನಕ್ಕೆ ಅರಣ್ಯ ಇಲಾಖೆ ಸಜ್ಜು
ವಿವಿಧ ಇಲಾಖೆ, ಸಂಘ-ಸಂಸ್ಥೆಗಳ ಸಹಯೋಗ

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಪರಿಸರ ರಕ್ಷಣೆ ಜತೆಗೆ ವನಸಂಪತ್ತು ವೃದ್ಧಿಸಲು ಸರ್ಕಾರದ ಕೋಟಿ ಸಸಿ ನೆಡುವ ಆಂದೋಲನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಅರಣ್ಯ ಇಲಾಖೆ ಸಜ್ಜಾಗಿದ್ದು, ಜಿಲ್ಲೆಯಲ್ಲಿ ಕನಿಷ್ಠ 8 ಲಕ್ಷ ಸಸಿಗಳ ಹಸಿರು ಹೊದಿಸುವ ಗುರಿಯೊಂದಿಗೆ ಮುಂದಡಿ ಇಟ್ಟಿದೆ.
ಜಿಲ್ಲಾ ಪ್ರಾದೇಶಿಕ ಅರಣ್ಯ ಇಲಾಖೆಯಲ್ಲಿ ಇಲಾಖೆಯ 5.50 ಲಕ್ಷ ಸಸಿಗಳು, ಸಾರ್ವಜನಿಕರಿಗೆ ವಿತರಿಸುವ 4.50 ಲಕ್ಷ ಸಸಿಗಳಿವೆ, ಇದರೊಂದಿಗೆ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಸುಮಾರು 2 ಲಕ್ಷ ಸಸಿಗಳಿವೆ, ಕೃಷಿ ಇಲಾಖೆಯಲ್ಲಿ 1.50 ಲಕ್ಷ ಸಸಿಗಳಿದ್ದು, ಕೋಟಿ ಸಸಿ ನೆಡುವ ಆಂದೋಲನದ ವೇಳೆ ಗುರಿ ಮೀರಿ ಸಸಿಗಳನ್ನು ನೆಡುವ ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕಾಗಿಯೇ ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳು ಸರಣಿ ಸಭೆ ನಡೆಸುತ್ತಿದ್ದು, ಇದರೊಂದಿಗೆ ಎನ್‌ಜಿಒ, ವಿವಿಧ ಸಂಘಟನೆಗಳು, ಶಾಲಾ-ಕಾಲೇಜು, ಆಸ್ಪತ್ರೆ, ಕೈಗಾರಿಕಾ ಸಂಘಗಳ ಸಹಯೋಗ ಪಡೆದುಕೊಳ್ಳಲಾಗುತ್ತಿದ್ದು, ರಾಜ್ಯದಲ್ಲೇ ಅತೀ ಹೆಚ್ಚು ಸಸಿ ನೆಡುವ ಮೂಲಕ ಜಿಲ್ಲೆಯಲ್ಲಿ ವನಕ್ರಾಂತಿ ಸೃಷ್ಟಿಸಬೇಕು ಎಂಬ ನಿಟ್ಟಿನಲ್ಲಿ ಅಧಿಕಾರಿಗಳು ಸಜ್ಜಾಗುತ್ತಿದ್ದಾರೆ.

ನರೇಗಾದಡಿ 1.70 ಲಕ್ಷ ಸಸಿ: ಇದೇ ಆಂದೋಲನದಡಿ ಜಿಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ 1.70 ಲಕ್ಷ ಸಸಿ ನೆಡಲು ಉದ್ದೇಶಿಸಿದ್ದು, ಈ ಸಂಬಂಧ ಈಗಾಗಲೇ ಪೂರ್ವ ಸಿದ್ಧತಾ ಸಭೆ ನಡೆಸಲಾಗಿದೆ.

ಕೃಷಿ ಇಲಾಖೆ ಸಾಥ್: ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆಯೊಂದಿಗೆ ಕೃಷಿ ಇಲಾಖೆ ಕೈಜೋಡಿಸಿದ್ದು, ಕೃಷಿ ಇಲಾಖೆಯಡಿ 1 ಲಕ್ಷ ಸಸಿಗಳ ಲಭ್ಯತೆ ಮಾಹಿತಿ ನೀಡಿದ್ದು, ಆಂದೋಲನದ ಮೂಲಕ ಸಸಿ ನೆಡುವ ಉದ್ದೇಶ ಹೊಂದಲಾಗಿದೆ.

ನಗರ ಪ್ರದೇಶಗಳಿಗೂ ಆದ್ಯತೆ: ಜಿಲ್ಲೆಯ ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯ ಬಡಾವಣೆಗಳಲ್ಲಿ ಸಸಿ ನೆಟ್ಟು ಪೋಷಿಸುವಂತೆ ಸಾರ್ವಜನಿಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ, ರಸ್ತೆ ಬದಿಗಳಲ್ಲಿ ಮನೆಗಳ ಮುಂದೆ ಸಸಿ ನೆಡಲು ಸಾರ್ವಜನಿಕರಿಗೆ ಮನವಿ ಮಾಡಲಾಗುತ್ತಿದ್ದು, ಕೋಟಿ ಸಸಿ ನೆಡುವ ಕಾರ್ಯಕ್ರಮದಲ್ಲಿ ನಗರ-ಪಟ್ಟಣ ಪ್ರದೇಶಗಳಲ್ಲೂ ಹಸಿರು ವಲಯ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ.

ಮುಂಗಾರು ಮಳೆ ಮೇಲೆ ಆಧಾರಿತ: ಪ್ರತಿ ಮುಂಗಾರು ಮಳೆ ವೇಳೆ ರಾಜ್ಯ ಸರ್ಕಾರ ರಾಜ್ಯಾದ್ಯಂತ ಕೋಟಿ ಸಸಿ ನೆಡುವ ಕಾರ್ಯಕ್ರಮ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗಳಲ್ಲೂ ಏಕಕಾಲದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಇದಕ್ಕೆ ಪ್ರಮುಖವಾಗಿ ಮಳೆ ಆಧಾರಿತವಾಗಿದ್ದು, ನಿರೀಕ್ಷಿತ ಮಳೆಯಾದರೆ ಈ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಲಿದೆ, ಇಲ್ಲವಾದರೆ ಗುರಿ ಮುಟ್ಟುವುದು ಕಷ್ಟಸಾಧ್ಯ ಎಂಬ ಮಾತು ಕೇಳಿಬರುತ್ತಿದೆ.

ಡಿಸಿ ಸೂಚನೆ:ರಾಜ್ಯಾದ್ಯಂತ ಜು.1 ರಿಂದ 7ರವರೆಗೆ 1 ಕೋಟಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಸಿ ನೆಡುವ ಬೃಹತ್ ಆಂದೋಲನ ಅನುಷ್ಠಾನಗೊಳಿಸಿ ಯಶಸ್ವಿಗೊಳಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಈಗಾಗಲೇ ಸೂಚನೆ ರವಾನಿಸಿದ್ದಾರೆ.
ಸಸಿ ನೆಡಲು ಜಾಗದ ಹುಡಕಾಟ: ಜಿಲ್ಲಾದ್ಯಂತ ಸರ್ಕಾರಿ, ಖಾಸಗಿ ಶಾಲಾ-ಕಾಲೇಜು, ಆರೋಗ್ಯ ಕೇಂದ್ರಗಳು, ಪಶು ಆಸ್ಪತ್ರೆ, ಗೋಶಾಲೆಗಳು, ವಸತಿ ಶಾಲೆಗಳು, ಕೈಗಾರಿಕಾ ಪ್ರದೇಶಗಳು, ರೈತರ ಜಮೀನುಗಳು, ಸರ್ಕಾರಿ ಜಮೀನುಗಳಲ್ಲಿ ಸಸಿ ನೆಡಲು ಸಾಧ್ಯವಿರುವ ಜಾಗಗಳನ್ನು ಗುರುತಿಸುವ ಕಾರ್ಯ ಬಿರುಸಿನಿಂದ ಸಾಗಿದೆ.

ಜಿಲ್ಲಾಡಳಿತದ ಸೂಚನೆಯಂತೆ ಜಿಲ್ಲೆಯಲ್ಲಿ 7 ದಿನ ನಿರಂತರವಾಗಿ ಸಸಿ ನೆಡುವ ಬೃಹತ್ ಆಂದೋಲನ ನಡೆಯಲಿದೆ. ಇದಕ್ಕಾಗಿ ಜಾಗಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ವಿವಿಧ ಸಂಘ-ಸಂಸ್ಥೆಗಳು, ಎನ್‌ಜಿಒ, ಶಾಲಾ-ಕಾಲೇಜು ಆಡಳಿತ ಮಂಡಳಿ, ಕೈಗಾರಿಕಾ ಆಡಳಿತ ಅಧಿಕಾರಿಗಳ ಸಹಯೋಗ ಪಡೆಯಲಾಗುತ್ತಿದೆ. ಸಾರ್ವಜನಿಕರೂ ಸ್ವಯಂಪ್ರೇರಿತವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕು.
ಸುಮೀತ್ ಪಾಟೀಲ್, ಉಪ ಪ್ರಾದೇಶಿಕ ಸಂರಕ್ಷಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net