

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಹೆದ್ದಾರಿ ಹಾಗೂ ರಸ್ತೆ ವಿಸ್ತರಣೆ ಕಾಮಗಾರಿ ಸಂದರ್ಭ ಸಾವಿರಾರು ಮರಗಳನ್ನು ಕಡಿಯಲಾಗುತ್ತದೆ. ಅಲ್ಲಿ ಸಸಿ ನೆಡಲು ಅರಣ್ಯ ಇಲಾಖೆ ಸಾಮಾನ್ಯವಾಗಿ ಆಸಕ್ತಿ ತೋರುವುದಿಲ್ಲ. ಆದರೆ ಈ ಬಾರಿ ಮೂಡುಬಿದಿರೆ ಸಾಮಾಜಿಕ ಅರಣ್ಯ ಇಲಾಖೆ ಮುಂಗಾರು ಆರಂಭವಾಗುತ್ತಿದ್ದಂತೆ ಗಿಡಗಳನ್ನು ನೆಡುವ ಮೂಲಕ ಹಸಿರು ಕ್ರಾಂತಿಗೆ ಮುಂದಾಗಿದೆ.
ಕಾಮಗಾರಿ ನೆಪದಲ್ಲಿ ಮತ್ತು ಪ್ರಕೃತಿ ವಿಕೋಪ ಕಾರಣದಿಂದ ಅದೆಷ್ಟೋ ಮರಗಳು ನಾಶವಾಗುತ್ತಿವೆ. ಅಲ್ಲಿ ಬದಲಿ ಸಸಿಗಳನ್ನು ನೆಡಲು ಯಾರೂ ಮನಸ್ಸು ಮಾಡುವುದಿಲ್ಲ ಎಂಬ ದೂರು ಸರ್ವೇ ಸಾಮಾನ್ಯ. ಇದೀಗ ಮಳೆ ಸುರಿದು ಭೂಮಿ ತಂಪಾಗುತ್ತಿದ್ದಂತೆ ಸಂಕಲಕರಿಯ, ಮುಂಡ್ಕೂರು, ಏಳಿಂಜೆ, ಉಳೆಪಾಡಿ ಸೇರಿದಂತೆ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಗಿಡಗಳ ನಾಟಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ನೂರಾರು ಗಿಡಗಳನ್ನು ರಸ್ತೆಯ ಬದಿಯಲ್ಲಿ ನೆಟ್ಟು ಪೋಷಣೆ ಮಾಡುತ್ತಿದ್ದು ಒಟ್ಟು 2,400 ವಿವಿಧ ಜಾತಿಯ ಗಿಡಗಳನ್ನು ನೆಡಲು ಮುಂದಾಗಿದೆ.
ಮಣಿಪಾಲ ಆತ್ರಾಡಿಯಿಂದ ಬಜ್ಪೆಗೆ ಸಾಗುವ ರಾಜ್ಯ ಹೆದ್ದಾರಿ ಹಾಗೂ ಏಳಿಂಜೆ-ಉಳೆಪಾಡಿ ಕೋಟ್ನಾಯಗುತ್ತು ರಸ್ತೆ ವಿಸ್ತರಣೆ ಸಂದರ್ಭ ಬೃಹದಾಕಾರದ ಮರಗಳು ಧರೆಗುರುಳಿದ್ದವು. ಈ ಮರಗಳ ಬದಲಿಗೆ ನೂರಾರು ಗಿಡಗಳನ್ನು ನೆಡುವ ಕೆಲಸ ಪ್ರಗತಿಯಲ್ಲಿದೆ.
ಬೆಂಗಳೂರು, ಮೈಸೂರು ಹೆದ್ದಾರಿ ಪಕ್ಕದಲ್ಲಿ ಬೃಹದಾಕಾರದ ಮರಗಳಿರುವಂತೆ ಇಲ್ಲಿಯೂ ಹಲಸು, ಹೆಬ್ಬಲಸು, ಮಾವು, ನೆಲ್ಲಿ, ನೇರಳೆ, ಬೇಂಗ, ಮಹಾಗನಿ, ರೆಂಜ ಹಾಗೂ ಬಾದಾಮಿ ಸಹಿತ ಇತರ ಉತ್ತಮ ಜಾತಿಯ ಗಿಡಗಳನ್ನು ನೆಡಲಾಗುತ್ತಿದೆ. ಮಳೆಗಾಲದಲ್ಲಿ ಗಿಡಗಳನ್ನು ನೆಟ್ಟು ಬೇಸಿಗೆಯಲ್ಲಿ ನೀರುಣಿಸಲಾಗುತ್ತದೆ. ಗಿಡ ದೊಡ್ಡದಾಗಿ ಬೆಳೆಯುವವರೆಗೂ ಇಲಾಖೆ ಸಿಬ್ಬಂದಿ ಪೋಷಣೆ ಮಾಡಲಿದ್ದಾರೆ. ಈ ಗಿಡಗಳು ಬೃಹದಾಕಾರವಾಗಿ ಬೆಳೆದಲ್ಲಿ ನೆರಳಿನ ಜತೆಗೆ ಪ್ರಾಣಿ-ಪಕ್ಷಿಗಳಿಗೂ ಆಶ್ರಯವಾಗಲಿದೆ. ಅರಣ್ಯ ಇಲಾಖೆಯ ಈ ಕಾರ್ಯಕ್ಕೆ ಸ್ಥಳೀಯ ಸಂಘ ಸಂಸ್ಥೆಗಳೂ ಕೈ ಜೋಡಿಸಿವೆ.
ಆತ್ರಾಡಿ ಮಣಿಪಾಲ-ಬಜ್ಪೆ ರಾಜ್ಯ ಹೆದ್ದಾರಿ ಹಾಗೂ ಏಳಿಂಜೆ-ಉಳೆಪಾಡಿ ರಸ್ತೆಗಳು ಇತ್ತೀಚೆಗೆ ವಿಸ್ತರಣೆಗೊಂಡು ಸುಂದರಗೊಂಡಿದ್ದು, ಇದೀಗ ಇಕ್ಕೆಗಳಲ್ಲಿ ಗಿಡ ನೆಡುವುದರಿಂದ ಇನ್ನಷ್ಟು ಅಂದವಾಗಲಿದೆ. ಎರಡೂ ರಸ್ತೆಗಳ 4 ಕಿ.ಮೀ. ವ್ಯಾಪ್ತಿಯ ಇಕ್ಕೆಲಗಳಲ್ಲಿ 4 ಮೀ. ಅಂತರಗಳಲ್ಲಿ ಗಿಡ ನೆಡಲಾಗುತ್ತಿದೆ. ಅರಣ್ಯ ಇಲಾಖೆಯ ಈ ಯೋಜನೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಲು ಮರಗಳ ಸೌಂದರ್ಯ ಪರಿಸರವನ್ನು ಕಂಗೊಳಿಸುವಂತೆ ಮಾಡಲಿದೆ.
ಮೈಸೂರು-ಬೆಂಗಳೂರು ಹೆದ್ದಾರಿ ಇಕ್ಕೆಲಗಳಲ್ಲಿನ ಮರಗಳು ನೆರಳು ಮತ್ತು ಗಾಳಿ ನೀಡುವಂತೆ ಇಲ್ಲಿಯೂ ಉತ್ತಮ ತಳಿಯ ಗಿಡಗಳನ್ನು ನೆಡಲಾಗಿದ್ದು, ಮುಂದಿನ ದಿನಗಳಲ್ಲಿ ರಸ್ತೆಯ ಇಕ್ಕೆಲಗಳು ಸುಂದರಗೊಳ್ಳುವುದರ ಜತೆಗೆ ನೆರಳು ಮತ್ತು ಉತ್ತಮ ಗಾಳಿ ದೊರೆಯಲಿದೆ.
ಆನಂದ, ಉಪವಲಯ ಅರಣ್ಯಾಧಿಕಾರಿ, ಮೂಡುಬಿದಿರೆ ವಲಯ
ಅರಣ್ಯ ಇಲಾಖೆಯಿಂದ ಉತ್ತಮ ತಳಿಯ ಗಿಡಗಳನ್ನು ರಸ್ತೆ ಇಕ್ಕೆಲಗಳಲ್ಲಿ ನೆಡುವ ಕಾರ್ಯವಾಗುತ್ತಿದೆ. ಇದರ ನಿರ್ವಹಣೆಯನ್ನೂ ಇಲಾಖೆ ಮಾಡಲಿದೆ. ಸಾರ್ವಜನಿಕರು, ಸ್ಥಳೀಯ ಸಂಘ ಸಂಸ್ಥೆಯವರು ಸಹಕರಿಸಿದಲ್ಲಿ ನೆಟ್ಟ ಗಿಡಗಳ ರಕ್ಷಣೆ ಇನ್ನಷ್ಟು ಸುಲಭವಾಗಲಿದೆ. ಗಿಡಗಳು ದೊಡ್ಡದಾಗಿ ಬೆಳೆದಾಗ ಸ್ವಚ್ಛ ಗಾಳಿ, ಸುಂದರ ಪರಿಸರಕ್ಕೆ ಕಾರಣವಾಗುತ್ತದೆ.-ನಾಗೇಶ್ ಬಿಲ್ಲವ, ಉಪವಲಯ ಆರಣ್ಯಾಧಿಕಾರಿ, ಮೂಡುಬಿದಿರೆ ವಲಯ