

ನಾಪೋಕ್ಲು: ಇಲ್ಲಿಗೆ ಸಮೀಪದ ಹಳೇತಾಲೂಕಿನ ಬೊಪ್ಪಂಡ ಕಾಶಿ ನಂಜಪ್ಪ ಅವರ ಗದ್ದೆಯಲ್ಲಿ ನಾಟಿ ಓಟವನ್ನು ಶುಕ್ರವಾರ ಆಯೋಜಿಸಲಾಗಿತ್ತು.
ಮಡಿಕೇರಿ ತಾಲೂಕಿನ ನಾಲ್ಕು ನಾಡಿನಲ್ಲಿ ಪ್ರತಿ ಕುಟುಂಬದವರಿಗೂ ಗದ್ದೆ ಇದ್ದರೂ ಯಾರೂ ಅದರಲ್ಲಿ ನಾಟಿಯನ್ನು ಮಾಡದೇ ಹಡಿಲು (ಬಂಜಾರ) ಬಿಟ್ಟಿರುವ ಸಂದರ್ಭ ಬೊಪ್ಪಂಡ ಕಾಶಿ ನಂಜಪ್ಪ ಪ್ರತಿ ವರ್ಷ ಗದ್ದೆಯಲ್ಲಿ ಪೂರ್ವ ಪದ್ಧತಿಯಂತೆ ನಾಟಿ ಓಟ ಹಮ್ಮಿಕೊಂಡಿದ್ದರು.
ಕಾಶಿ ನಂಜಪ್ಪ ಮಾತನಾಡಿ, ಕೊಡಗು ಭತ್ತದ ಖಣಜವಾಗಿತ್ತು. ಪ್ರತಿ ಕುಟುಂಬದವರು ಗದ್ದೆಯನ್ನು ಉತ್ತು ಬಿತ್ತಿ ನಾಟಿ ಮಾಡಿ ಜೀವನ ನಡೆಸುತ್ತಿದ್ದರು. ಆದರೆ ಪ್ರಸ್ತುತ ಗದ್ದೆಯನ್ನು ನಾಟಿ ಮಾಡದೇ ಮೋಜು-ಮಸ್ತಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಅನಾದಿ ಕಾಲದಿಂದಲೂ ಒಂದು ವರ್ಷದ ಊಟದ ಭತ್ತವನ್ನು ಪ್ರತಿ ಕುಟುಂಬದವರು ಶೇಖರಿಸಿ ಇಟ್ಟು ಉತ್ತಮವಾಗಿ ಜೀವನ ನಡೆಸುತ್ತಿದ್ದರು. ಹಾಗೆಯೇ ಅವರು ಗಟ್ಟಿಮುಟ್ಟಾಗಿ 100 ವರ್ಷಗಳ ಕಾಲ ಬಾಳಿ ಬದುಕುತ್ತಿದ್ದರು ಎಂದು ತಿಳಿಸಿದರು.
ಹಿಂದಿನ ಕಾಲದಲ್ಲಿ ಕೂಡು ನಾಟಿ (ಸಹಕಾರ ) ಪದ್ಧತಿಯಲ್ಲಿ ಗದ್ದೆ ನಾಟಿ ಮಾಡುತ್ತಿದ್ದರು. ಊರಿನ ಜನರೆಲ್ಲರೂ ಒಟ್ಟು ಸೇರಿ ಜಾನುವಾರುಗಳಲ್ಲಿ ಗದ್ದೆ ಹೂಡಿ ನಾಟಿ ಮಾಡುತ್ತಿದ್ದರು. ಹಾಡು, ತಮಾಷೆ, ಹರಟೆ, ಕ್ರೀಡೆ, ವಿಶೇಷ ಭೋಜನ ಇರುತ್ತಿತ್ತು. ಗದ್ದೆ ಪೂರ್ಣ ನಾಟಿಯಾದ ಮೇಲೆ ಕೊನೆಯಲ್ಲಿ ಕ್ರೀಡೆಯ ಒಂದು ಅಂಗವಾಗಿ ನಾಟಿ ಮಾಡಿದ ಗದ್ದೆಯ ಮಧ್ಯದಲ್ಲಿ ಓಡುವುದೇ ನಾಟಿ ಓಟವಾಗಿತ್ತು ಎಂದರು.