

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಅಭಿವೃದ್ಧಿ ನೆಪದಲ್ಲಿ ಗಿಡ ಮರಗಳನ್ನು ನಾಶಪಡಿಸುವ ಕೆಲಸಕ್ಕೆ ತಡೆ ಬೀಳಬೇಕು ಜತೆಗೆ ಅವುಗಳನ್ನು ಉಳಿಸಿಕೊಳ್ಳಲು ಎಲ್ಲರೂ ಪ್ರಾಮಾಣಿಕವಾಗಿ ಮುಂದಾಗಬೇಕು ಎಂದು ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ವಿಜಯ್ ಕುಮಾರ್ ಕರೆ ನೀಡಿದರು.
ಕಸಬಾ ಹೋಬಳಿಯ ಮಜರಾಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ವೀರಾಪುರ ಗ್ರಾಮದ ಕೆರೆಯಲ್ಲಿ ಸಿಡಿಡಿ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ಗ್ರಾಪಂ ವತಿಯಿಂದ 50 ಕ್ಕೂ ಹೆಚ್ಚು ಬಗೆಯ ಸಸಿಗಳ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಿಡಿಡಿ ಇಂಡಿಯಾ ಸಂಸ್ಥೆ ಸಾಕಷ್ಟು ಸಮಾಜಮುಖಿ ಕಾರ್ಯ ಮಾಡುತ್ತಿದ್ದು, ಪ್ರತಿ ಗ್ರಾಮಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ಅಭಿವೃದ್ಧಿಯತ್ತ ಸಾಗಬೇಕೆಂಬ ದೃಷ್ಟಿಯಲ್ಲಿ ಮಹತ್ತರ ಯೋಜನೆಗಳನ್ನು ರೂಪಿಸಿದೆ ಎಂದರು. ಮುಖ್ಯವಾಗಿ ಜಲಮೂಲಗಳನ್ನು ಉಳಿಸುವ ಮತ್ತು ನಶಿಸಿ ಹೋಗುತ್ತಿರುವ ಕೆರೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಿಡಿಡಿ ಇಂಡಿಯಾ ಸಂಸ್ಥೆ ಶ್ರಮಿಸುತ್ತಿದೆ ಎಂದು ತಿಳಿಸಿದರು. ಗಿಡ-ಮರ ಬೆಳೆಸುವುದು ಇಂದಿನ ದಿನಗಳಲ್ಲಿ ಅತ್ಯವಶ್ಯವಾಗಿದೆ. ಪರಿಸರ ನಾಶದಿಂದ ಮಾನವನ ಮೇಲೆ ದುಷ್ಪರಿಣಾಮಗಳು ಬೀರುತ್ತಿವೆ. ಆದ್ದರಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಪ್ರಸ್ತುತ ಪೂರಕವಾಗಿದೆ ಎಂದರು.
ಪರಿಸರದ ಮೇಲೆ ನಿರಂತರ ದಾಳಿ: ಮನುಷ್ಯ ಪರಿಸರದ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಪರಿಣಾಮ ಪರಿಸರ ಮಾಲಿನ್ಯ ಹೆಚ್ಚಾಗುವಂತಾಗಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ರವೀಂದ್ರ ಹೇಳಿದರು. ಇದರಿಂದ ಪರಿಸರದಲ್ಲಿ ಏರಿಳಿತಗಳನ್ನು ಕಾಣುವಂತಾಗಿದೆ. ಅಭಿವೃದ್ಧಿ ಹಾಗೂ ನಗರೀಕರಣ ನೆಪದಿಂದ ಕಾಡು ಮಾಯವಾಗುತ್ತಿದೆ. ಇದರಿಂದ ಅನೇಕ ಜೀವಸಂಕುಲಗಳು ಕಣ್ಮರೆಯಾಗುವಂತಾಗಿದೆ. ಇದೇ ರೀತಿ ಗಿಡಮರಗಳನ್ನು ನಾಶ ಮಾಡಿದರೆ ಮುಂದಿನ ದಿನಗಳಲ್ಲಿ ಇಡೀ ಮನುಕುಲ ಸಂಕಷ್ಟ ಪಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪಟ್ಟಣದಲ್ಲಿ ರಸ್ತೆ ಅಗಲೀಕರಣ ನೆಪದಲ್ಲಿ ಗಿಡಮರಗಳನ್ನು ನಾಶ ಮಾಡುವ ಬದಲಾಗಿ ಪರ್ಯಾಯ ವ್ಯವಸ್ಥೆಗೆ ಮುಂದಾಗಬೇಕಾಗಿದೆ ಎಂದರು. ಗ್ರಾಮಾಂತರ ಭಾಗದಲ್ಲಿ ಜಲಾನಯನದ ಮೂಲಗಳು, ಕಾಲುವೆಗಳು, ಚಿಕ್ಕಚಿಕ್ಕ ಕೆರೆಗಳು ನಗರೀಕರಣ ಸೇರಿ ವಿವಿಧ ಅಂಶಗಳಿಂದಾಗಿ ಸಂಪೂರ್ಣವಾಗಿ ಮುಚ್ಚು ಹೋಗುತ್ತಿರುವುದು ದುರಂತ ಎಂದರು. ಕೆರೆಗಳ ಅಭಿವೃದ್ದಿಗೆ ಶ್ರಮಿಸುತ್ತಿರುವ ಸಿಡಿಡಿ ಇಂಡಿಯಾ ಮತ್ತು ಕನ್ಸರ್ನ್ ಇಂಡಿಯಾ ಫೌಂಡೇಶನ್ ಮತ್ತು ಥಾಮ್ಸನ್ ರಾಯಿಟರ್ಸ್ ಸಂಸ್ಥೆ ಮಹತ್ತರ ಹೆಜ್ಜೆ ಇಟ್ಟಿದೆ ಎಂದರು.