

ಕೊಳ್ಳೇಗಾಲ: ತಾಲೂಕಿನ ಪಾಳ್ಯ ಗ್ರಾಮದ ಮುಖ್ಯರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ಬುಧವಾರ ರಸ್ತೆಯಲ್ಲೆ ಭತ್ತದ ಪೈರು ನಾಟಿ ಮಾಡಿ ಪ್ರತಿಭಟನೆ ನಡೆಸಿದರು.
ಕಳೆದ ಎರಡು ದಿನಗಳಿಂದ ಬಿದ್ದ ಮಳೆಯಿಂದಾಗಿ ರಾಜಬೀದಿಯು (ಗ್ರಾಪಂ ರಸ್ತೆ) ಕೆಸರು ಗದ್ದೆಯಾಗಿದೆ. ಅಲ್ಲದೆ ಗ್ರಾಮ ಬಹುತೇಕ ರಸ್ತೆಗಳು ಮಣ್ಣಿನಿಂದ ಕೂಡಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಜಾಣಕುರುಡು ತೋರುತ್ತಿದ್ದಾರೆ. ಇದರಿಂದ ಬೇಸತ್ತು ರಸ್ತೆಯಲ್ಲೆ ನಾಟಿ ಮಾಡಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು.
ಈ ಬಗ್ಗೆ ಗಮನ ನೀಡಿ ಕ್ಷೇತ್ರದ ಶಾಸಕ ಎಂ.ಆರ್.ಮಂಜುನಾಥ್ ಅವರು ಗ್ರಾಮದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಪಡಿಸಲಿ ಎಂದು ಒತ್ತಾಯಿಸಿದರು. ಗ್ರಾಮದ ಹರೀಶ್, ಮಲ್ಲು, ಶಿವರಾಜು, ಮಲ್ಲು, ಪುನ್ನಬಸಪ್ಪ ಇತರರು ಪಾಲ್ಗೊಂಡಿದ್ದರು.