

ಅರಕಲಗೂಡು: ಉತ್ಕೃಷ್ಟ ದರ್ಜೆ ಹೊಗೆಸೊಪ್ಪು ಉತ್ಪಾದನೆಗೆ ಹೆಸರಾದ ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆ ವ್ಯಾಪ್ತಿಯಲ್ಲಿ ಸಸಿಗಳ ನಾಟಿ ಕಾರ್ಯ ಚುರುಕುಗೊಂಡಿದೆ.
ತಾಲೂಕಿನಲ್ಲಿ ಭಾನುವಾರ ರಾತ್ರಿ ಶುರುವಾದ ಸುರಿದ ಜಿಟಿ ಜಿಟಿ ಮಳೆ ಸೋಮವಾರ ಬೆಳಗ್ಗಿನವರೆಗೆ ಸುರಿಯಿತು. ವರುಣನ ಕೃಪೆಯಿಂದ ಸಂತಸಗೊಂಡ ರೈತರು ಬೆಳಗ್ಗೆ ಎದ್ದೊಡನೆ ಜಿಟಿ ಜಿಟಿ ಮಳೆಯನ್ನು ಲೆಕ್ಕಿಸದೆ ನಾಟಿ ಕಾರ್ಯ ನಡೆಸಲು ಜಮೀನಿನತ್ತ ಹೆಜ್ಜೆ ಹಾಕಿದರು.
ರಾಮನಾಥಪುರ ತಂಬಾಕು ಮಾರುಕಟ್ಟೆ ವ್ಯಾಪ್ತಿಗೆ ಸೇರಿದ ಕೊಣನೂರು, ದೊಡ್ಡಮಗ್ಗೆ, ರಾಮನಾಥಪುರ, ಹಳ್ಳಿಮೈಸೂರು ಹೋಬಳಿ ಭಾಗದಲ್ಲಿ ನೀರಾವರಿ ಸೌಲಭ್ಯ ಹೊಂದಿರುವ ಕೆಲವೇ ರೈತರು ಈಗಾಗಲೇ ನಾಟಿ ಕಾರ್ಯ ನಡೆಸಿದ್ದಾರೆ. ಮಳೆಯಾಶ್ರಿತ ಪ್ರದೇಶದ ರೈತರು ಈ ಬಾರಿ ಮುಂಗಾರುಪೂರ್ವ ಮಳೆಯ ಮುನಿಸಿನಿಂದಾಗಿ ಜಮೀನು ಹದಗೊಳಿಸಲು ಸಾಧ್ಯವಾಗಿರಲಿಲ್ಲ. ಕೆಳದ ವಾರದ ಬಿದ್ದ ಮಳೆಗೆ ಜಮೀನುಗಳಿಗೆ ಸಾಗಿಸಿದ್ದ ಗೊಬ್ಬರ ಎರಚಿ ಉಳುಮೆ ಮಾಡಿ ಕೆಲವು ರೈತರು ಭೂಮಿ ಹದಗೊಳಿಸಿದ್ದರು. ಇದೀಗ ಬಿದ್ದ ಮಳೆಗೆ ನಾಟಿ ಕಾರ್ಯ ಆರಂಭವಾಗಿದೆ.
ಹೊಗೆಸೊಪ್ಪಿಗೆ ಉತ್ತಮ ಬೆಲೆ ದೊರಕಿದ ಹಿನ್ನೆಲೆಯಲ್ಲಿ ಹಾಗೂ ಪ್ರಸ್ತುತ ಆಂಧ್ರಪ್ರದೇಶದ ಮಾರುಕಟ್ಟೆಗಳಿಗೆ ತಂಬಾಕಿಗೆ ಬೆಲೆ ಗರಿಷ್ಠ ಮಟ್ಟ ತಲುಪಿರುವುದರಿಂದ ಈ ಭಾಗದ ಬೆಳೆಗಾರರು ಬೆಳೆ ಬೆಳೆಯಲು ಹೆಚ್ಚು ಆಸಕ್ತಿ ವಹಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಬೆಳೆಸಿದ್ದ ಸಸಿ ಮಡಿಗಳನ್ನು ಮಳೆ ಕೊರತೆ ನಡುವೆಯೂ ಟ್ರೇನಲ್ಲಿ ಬೆಳೆಸಿ ರಕ್ಷಣೆ ಮಾಡಿಕೊಂಡಿದ್ದರು. ಈಗ ಬಿದ್ದ ಮಳೆ ನಾಟಿ ಕಾರ್ಯ ನಡೆಸಲು ವರದಾನವಾಗಿದ್ದು ಬೆಳೆಗಾರರ ಸಂತಸ ಇಮ್ಮಡಿಗೊಳಿಸಿದೆ.