

ಮಡಿಕೇರಿ: ಇಂದಿನ ಜಾಗತೀಕರಣದ ಅಬ್ಬರದ ದಿನಗಳಲ್ಲಿ ಎಲ್ಲೆಲ್ಲೂ ಕಾಂಕ್ರೀಟ್ ಕಾಡುಗಳೇ ಕಂಡು ಬರುತ್ತಿರುವಾಗ ವನ ಸಂಪತ್ತನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಸಿಗಳ ನೆಡುವಿಕೆ ಹೆಚ್ಚಾಗಬೇಕಾದ ಅತ್ಯಗತ್ಯವಾಗಿದೆ ಎಂದು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಸುಂದರರಾಜ್ ಅಭಿಪ್ರಾಯಪಟ್ಟರು.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್‌ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿನ ಮಿಸ್ಟಿ ಹಿಲ್ಸ್ ನಿರ್ವಹಣೆಯ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ವನ ಮಹೋತ್ಸವವನ್ನು ಸಸಿ ನೆಡುವ ಮೂಲಕ ಸುಂದರ ರಾಜ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಸುಂದರರಾಜ್, ನಗರ ಪ್ರದೇಶಗಳು ಮಾತ್ರವಲ್ಲ ಗ್ರಾಮೀಣ ಪ್ರದೇಶಗಳಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಕಾಂಕ್ರೀಟಿಕರಣವಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಹೀಗಾಗಿ ವನ ಸಂಪತ್ತನ್ನು ಸಂರಕ್ಷಿಸಬೇಕಾದ ಅಗತ್ಯತೆ ಮನಗಂಡು ಸಸ್ಯ ಸಂಕುಲ ವೃದ್ಧಿಸುವ ದೃಷ್ಟಿಯಲ್ಲಿ ವನಮಹೋತ್ಸವದಂಥಹ ಕಾರ್ಯಕ್ರಮಗಳು ಹೆಚ್ಚಾಗಬೇಕಾಗಿದೆ ಎಂದರು.
ಯುವಪೀಳಿಗೆಗೂ ಸಸ್ಯಸಂಕುಲದ ಅಗತ್ಯತೆಯನ್ನು ಮನವರಿಕೆ ಮಾಡಿಕೊಡುವ ಮೂಲಕ ಮರಗಳನ್ನು ಕಡಿಯುವುದನ್ನು ತಡೆಗಟ್ಟಿ, ಪರಿಸರ ಸ್ನೇಹದ ಗುಣಗಳನ್ನು ಯುವಪೀಳಿಗೆಯ ಮನಸ್ಸುಗಲ್ಲಿ ಸಷ್ಟಿಸುವ ಅಗತ್ಯವಿದೆ ಎಂದು ಸುಂದರರಾಜ್ ಮನವಿ ಮಾಡಿದರು.
ರೋಟರಿ ಜಿಲ್ಲೆ ೩೧೮೧ನ ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷ ಸತೀಶ್ ಬೊಳಾರ್ ಮಾತನಾಡಿ, ರೋಟರಿಯು ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಈ ವರ್ಷವೂ ಅನೇಕ ಯೋಜನೆ ಹಮ್ಮಿಕೊಂಡಿದೆ. ಸಸ್ಯರಾಶಿಯನ್ನು ಹೆಚ್ಚಿಸುವ ಯೋಜನೆ ಜತೆಗೇ ಮಳೆಕೊಯ್ಲು ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಹೇಳಿದರು.
ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ನಗರಸಭೆ ವತಿಯಿಂದ ಕಳೆದ ವರ್ಷ ೧ ಸಾವಿರ ಸಸಿಗಳನ್ನು ನಗರ ವ್ಯಾಪ್ತಿಯಲ್ಲಿ ನೆಡಲಾಗಿತ್ತು. ಈ ವರ್ಷವೂ ಸಸಿಗಳನ್ನು ನೆಡುವ ಮೂಲಕ ಮಡಿಕೇರಿ ನಗರವನ್ನು ಹಸಿರೀಕರಣ ಮಾಡುವ ಯೋಜನೆಯಿದೆ. ನಗರದ ಸ್ವಚ್ಚತೆಯನ್ನು ಕಾಪಾಡುವುದು ಪ್ರತೀಯೋರ್ವರ ಕರ್ತವ್ಯ ಹೇಗೆಯೇ ಅಂತೆಯೇ ಸಸ್ಯರಾಶಿಯ ರಕ್ಷಣೆ ಕೂಡ ಪ್ರತೀಯೋರ್ವರ ಹೊಣೆಯಾಗಿದೆ ಎಂದರು.
ರೋಟರಿ ಸಹಾಯಕ ಗವರ್ನರ್ ದೇವಣಿರ ತಿಲಕ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ, ಮಿಸ್ಟಿ ಹಿಲ್ಸ್ ನಿರ್ದೇಶಕ ಎಚ್.ಟಿ.ಅನಿಲ್, ನಗರಸಭೆಯ ಸದಸ್ಯೆ ಶಾರದಾ ನಾಗರಾಜ್, ಮಾಜಿ ಸದಸ್ಯೆ ವೀಣಾಕ್ಷಿ, ಪ್ರಮುಖರಾದ ಅನಂತಶಯನ, ಪ್ರಸಾದ್ ಗೌಡ, ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.