

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಕಡಬ ತಾಲೂಕಿನ ಬಳ್ಪ ಗ್ರಾಪಂ ವ್ಯಾಪ್ತಿಯ ಬೀದಿಗುಡ್ಡೆ ಸಮೀಪದ ಕಾಂಜಿ ಎಂಬಲ್ಲಿ ಹಲವಾರು ವರ್ಷಗಳಿಂದ ಭತ್ತ ನಾಟಿ ಮಾಡದೆ ಹಡಿಲು ಬಿದ್ದಿದ್ದ ಗದ್ದೆಯಲ್ಲಿ ಭತ್ತದ ಸಸಿಗಳನ್ನು ನಾಟಿ ಮಾಡುವ ಕಾರ್ಯ ಸೋಮವಾರ ನಡೆಯಿತು. ಈ ಮೂಲಕ ಹಲವು ವರ್ಷಗಳಿಂದ ಹಡಿಲು ಬಿದ್ದಿದ್ದ ಗದ್ದೆಯಲ್ಲಿ ನಾಟಿ ಮಾಡಿ ಸಮೃದ್ಧತೆ ಸೃಷ್ಟಿಸುವ ಪ್ರಯತ್ನ ನಡೆಯಿತು.
ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ನಾಟಿ ಕಾರ್ಯ ನಡೆಸಿ ಪ್ರೇರಣೆಯಾದರು.
ನೂರಾರು ಮಂದಿ ಭಾಗಿ: 1.5 ಎಕರೆ ಹಡಿಲು ಗದ್ದೆಯನ್ನು ಆರಂಭದಲ್ಲಿ ಉಳುಮೆ ಮಾಡಲಾಯಿತು. ಬಳಿಕ ಕಡಬ ತಾಪಂ ಡೇಎನ್‌ಆರ್‌ಎಲ್‌ಎಂ ಯೋಜನೆ ಮೂಲಕ ಪಂಜ ಕೃಷಿ ಇಲಾಖೆ, ಗ್ರಾಪಂ ವತಿಯಿಂದ ನಡೆದ ಕೆಸರ್ಡ್ ಒಂಜಿ ದಿನ ನೇಜಿ ನಾಟಿ ಕಾರ್ಯದಲ್ಲಿ ನಾಟಿ ಕಾರ್ಯ ನೆರವೇರಿತು. ಎಡಮಂಗಲ, ಸುಬ್ರಹ್ಮಣ್ಯ ಕೃಷಿ ಸಖಿಯರ ಮುತುವರ್ಜಿಯಿಂದ ಹಡಿಲು ಬಿದ್ದ ಕೃಷಿ ಭೂಮಿಯನ್ನು ಫಲವತ್ತತೆ ಮಾಡುವ ದೃಷ್ಟಿಯಲ್ಲಿ ಕಡಬ ತಾಲೂಕಿನ ಲ್ಲ ಕೃಷಿ ಸಖಿಯರು, ಪಶು ಸಖಿಯರು, ಸ್ಥಳೀಯರು, ಒಕ್ಕೂಟಗಳ ಪದಾಧಿಕಾರಿಗಳು, ಸ್ವ ಸಹಾಯ ಗುಂಪುಗಳ ಸದಸ್ಯರು ಸೇರಿದಂತೆ 100ಕ್ಕೂ ಅಧಿಕ ಮಂದಿ ನೇಜಿ ನಾಟಿ ಮಾಡಿದರು.
ಪುತ್ತೂರು ವಿಭಾಗ ಕೃಷಿ ಇಲಾಖೆ ಉಪ ನಿರ್ದೇಶಕ ಶಿವಶಂಕರ್, ಬಲ್ಪ ಗ್ರಾಪಂ ಅಧ್ಯಕ್ಷ ಹರ್ಷಿತ್ ಕಾರ್ಜ, ಮಾಜಿ ಅಧ್ಯಕ್ಷೆ ಶಶಿಕಲಾ, ಎಡಮಂಗಲ ಗ್ರಾಪಂ ಅಧ್ಯಕ್ಷ ರಾಮಣ್ಣ ಗೌಡ ಜಾಲ್ತರ್, ಗ್ರಾಪಂ ಸದಸ್ಯರು ಭಾಗವಹಿಸಿದ್ದರು. ಡೇಎನ್‌ಎರ್‌ಎಲ್‌ಎಂ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಕೆ., ಕೃಷಿ ಚಟುವಟಿಕೆ ಬ್ಲಾಕ್ ಮ್ಯಾನೇಜರ್ ಮೋಹನ್, ತಾಲೂಕು ಸಂಪನ್ಮೂಲ ವ್ಯಕ್ತಿಗಳಾದ ಧನ್ಯಶ್ರೀ, ರಮ್ಯ, ಪಂಜ ರೈತ ಸಂಪರ್ಕ ಕೇಂದ್ರದ ತಾಂತ್ರಿಕ ವ್ಯವಸ್ಥಾಪಕಿ ಸೀಮಾ, ಪಿಡಿಒ ನಾರಾಯಣ, ಗದ್ದೆಯ ಮಾಲೀಕರು, ಸಾರ್ವಜನಿಕರು, ಪಂಚಾಯಿತಿ ಸಿಬ್ಬಂದಿ ಇದ್ದರು.
ಭತ್ತ ಉತ್ಪಾದನೆ ಅಗತ್ಯ. ಆಧುನಿಕ ಯುವ ಜನಾಂಗಕ್ಕೆ ಆಹಾರ ಉತ್ಪಾದನೆ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಸಫಲವಾಗಿದೆ. ಹಡಿಲು ಬಿದ್ದ ಗದ್ದೆಯನ್ನು ಫಲವತ್ತತೆಗೊಳಿಸುವ ಕಾರ್ಯ ಜಿಲ್ಲೆಗೆ ಮಾದರಿ. ಇದೇ ರೀತಿ ಜಿಲ್ಲೆಯಲ್ಲಿ ಹಡಿಲು ಬಿದ್ದ ಗದ್ದೆಗಳನ್ನು ನಾಟಿ ಮಾಡಿ ಸಮೃದ್ಧಿ ಸೃಷ್ಟಿಸಲು ಈ ಕಾರ್ಯಕ್ರಮ ಪ್ರೇರಣೆಯಾಗಲಿದೆ. ಗದ್ದೆ ನಾಟಿಯ ಅವಶ್ಯಕತೆಯನ್ನು ಮಕ್ಕಳು ತಿಳಿದುಕೊಳ್ಳಲು ಈ ಕಾರ್ಯಕ್ರಮ ಪೂರಕ.
ನವೀನ್ ಕುಮಾರ್ ಭಂಡಾರಿ
ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ