ಸಾವಿರ ಸಸಿ ನೆಡುವ ಕಾರ್ಯಕ್ಕೆ ಚಾಲನೆ

06 NRD 1
Published on

ನರಗುಂದ: ಗಿಡ ನೆಡುವುದು ಮುಖ್ಯವಲ್ಲ. ನೆಟ್ಟಿರುವ ಗಿಡಗಳನ್ನು ಸರಿಯಾಗಿ ಪಾಲನೆ ಮಾಡಲು ಅಧಿಕಾರಿಗಳು ಶ್ರಮಿಸಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ನೀರಾವರಿ ಇಲಾಖೆ ಪ್ರವಾಸಿ ಮಂದಿರ ಆವರಣದಲ್ಲಿ ಸಾಮಾಜಿಕ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಶುದ್ಧ ಗಾಳಿ, ಸುಂದರ ಪರಿಸರ ನಿರ್ಮಾಣವಾಗಬೇಕಾದರೆ ಸಮಾಜದ ಪ್ರತಿಯೊಬ್ಬರೂ ಸಸಿ ನೆಟ್ಟು ಹೆಮ್ಮರಗಳನ್ನಾಗಿ ಬೆಳೆಸಬೇಕು. ಪಟ್ಟಣದ ಸಾಮಾಜಿಕ ಅರಣ್ಯ ಇಲಾಖೆಯಿಂದ ಮಹಾಗಣಿ, ಹೊಂಗೆ, ಅರಳೆ, ಶಿರಸಲಾ, ಹತ್ತಿ, ಬಸವನ ಪಾದ ಸೇರಿದಂತೆ ವಿವಿಧ ಬಗೆಯ 700 ಸಸಿ ಹಾಗೂ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯಿಂದ 300 ಸೇರಿ ಒಟ್ಟು 1 ಸಾವಿರ ಸಸಿಗಳನ್ನು ನೆಡಲಾಗುತ್ತಿದೆ. ನೆಟ್ಟಿರುವ ಸಸಿಗಳಿಗೆ ಹನಿ ನೀರಾವರಿ ಪದ್ಧತಿ ಮೂಲಕ ನೀರುಳಿಸಬೇಕು ಎಂದು ಅರಣ್ಯ ಇಲಾಖೆಗೆ ತಿಳಿಸಿದರು.

ಸಾಮಾಜಿಕ ಅರಣ್ಯ ಇಲಾಖೆ ಆರ್‌ಎಫ್‌ಒ ಡಿ.ಬಿ. ಪಠಾಣ ಮಾತನಾಡಿ, ತಾಲೂಕಿನಲ್ಲಿ ಅರಣ್ಯ ಸಂಪತ್ತು ಹೆಚ್ಚಿಸಲು ನರ್ಸರಿಯಲ್ಲಿ 21,000 ಸಸಿಗಳನ್ನು ಬೆಳೆಸಲಾಗಿದೆ. ರೈತರು ತಮ್ಮ ಜಮೀನಿನ ಒಡ್ಡು, ಬದುವು, ರಸ್ತೆ ಅಕ್ಕ-ಪಕ್ಕದಲ್ಲಿ ನೆಡುವುದಕ್ಕಾಗಿ 3 ರೂಪಾಯಿ ಸಬ್ಸಿಡಿ ದರದಲ್ಲಿ ಒಟ್ಟು 9 ಸಾವಿರ ಸಸಿಗಳನ್ನು ಮಾರಾಟ ಮಾಡುವ ಗುರಿ ಹೊಂದಲಾಗಿದೆ. ಈ ಪೈಕಿ ಈಗಾಗಲೇ 2000 ಸಸಿಗಳನ್ನು ರೈತರಿಗೆ ಮಾರಾಟ ಮಾಡಲಾಗಿದೆ ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ನೀಲವ್ವ ವಡ್ಡಿಗೇರಿ, ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ತಾಪಂ ಇಒ ಎಸ್.ಕೆ. ಇನಾಮದಾರ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಬ್ಯಾಗಿ, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಜನಮಟ್ಟಿ, ಜಗದೀಶ ಕುರಿ, ಮಹೇಶ ಓಲೇಕಾರ, ರಫೀಕ ಗಸ್ತಿ, ದೇವಣ್ಣ ಕಲಾಲ, ರಾಚನಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಎಸ್.ಆರ್. ಪಾಟೀಲ, ಕಿರಣ ಮುಧೋಳೆ, ನಾಗನಗೌಡ ತಿಮ್ಮನಗೌಡ್ರ, ಹನುಮಂತ ಕಾಡಪ್ಪನವರ, ಬಸು ಪಾಟೀಲ, ಉಮೇಶ ಯಳ್ಳೂರ, ಸುಮಿತ ಜಕಬಾಳ, ಸಿರಾಜ್ ಟಕ್ಕೇದ, ಹನುಮಂತಗೌಡ ಸಂಕನಗೌಡ್ರ, ಎ.ಎಂ. ನದಾಫ್, ಪಾಲಾಕ್ಷಗೌಡ ಭರಮಗೌಡ್ರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net