

ಸುಂಟಿಕೊಪ್ಪ: ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟರೆ, ಪ್ರಾಣಿ-ಪಕ್ಷಿಗಳಿಗೆ ಆಹಾರ ದೊರೆಯುವುದಲ್ಲದೇ, ಪರಿಸರವೂ ಸಮೃದ್ಧಿಯಾಗಿರುತ್ತದೆ ಎಂದು ಸುಂಟಿಕೊಪ್ಪ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಹೀದ್‌ಜಾನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಗದೆಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತಮಾಡಿದರು.
ಪರಿಸರದ ಪ್ರಾಮುಖ್ಯತೆಯನ್ನು ಮನವರಿಕೆ ಮಾಡಿಕೊಂಡು ಮನೆಯ ಪರಿಸರದಲ್ಲಿ ಹಾಗೂ ಅರಣ್ಯಗಳಲ್ಲಿ ನಾವು ಹಣ್ಣಿನ ಗಿಡಗಳನ್ನು ಬೆಳೆಸಲು ಹೆಚ್ಚಿನ ಆದ್ಯತೆ ನೀಡುವುದರಿಂದ ಭೂಮಿಯಲ್ಲಿ ಜೀವಿಸುವ ಪ್ರಾಣಿ-ಪಕ್ಷಿಗಳಿಗೆ ಆಹಾರ ದೊರೆಯುವುದಲ್ಲದೇ ಪರಿಸರ ರಕ್ಷಣೆ ಮಾಡಿದಂತಾಗುತ್ತದೆ. ಅದರಿಂದ ಮಕ್ಕಳು ಮನೆ ಸೇರಿದಂತೆ ಅರಣ್ಯಗಳಲ್ಲಿ ಹಣ್ಣಿನ ಗಿಡಗಳನ್ನು ಪೋಷಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ವಹೀದ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಿಡಗಳನ್ನು ನೆಡುವುದು ಒಂದು ದಿನಕ್ಕೆ ಸೀಮಿತವಾಗದೆ ಅವುಗಳನ್ನು ನಿತ್ಯ ಹಾರೈಕೆ ಮಾಡುವ ಕಾರ್ಯವಾಗಬೇಕು. ಹಾಗಿದ್ದಲ್ಲಿ ಮಾತ್ರ ತಾವು ಕೈಗೊಂಡ ಕಾರ್ಯ ಅರ್ಥಪೂರ್ಣವಾಗಲು ಸಾಧ್ಯ ಎಂದು ತಿಳಿಸಿದರು.
ಶಾಲೆ ಮುಖ್ಯ ಶಿಕ್ಷಕಿ ಹೇಮಾ ಅಧ್ಯಕ್ಷತೆ ವಹಿಸಿದ್ದರು. ಸುಂಟಿಕೊಪ್ಪ ವಲಯ ಮೇಲ್ವಿಚಾರಕ ಸಂತೋಷ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪಿ.ಆರ್.ಸುಕುಮಾರ್, ಒಕ್ಕೂಟದ ಅಧ್ಯಕ್ಷ ನಾಗರತ್ನಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅನಿತಾ, ಸಹಶಿಕ್ಷಕಿ ಮೀನಾ, ಸೇವಾ ಪ್ರತಿನಿಧಿ ಜ್ಯೋತಿಲಕ್ಷ್ಮೀ, ಸಹ ಶಿಕ್ಷಕಿ ಅನಿತಾ, ಶೌರ್ಯ ಘಟಕದ ಸದಸ್ಯರು ಇತರರಿದ್ದರು.