ಅರವತ್‌ಮುಕ್ಕುಂಡು ಬಯಲಲ್ಲಿ ನಾಟಿ ಉತ್ಸವ : ಸಂಭ್ರಮಿಸಿದ ವಿದ್ಯಾರ್ಥಿಗಳು : ಕೃಷಿ ಕಾಯಕ ನಿರತರಿಗೆ ಪ್ರಶಸ್ತಿ ಪ್ರದಾನ

New Project (4)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಪುಲರಿ ಅರವತ್ ಸಂಘಟನೆ ಹಾಗೂ ಉದುಮ ಗ್ರಾಮ ಪಂಚಾಯಿತಿ ಜೀವವೈವಿಧ್ಯ ನಿರ್ವಹಣಾ ಸಮಿತಿ ಸಹಯೋಗದೊಂದಿಗೆ ಬೇಕಲ ಸನಿಹದ ಅರವತ್ ಮುಕ್ಕುಂಡು ಬಯಲಲ್ಲಿ ಎರಡು ದಿನಗಳಿಂದ ನಡೆದ ಭತ್ತದ ಬೇಸಾಯ ‘ನಾಟಿ ಉತ್ಸವ’ ಸಮಾಪನಗೊಂಡಿತು.

ಉದುಮ ಶಾಸಕ ಸಿ.ಎಚ್.ಕುಞಂಬು ಸಮಾರಂಭ ಉದ್ಘಾಟಿಸಿದರು. ಉದುಮ ಗ್ರಾಪಂ ಉಪಾಧ್ಯಕ್ಷ ಕೆ.ವಿ.ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಹದಗೊಳಿಸಿದ ಹೊಲಗಳಲ್ಲಿ ವಿವಿಧ ಶಾಲೆಗಳ ಮಕ್ಕಳು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರ ಜತೆಗೆ ನೇಜಿ ನೆಡುವ ಮೂಲಕ ಸಂಭ್ರಮಿಸಿದರು.

ಪಳ್ಳಿಕೆರೆ ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಮಣಿಕಂಠನ್, ಉದುಮ ಗ್ರಾಪಂ ಸದಸ್ಯೆ ಪುಷ್ಪಾವತಿ ಪಿ.ಆರ್., ಬಿಎಂಸಿ ಸದಸ್ಯರಾದ ವಿನೋದ್ ಮೇಲ್ಪುರಂ ಮತ್ತು ಜಗದೀಶ್ ಆರಟ್ಟು ಕಡವು ಉಪಸ್ಥಿತರಿದ್ದರು. ನಾಟಿ ಸಂಘಟನಾ ಸಮಿತಿ ಅಧ್ಯಕ್ಷ ಕೆ.ದಾಮೋದರನ್ ಸ್ವಾಗತಿಸಿದರು. ಉಪಾಧ್ಯಕ್ಷ ರಾಜೇಶ್ ಕುಮಾರ್ ಕೆ. ವಂದಿಸಿದರು.

ಬಹುಮಾನ ವಿತರಣೆ, ಸನ್ಮಾನ

ಹೊಲದಲ್ಲಿ ನೇಜಿ ನೆಡುವ ಮೊದಲು ಸಾಂಪ್ರದಾಯಿಕ ಬೇಸಾಯದ ಬಗ್ಗೆ ಪ್ರಗತಿಪರ ಕೃಷಿಕರು, ಕೃಷಿ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಗದ್ದೆ ವಠಾರದಲ್ಲಿ ವಿವಿಧ ಪ್ರಭೇದಗಳ ಸಸಿಗಳನ್ನು ನೆಟ್ಟರು. ಕಾಸರಗೋಡು ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಿಂದ ಆಗಮಿಸಿದ 500 ವಿದ್ಯಾರ್ಥಿಗಳು ನಾಟಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಹಾಗೂ ಕೃಷಿ ಕಾಯಕದಲ್ಲಿ ನಿರತರಾದವರಿಗೆ ಪ್ರಶಸ್ತಿಯನ್ನು ಸಂಸದ ರಾಜ್‌ಮೋಹನ್ ಉಣ್ಣಿತಾನ್ ವಿತರಿಸಿದರು. ಕಾಸರಗೋಡು ಜಿಲ್ಲೆಯ ಅಪೂರ್ವ ಜೀವವೈವಿಧ್ಯ ಸಂರಕ್ಷಿಸುತ್ತಿರುವ ರೈತರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net