

ಚನ್ನರಾಯಪಟ್ಟಣ : ವಿನಾಶದತ್ತ ಸಾಗುತ್ತಿರುವ ಭೂಮಿಯನ್ನು ರಕ್ಷಿಸಿಕೊಳ್ಳಲು ಹೆಚ್ಚು ಗಿಡ, ಮರಗಳನ್ನು ಬೆಳೆಸುವುದೊಂದೇ ಮಾರ್ಗ ಎಂದು ಲಯನ್ಸ್ ಸಂಸ್ಥೆ ಚನ್ನರಾಯಪಟ್ಟಣ ವಿಷನ್ ಸಂಸ್ಥಾಪಕ ಅಧ್ಯಕ್ಷ ಡಾ.ವಿ.ಮಹೇಶ್ ತಿಳಿಸಿದರು.
ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಲಯನ್ಸ್ ಸೇವಾ ಸಂಸ್ಥೆ ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಬಸ್ ನಿಲ್ದಾಣದ ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಿನೇದಿನೆ ಜಗತ್ತಿನ ತಾಪಮಾನ ಏರಿಕೆಯಾಗುತ್ತಿದ್ದು, ಮಳೆ ಪ್ರಮಾಣ ಕುಸಿಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಪರಿಸರವನ್ನು ತಂಪು ಮಾಡುವ ಹೊಣೆಯನ್ನು ನಾವೆಲ್ಲರೂ ಹೊರಬೇಕಿದೆ. ಈ ಕೆಲಸ ಅರಣ್ಯ ಇಲಾಖೆ, ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವ ಅತಿ ಮುಖ್ಯವಾಗಿದೆ ಎಂದರು.
ಅಭಿವೃದ್ಧಿ ನೆಪದಲ್ಲಿ ಗಿಡ, ಮರಗಳನ್ನು ನಾಶ ಮಾಡುತ್ತಿರುವುದನ್ನು ಬಿಟ್ಟು, ಅವುಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕು. ಮನುಷ್ಯ ಪರಿಸರದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವ ಪರಿಣಾಮ ಇಂದು ಪರಿಸರ ಮಾಲಿನ್ಯ ಹೆಚ್ಚಾಗುವಂತಾಗಿದೆಯಲ್ಲದೆ ಪರಿಸರದಲ್ಲಿ ಏರಿಳಿತಗಳನ್ನು ಕಾಣುವಂತಾಗಿದೆ. ಅಭಿವೃದ್ಧಿ ಹಾಗೂ ಇನ್ನಾವುದೇ ನೆಪದಿಂದ ಕಾಡು ಮಾಯವಾಗುತ್ತಿದೆ. ಇದರಿಂದ ಅನೇಕ ಜೀವಸಂಕುಲಗಳು ಕಣ್ಮರೆಯಾಗುವಂತಾಗಿದ್ದು, ಇದೇ ರೀತಿಯಲ್ಲಿ ಗಿಡಮರಗಳನ್ನು ನಾಶ ಮಾಡಿದರೆ ಮುಂದಿನ ದಿನಗಳಲ್ಲಿ ಇಡೀ ಮನುಕುಲ ಸಂಕಷ್ಟ ಪಡಬೇಕಾಗುತ್ತದೆ ಎಂದರು.
ಮಾನವನ ಅಗತ್ಯೆಗಳಿಗಾಗಿ ಒಂದು ಮರವನ್ನು ಕಟಾವು ಮಾಡಿದರೆ, ಮುಂದೆ 10 ಗಿಡಗಳನ್ನು ನೆಟ್ಟು ಪೋಷಿಸುವ ಸಂಕಲ್ಪ ಹೊಂದಬೇಕು. ಪ್ರಕೃತಿಯಲ್ಲಿನ ಕೀಟ, ಜಂತು, ಬ್ಯಾಕ್ಟೀರಿಯಾಗಳು, ಪ್ರಾಣಿ-ಪಕ್ಷಿಗಳು, ಸಕಲ ಜಲಚರ ಜೀವಿಗಳೆಲ್ಲವೂ ಮನುಷ್ಯನ ಬದುಕಿಗೆ ಪೂರಕವಾಗಿದ್ದು, ಅದರಲ್ಲಿ ಪರಿಸರವು ಮುಖ್ಯವಾಗುತ್ತದೆ. ಪರಿಸರಕ್ಕೆ ಮಾನವನ ಅಗತ್ಯವಿಲ್ಲ. ಆದರೆ ಮಾನವನಿಗೆ ಪರಿಸರ ಅತಿ ಮುಖ್ಯವಾಗುತ್ತದೆ ಎಂಬುದನ್ನು ನಾವೆಲ್ಲರೂ ಅರ್ಥೈಸಿಕೊಳ್ಳಬೇಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸುಮಾರು 600 ಮರಗಳನ್ನು ನೆಟ್ಟು ಪೋಷಿಸಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚನ್ನರಾಯಪಟ್ಟಣ ಘಟಕದ ಘಟಕ ವ್ಯವಸ್ಥಾಪಕ ಅಲೀಮುಲ್ಲಾಖಾನ್ ಮಾತನಾಡಿದರು. ಸಂಚಾರ ನಿಯಂತ್ರಕ ಪ್ರಕಾಶ್, ಸ್ವಚ್ಛತಾ ಸಿಬ್ಬಂದಿ ತಿಮ್ಮಯ್ಯ ಚನ್ನರಾಯಪಟ್ಟಣ ಲಯನ್ಸ್ ಕ್ಲಬ್ ಅಧ್ಯಕ್ಷ ಏ.ಗಿರೀಶ್, ಕಾರ್ಯದರ್ಶಿ ಗೋವಿಂದರಾಜು, ಖಜಾಂಚಿ ಡಿ.ಕೆ.ಮಂಜುನಾಥ್, ರಂಗಸ್ವಾಮಿ ಮತ್ತಿತರರು ಭಾಗವಹಿಸಿದ್ದರು.