ತಾಯಂದಿರ ಹೆಸರಿನಲ್ಲಿ ಗಿಡನೆಟ್ಟ ವಿದ್ಯಾರ್ಥಿಗಳು: ತಗ್ಗಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ

Plantation program Mandya
Published on

ಮಂಡ್ಯ: ತಾಲೂಕಿನ ತಗ್ಗಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮೇರಾ ಯುವ ಭಾರತ್, ಅನನ್ಯ ಹಾರ್ಟ್ ಸಂಸ್ಥೆ, ಸರ್ಕಾರಿ ಪದವಿ ಪೂರ್ವ ಕಾಲೇಜಿ(ತಗ್ಗಹಳ್ಳಿ ಪ್ರೌಢಶಾಲೆ ವಿಭಾಗ)ನಲ್ಲಿ ವಿದ್ಯಾರ್ಥಿಗಳು ತಮ್ಮ ತಾಯಿ ಹೆಸರಲ್ಲಿ ಒಂದು ವೃಕ್ಷ ನೆಡುವ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಭಾರ ಪ್ರಾಂಶುಪಾಲೆ ಪ್ರತಿಮಾ ಮಾತನಾಡಿ, ಗಿಡ ನೆಟ್ಟು ಪೋಷಣೆ ಮಾಡುವುದರಿಂದ ಮುಂದಿನ ಪೀಳಿಗೆಯ ಉಳಿವಿಗೆ ನಾಂದಿಯಾಡಿದಂತಾಗುತ್ತದೆ. ಜತೆಗೆ ಸ್ವಚ್ಚ ಪರಿಸರ ನಮ್ಮದಾಗಿರುತ್ತದೆ. ಕಾಡು ಬೆಳೆಸಿ ನಾಡು ಉಳಿಸಿಕೊಳ್ಳುವ ಕಡೆ ಎಲ್ಲರೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಮರಗಳು ಇರುವ ಕಡೆ ಉತ್ತಮ ಗಾಳಿ ಬರುತ್ತದೆ. ವಾಹನ ಸವಾರರಿಗೂ ಇದು ಅನುಕೂಲವಾಗಿದ್ದು, ಮರಗಳ ನೆರಳಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿಕೊಳ್ಳಲು ಸಹಕಾರಿಯಾಗಿದೆ. ಶಾಲಾ ಕಾಲೇಜಿನಲ್ಲಿ ಮರಗಿಡಗಳು ಇದ್ದರೆ ಓದುವುದಕ್ಕೆ ಚೆಂದದ ಪರಿಸರ ನಮ್ಮದಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನನ್ಯ ಆರ್ಟ್ಸ್ ಸಂಸ್ಥೆ ಅಧ್ಯಕ್ಷ ಬಿ.ಎಸ್.ಅನುಪಮಾ ಮಾತನಾಡಿ, ತಾಯಿಯ ಮಹತ್ವ ಅನನ್ಯ. ಈ ಹಿನ್ನೆಲೆಯಲ್ಲಿ ಅವರ ಹೆಸರಿನಲ್ಲಿ ಗಿಡ ನೆಡಲಾಗುತ್ತಿದೆ. ಪ್ರತಿಯೊಬ್ಬರು ಗಿಡ ನೆಟ್ಟು ಪೋಷಣೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಇದು ಉತ್ತಮ ಪರಿಸರಕ್ಕೆ ಕೊಡುವ ಕೊಡುಗೆ ಎಂದು ಅಭಿಪ್ರಾಯ ಪಟ್ಟರು.

ಶಿಕ್ಷಕರಾದ ಮುತ್ತುರಾಮಯ್ಯ, ನಾಸೀಮಾ, ಮಂಜುಳಾ, ಕಾರ್ಯಕ್ರಮ ಸಂಯೋಜಕರಾದ ಹರ್ಷ, ಅಭಿಲಾಷ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net